SIR ಜಾಗೃತಿ ಹಾಗೂ ಮತದಾರರ ಪಟ್ಟಿಯ ಸಂರಕ್ಷಣೆ ಕಾರ್ಯಕ್ಕೆ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ದೇವನಹಳ್ಳಿ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ಹಾಗೂ ಜಿಬಿಎ ಚುನಾವಣೆ ಸಂಬಂಧ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಗಂಭೀರವಾಗಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ದೇವನಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, “SIR ಮತ್ತು GBA ಚುನಾವಣೆ ಕುರಿತು ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ SIR ಮ್ಯಾಪಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕು” ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪ್ರತಿಯೊಬ್ಬ ಮತದಾರರ ಮತವನ್ನು ಉಳಿಸುವ ಕೆಲಸ ಮಾಡಬೇಕಿದೆ. ಮತದಾರರ ದಾಖಲಾತಿಗಳನ್ನು ಸಂಗ್ರಹಿಸಿ ಒದಗಿಸುವ ಜವಾಬ್ದಾರಿಯನ್ನು ಪಕ್ಷದ ಮುಖಂಡರು ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.

ಬಿಎಲ್ಒಗಳು ಯಾವುದೇ ಪಕ್ಷಪಾತ ಅಥವಾ ದ್ವೇಷದ ಮನೋಭಾವವಿಲ್ಲದೆ ಸಹಕಾರ ನೀಡಬೇಕು. ರಾಜಕೀಯ ಪಕ್ಷಗಳಿಗೆ ಬಿಎಲ್ಒಗಳು ತರಬೇತಿ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷವೂ ತನ್ನ ಕಾರ್ಯಕರ್ತರಿಗೆ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಿದೆ ಎಂದು ಹೇಳಿದರು.

“ಎಲ್ಲ ಸಚಿವರು ಹಾಗೂ ಶಾಸಕರು ಬೇರೆ ಕೆಲಸಗಳನ್ನು ಬಿಟ್ಟು ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದೇನೆ” ಎಂದು ಡಿಸಿಎಂ ಹೇಳಿದರು.

ಸಭೆಗೆ ಗೈರಾಗಿದ್ದ ಪದಾಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ ಅವರು, “ಇಂದು ಸಭೆಗೆ ಹಾಜರಾಗದ ಪದಾಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಲು ಹೈಕಮಾಂಡ್ ಸೂಚಿಸಿದೆ. ಪಕ್ಷ ಸಂಘಟನೆಯಲ್ಲಿ ಆಸಕ್ತಿ ತೋರದವರನ್ನು ಪಕ್ಷದಿಂದಲೇ ದೂರ ಮಾಡಲಾಗುವುದು” ಎಂದು ಸ್ಪಷ್ಟಪಡಿಸಿದರು.

SIR ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಲಾಗುವುದು ಎಂದೂ ಹೇಳಿದರು.

ಇದೇ ವೇಳೆ ದೆಹಲಿಗೆ ತೆರಳುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಹೋಗಲೇ ಬೇಕಲ್ವಪ್ಪ, ಹೋಗ್ತಿದ್ದೀನಿ” ಎಂದು ಹಾಸ್ಯಚಟಾಕಿ ಉತ್ತರ ನೀಡಿದರು. ಅವರು ಸಂಜೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!