ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಜಕೀಯವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಕನ್ಯಾಘಟ್ಟ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ವೇದಿಕೆಯಲ್ಲಿ ಮಾತನಾಡಿದ ಅವರು, ನಮ್ಮ ಮುಂದೆ ಬರಗಾಲ ಬಂದಿದೆ. ಅತ್ಯಂತ ತೀವ್ರ ಬರಗಾಲವನ್ನು ಎದುರಿಸುತ್ತಿದ್ದೇವೆ. 2023 ರಲ್ಲಿ ಕೇಂದ್ರ ಸರ್ಕಾರ ರೈತರಿಗೆ ಕೊಡಬೇಕಾದ ಅನುದಾನವನ್ನು ಕೊಟ್ಟಿಲ್ಲ. ನಾವು ಕೋರ್ಟ್ ಮೂಲಕ ತಂದು ರೈತರಿಗೆ ಕೊಟ್ಟಿದ್ದೇವೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇವರ ಕೃಪೆಯಿಂದ ಮತ್ತೆ ನನಗೆ ಸಚಿವ ಸ್ಥಾನ ಸಿಕ್ಕಿದೆ. ನೀರಾವರಿ ವಿಚಾರದಲ್ಲಿ ಅನೇಕ ಸವಾಲುಗಳಿವೆ. ನಿಮ್ಮ ಆಶೀರ್ವಾದ ಇರಲಿ. ಚುಂಚನಗಿರಿ ಕ್ಷೇತ್ರ ಆಲದಮರದ ರೀತಿ ಬೆಳೆದಿದೆ. ಮಠವನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಸಹಕಾರದಿಂದ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಅಧಿಕಾರ ದೊರಯಲಿದೆ. ಮತ್ತೆ 2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮತ್ತೆ ಡಿ.ಕೆ. ಶಿವಕುಮಾರ್ ರಾಜ್ಯದ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದರು.

ಕೊನೆಯಲ್ಲಿ, ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ ಎಂದು ಸಚಿವರು ಕರೆ ನೀಡಿದರು.

ವೇದಿಕೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜೀ, ಸಚಿವರಾದ ಬೈರತಿ ಸುರೇಶ್, ಶಾಸಕರುಗಳಾದ ಶರತ್ ಬಚ್ಚೇಗೌಡ, ಉದಯ್, ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿಗೌಡ, ವಿಶ್ವಾನಾಥ್, ದಿನೇಶ್ ಗೂಳಿಗೌಡ, ಉದ್ಯಮಿ ಸ್ಟಾರ್ ಚಂದ್ರು, ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!