
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.
ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಕ್ಯಾಂಟರ್ ಬರುತ್ತಿದ್ದ ವೇಳೆ ಕೊಡಿಪಾಳ್ಯ ಬಳಿಯ ತಿರುವಿನಲ್ಲಿ ಘಟನೆ ಸಂಭವಿಸಿದೆ. ತಿರುವಿನ ಸಮೀಪ ಹಂಪ್ ಅಳವಡಿಸಿರುವುದು ಹಾಗೂ ವಾಹನ ಸವಾರರಿಗೆ ಅದು ಸರಿಯಾಗಿ ಗೋಚರಿಸದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಂಪ್ ಇರುವ ಬಗ್ಗೆ ಮುನ್ನೆಚ್ಚರಿಕೆ ಸೂಚನಾ ಫಲಕವಾಗಲಿ, ರಸ್ತೆಯ ಮೇಲೆ ಸ್ಪಷ್ಟ ಗುರುತುಗಳಾಗಲಿ ಇಲ್ಲದಿರುವುದರಿಂದ ವಾಹನಗಳು ವೇಗ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ತಿರುವಿನಲ್ಲಿ ಕ್ಯಾಂಟರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕ್ಯಾಂಟರ್ ಪಲ್ಟಿಯಾದ ಪರಿಣಾಮ ಕೆಲಕಾಲ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅದೃಷ್ಟವಶಾತ್ ಈ ವೇಳೆ ಯಾವುದೇ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿಲ್ಲ. ಅಪಘಾತದಿಂದ ರಸ್ತೆಬದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಿರುವಿನ ಮುನ್ನವೇ ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ ಅಗತ್ಯ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯ ರಸ್ತೆಯಾಗಿರುವುದರಿಂದ ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ತಿರುವಿನಲ್ಲಿರುವ ಹಂಪ್ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಕೊರತೆಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.