
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಕೆ.ಎಚ್ ಮುನಿಯಪ್ಪ ಮಹತ್ವದ ರಾಜಕೀಯ ಹಾಗೂ ಅನ್ನಭಾಗ್ಯ ಯೋಜನೆ ಸಂಬಂಧಿತ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಗೆ ತೆರಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಾನು ದೆಹಲಿಗೆ ಹೋಗುತ್ತಿಲ್ಲ. ಅವರಿಬ್ಬರನ್ನು(ಸಿಎಂ, ಡಿಸಿಎಂ) ಕರೆದಿದ್ದಾರೆ, ಅವರು ಹೋಗಿ ಬರುತ್ತಾರೆ” ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ತ್ಯಾಗ ಮಾಡುವ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಎಲ್ಲಕ್ಕೂ ತಯಾರಿದ್ದೇನೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾವು ಬದ್ದರಾಗಿದ್ದೇವೆ” ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪೂರೈಕೆ ವಿಳಂಬವಾಗಿರುವ ಕುರಿತು ಮಾತನಾಡಿದ ಸಚಿವರು, ಯಾವುದೇ ರೀತಿಯ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದರು. “ಕೇಂದ್ರ ಸರ್ಕಾರದಿಂದ 3 ಕೆಜಿ, ರಾಜ್ಯ ಸರ್ಕಾರದಿಂದ 3 ಕೆಜಿ ರಾಗಿ ನೀಡುತ್ತಿದ್ದೇವೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 4 ಕೆಜಿ ಅಕ್ಕಿಯನ್ನೂ ನೀಡಲಾಗುತ್ತಿದೆ. ಒಟ್ಟಾರೆ 10 ಕೆಜಿ ಆಹಾರಧಾನ್ಯ ವಿತರಣೆ ಮಾಡುತ್ತಿದ್ದೇವೆ” ಎಂದರು.
ರಾಜ್ಯದಲ್ಲಿ ರಾಗಿ ಸಂಗ್ರಹ ಹೆಚ್ಚು ಇರುವ ಹಿನ್ನೆಲೆ ಈ ತಿಂಗಳಿನಿಂದಲೇ ಅದರ ವಿತರಣೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ ಅವರು, “ರಾಗಿ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿರಬಹುದು. ತಡವಾದರೂ ಆ ತಿಂಗಳಿಗೆ ನೀಡಬೇಕಾದ ಆಹಾರಧಾನ್ಯವನ್ನು ಖಚಿತವಾಗಿ ನೀಡುತ್ತೇವೆ” ಎಂದು ಭರವಸೆ ನೀಡಿದರು.
ಇಂದಿರಾ ಕಿಟ್ ವಿತರಣೆ ಆಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ತಿಂಗಳು ಮಿಸ್ ಆಗುವುದಿಲ್ಲ, ಕಿಟ್‌ಗಳನ್ನು ಖಚಿತವಾಗಿ ವಿತರಿಸುತ್ತೇವೆ” ಎಂದು ಹೇಳಿದರು.