
ದೊಡ್ಡಬಳ್ಳಾಪುರ: ತ್ರಿಬಲ್ ರೈಡಿಂಗ್‌ನಲ್ಲಿ ತೆರಳುತ್ತಿದ್ದ ಬೈಕ್ ಹಾಗೂ ಹಾಲಿನ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಮಧುರೆ ಹೋಬಳಿಯ 11ನೇ ಮೈಲಿ ಬಳಿ ನಡೆದಿದೆ.
ಮೃತ ಯುವಕನನ್ನು ನೆಲಮಂಗಲದ ಚಿಕ್ಕಪುಟ್ಟಯ್ಯನಪಾಳ್ಯದ ತುರುಣ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ವರ್ಷಿತ್ (25) ಹಾಗೂ ಮಧುಸೂದನ್ (22) ಎಂದು ತಿಳಿದುಬಂದಿದೆ.
ಒಂದೇ ಬೈಕ್‌ನಲ್ಲಿ ಮೂವರು ಯುವಕರು ತ್ರಿಬಲ್ ರೈಡಿಂಗ್ ಮಾಡಿಕೊಂಡು ಇಶಾ ಫೌಂಡೇಶನ್‌ಗೆ ತೆರಳಿ, ಅಲ್ಲಿಂದ ನೆಲಮಂಗಲದ ಕಡೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ 11ನೇ ಮೈಲಿ ಬಳಿ ಬೈಕ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ತುರುಣ್ ಸ್ಥಳದಲ್ಲೇ ಮೃತಪಟ್ಟಿದ್ದು, ವರ್ಷಿತ್ ಹಾಗೂ ಮಧುಸೂದನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಹಾಗೂ ಗಾಯಾಳುಗಳು ನೆಲಮಂಗಲ ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ಹಾಗೂ ಮೃತರ ಗುರುತು ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ತನಿಖೆ ಮುಂದುವರಿಸಿದ್ದಾರೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.