108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಉದ್ಘಾಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ 108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರದ ಆರೋಗ್ಯ ಸೇವೆಯನ್ನು ಪ್ರಾರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತ್ವರಿತ  ಗತಿಯಲ್ಲಿ ಚಿಕಿತ್ಸೆ ದೊರೆಯಬೇಕು. ಈ ದಿಸೆಯಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಆರೋಗ್ಯ ಸೇವೆ ದೊರೆಯಲು ಈ ಕೇಂದ್ರ ಅತ್ಯಂತ ಸಹಕಾರಿಯಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 18 ವರ್ಷಗಳಿಂದ 108 ಆ್ಯಂಬುಲೆನ್ಸ್ ಸೇವೆಯನ್ನು ನೀಡಲಾಗುತ್ತಿದೆ. 2025-26 ರ ಬಜೆಟ್ ಘೋಷಣೆಯಂತೆ 108 ತುರ್ತು ಆಂಬುಲೆನ್ಸ್ ಸೇವೆಗಳ ನಿರ್ವಹಣೆಗೆ ಮೀಸಲಾದ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ಲಭಿಸುವಂತಾಗುವುದು ಮುಖ್ಯ. ಸರ್ಕಾರದ ಗುಣಮಟ್ಟದ ಆರೋಗ್ಯ ಸೇವೆಯಿಂದ ಜನರ ವಿಶ್ವಾಸ ಹೆಚ್ಚುತ್ತದೆ ಎಂದರು.

ರಸ್ತೆ ಅಪಘಾತಗಳು, ಹೆರಿಗೆ, ಹೃದಯರೋಗಿಗಳು ಸೇರಿದಂತೆ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಅತ್ಯವಶ್ಯವಾಗಿದ್ದು, ಆ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ದೊರೆತರೆ ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಗೋಲ್ಡನ್ ಅವರ್ ನಲ್ಲಿ ದೊರೆತ ಚಿಕಿತ್ಸೆಯಲ್ಲಿ ಸುಮಾರು ಶೇ.80 ರಷ್ಟು ಜನರು ಬದುಕುಳಿದಿದ್ದಾರೆ. ಜೀವನ್ಮರಣದ ಹೋರಾಟದಲ್ಲಿ  ತುರ್ತು ಚಿಕಿತ್ಸೆಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು‌ ತಿಳಿಸಿದರು.

ಬೆಂಗಳೂರು ನಗರದಲ್ಲಿ 65 ರಿಂದ 70 ಆ್ಯಂಬುಲೆನ್ಸ್ ಗಳಿದ್ದು, ತುರ್ತು ಚಿಕಿತ್ಸೆಗೆ ನೆರವಾಗಿವೆ. 108 ಆ್ಯಂಬುಲೆನ್ಸ್ ವ್ಯವಸ್ಥೆ ಖಾಸಗಿಯವರ ಕೈಯಲ್ಲಿದ್ದಾಗ, ಅವರ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಿರಲಿಲ್ಲ. ಆದರೆ ಪ್ರಸ್ತುತ ಈ ವ್ಯವಸ್ಥೆ ಸರ್ಕಾರದ ಅಧೀನದಲ್ಲಿರುವುದರಿಂದ ಈ ಸೇವೆಯ ಹೊಣೆಗಾರಿಕೆ ಹೆಚ್ಚಿದೆ ಎಂದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಮ್ಮ ಆರೋಗ್ಯ ಸಮಸ್ಯೆಗೆ ನೆರವು ಕೇಳಿ ಬರುವ ಜನರು ಸರ್ಕಾರದ ಧನಸಹಾಯವನ್ನು ಬಯಸುತ್ತಾರೆ. ಆದರೆ ಜನರು ಖಾಸಗಿ ಆಸ್ಪತ್ರೆಗೆ ಹೋಗಿ, ಸರ್ಕಾರದಿಂದ ಧನಸಹಾಯ ಕೇಳುವ ಬದಲು, ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯ ವ್ಯವಸ್ಥೆಯಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಆರೊಗ್ಯ ವ್ಯವಸ್ಥೆಯನ್ನು ನೀಡಲು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!