ಬೈಕ್‌–ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ದೊಡ್ಡಬಳ್ಳಾಪುರ: ತ್ರಿಬಲ್‌ ರೈಡಿಂಗ್‌ನಲ್ಲಿ ತೆರಳುತ್ತಿದ್ದ ಬೈಕ್‌ ಹಾಗೂ ಹಾಲಿನ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಮಧುರೆ ಹೋಬಳಿಯ 11ನೇ ಮೈಲಿ ಬಳಿ ನಡೆದಿದೆ.

ನೆಲಮಂಗಲದಿಂದ ದೊಡ್ಡಬಳ್ಳಾಪುರದ ಕಡೆಗೆ ಹಾಲಿನ ಕ್ಯಾಂಟರ್ ಬರುತ್ತಿದ್ದರೆ, ಮತ್ತೊಂದೆಡೆ ದೊಡ್ಡಬಳ್ಳಾಪುರದಿಂದ ನೆಲಮಂಗಲದ ಕಡೆಗೆ ಮೂವರು ಸವಾರರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ 11ನೇ ಮೈಲಿ ಬಳಿ ಎರಡೂ ವಾಹನಗಳ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಬೈಕ್‌ನಲ್ಲಿದ್ದ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳು ನೆಲಮಂಗಲ ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ಹಾಗೂ ಮೃತರ ಗುರುತು ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ತನಿಖೆ ಮುಂದುವರಿಸಿದ್ದಾರೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!