
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಅಕ್ಟೋಬರ್ 25ರಂದು ನಿಗದಿಪಡಿಸಿದ್ದ ರಜೆಯನ್ನು ಬದಲಿಸಿ, ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಲು ಸರ್ಕಾರ ತೀರ್ಮಾನಿಸಿದೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರ ಭಾನುವಾರದಂದು ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಯಂತಿಯನ್ನು ‘ಶೀಗಿ ಹುಣ್ಣಿಮೆ’ ದಿನದಂದೇ ಆಚರಿಸುವ ಸಂಪ್ರದಾಯವಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 26ರಂದು ಶೀಗಿ ಹುಣ್ಣಿಮೆ ಇರುವುದರಿಂದ ಅಂದೇ ಜಯಂತಿ ಆಚರಣೆ ಹಾಗೂ ರಜೆ ನೀಡಲು ಸರ್ಕಾರ ಆದೇಶಿಸಿದೆ.
ಈ ರಜೆ ನೆಗೋಶಿಯೇಬಲ್ ಇನ್ಸ್‌ಟ್ರುಮೆಂಟ್ ಆಕ್ಟ್, 1881ರ ಸೆಕ್ಷನ್ 25ರ ಅನ್ವಯವೂ ಅನ್ವಯವಾಗಲಿದ್ದು, ಅ.26ರಂದು ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳ ಜತೆಗೆ ಬ್ಯಾಂಕ್‌ಗಳಿಗೂ ರಜೆ ಇರಲಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಮೂರು ದಿನ ಸರಣಿ ರಜೆ
ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲಾವಣೆಯಿಂದ ಅಕ್ಟೋಬರ್ 24ರಿಂದ 26ರವರೆಗೆ ಸತತ ಮೂರು ದಿನ ರಜೆ ದೊರೆಯಲಿದೆ.
ಅ.24: ನಾಲ್ಕನೇ ಶನಿವಾರ – ರಜೆ
ಅ.25: ಭಾನುವಾರ – ರಜೆ
ಅ.26: ಸೋಮವಾರ – ಮಹರ್ಷಿ ವಾಲ್ಮೀಕಿ ಜಯಂತಿ – ಸಾರ್ವತ್ರಿಕ ರಜೆ