ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

ಯಲಹಂಕ–ಹಿಂದೂಪುರ ಹೆದ್ದಾರಿ ಹಾಗೂ ಚಿಕ್ಕಬಳ್ಳಾಪುರ–ತುಮಕೂರು ಮಾರ್ಗಗಳನ್ನು ಸಂಪರ್ಕಿಸುವ ಪ್ರಮುಖ ವೃತ್ತ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿರುವುದರಿಂದ ದುರ್ವಾಸನೆ ಹರಡಿ, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್‌ಹೋಲ್‌ನಿಂದ ನಿರಂತರವಾಗಿ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆ ಬದಿಯಲ್ಲಿ ಅಸ್ವಚ್ಛ ವಾತಾವರಣ ನಿರ್ಮಾಣವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರಮುಖ ವೃತ್ತದಲ್ಲೇ ಈ ರೀತಿಯ ಅವ್ಯವಸ್ಥೆ ಮುಂದುವರಿದಿರುವುದು ನಗರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಮ್ಯಾನ್‌ಹೋಲ್ ಸ್ವಚ್ಛಗೊಳಿಸಿ, ಒಳಚರಂಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!