
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕು ಮೂಲದ ವಿಜಯಕುಮಾರ್ (24) ಬಂಧಿತ ಆರೋಪಿ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 7 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣಗಳಲ್ಲಿ 65 ಗ್ರಾಂ ತೂಕದ ಚಿನ್ನದ ಚೈನ್, ಮೂರು ಜೊತೆ ಕಿವಿಯೋಲೆಗಳು ಹಾಗೂ ಉಂಗುರ ಸೇರಿದಂತೆ ವಿವಿಧ ಆಭರಣಗಳು ಸೇರಿವೆ.

ಕಳ್ಳತನ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿರುವುದು ಪೊಲೀಸರ ಕಾರ್ಯಾಚರಣೆಯ ಪ್ರಮುಖ ಸಾಧನೆಯಾಗಿದೆ.
ವಿಜಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಯ ವಿರುದ್ಧ BNS ಕಾಯ್ದೆಯ ಕಲಂ 303(2), 331(3), 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದವು.