
ಬೆಂಗಳೂರು ಗ್ರಾಮಾಂತರ: ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ (KWINCity) ಯೋಜನೆಗೆ ಮೊದಲ ಬೃಹತ್ ಹೂಡಿಕೆ ದೊರೆತಿದ್ದು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ ₹1,200 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಹಾಗೂ ಟೊಯೋಟಾ ಕಂಪನಿಯ ಸಿಒಒ ಮತ್ತು ವಿಶೇಷ ಯೋಜನೆಗಳ ನಿರ್ದೇಶಕ ಸುದೀಪ್ ದಳವಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಯೋಜನೆಯಡಿ ಟೊಯೋಟಾ ಕಂಪನಿ ಕ್ವಿನ್ ಸಿಟಿಯಲ್ಲಿ ಜಾಗತಿಕ ಮಟ್ಟದ ‘ಬಿಝ್‌ಇಂಟೆಲ್ ಹಬ್’ ಸ್ಥಾಪಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ₹1,200 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 200 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
ಇಲ್ಲಿ ವಾಹನಗಳ ತಯಾರಿಕೆ, ಪರೀಕ್ಷೆ ಹಾಗೂ ಆಧುನಿಕ ವಾಹನ ತಯಾರಿಕಾ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸ್ಥಾವರಗಳನ್ನು ಆರಂಭಿಸಲು ಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಹೂಡಿಕೆ ಮಾಡಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. “ಈ ರೀತಿಯ ಜಾಗತಿಕ ಮಟ್ಟದ ಘಟಕ ಸ್ಥಾಪನೆಯಾಗುತ್ತಿರುವುದು ವಿಶ್ವದಲ್ಲೇ ಮೊದಲ ಪ್ರಯತ್ನ ಎನ್ನುವುದು ಸಂತಸದ ಸಂಗತಿ” ಎಂದು ಹೇಳಿದರು.
ಕ್ವಿನ್ ಸಿಟಿಯಲ್ಲಿ ಹೂಡಿಕೆ ಮಾಡಲು ಈಗಾಗಲೇ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಆಸಕ್ತಿ ತೋರಿದ್ದು, ಅವುಗಳೊಂದಿಗೆ ಕೂಡ ಶೀಘ್ರದಲ್ಲೇ ಒಡಂಬಡಿಕೆಗಳಿಗೆ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಲಾಗಿದೆ.
ಒಟ್ಟು 5,800 ಎಕರೆಯಲ್ಲಿ ಹಂತಹಂತವಾಗಿ ನಿರ್ಮಾಣವಾಗಲಿರುವ ಕ್ವಿನ್ ಸಿಟಿ ಯೋಜನೆಯ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪ್ರಗತಿಯಲ್ಲಿವೆ. ಯೋಜನೆಗೆ ಒಟ್ಟು ₹48 ಸಾವಿರ ಕೋಟಿ ಹೂಡಿಕೆ ಆಗಲಿದ್ದು, ಸುಮಾರು 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯೆಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಟೊಯೋಟಾ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಯೋಶಿನೋರಿ ನೋರಿಟಾಕೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.