ಪಿಎಂ ಕಿಸಾನ್ ಕಂತಿಗೆ ಇ-ಕೆವೈಸಿ ಅಡ್ಡಿ: ಬೆಂಗಳೂರು ಗ್ರಾಮಾಂತರದಲ್ಲಿ 69,020 ರೈತರ ಇ-ಕೆವೈಸಿ ಬಾಕಿ: ಅಕ್ಟೋಬರ್ ಕಂತು ಪಡೆಯಲು ತಕ್ಷಣ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು ಗ್ರಾಮಾಂತರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿರುವ 23ನೇ ಕಂತಿನ ಹಣ ಪಡೆಯಲು ಜಿಲ್ಲೆಯ 69,020 ರೈತರು ಇನ್ನೂ ಇ-ಕೆವೈಸಿ (e-KYC) ಪೂರ್ಣಗೊಳಿಸಬೇಕಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಹಣ ಜಮೆಯಾಗುವ ಪ್ರಕ್ರಿಯೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅರ್ಹ ರೈತರು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ತಲುಪಿಸುವ ಉದ್ದೇಶದಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ನಕಲಿ ಫಲಾನುಭವಿಗಳನ್ನು ತಡೆಗಟ್ಟುವುದು, ಮೃತಪಟ್ಟ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಹಾಗೂ ಅರ್ಹ ರೈತರ ಖಾತೆಗೆ ಮಾತ್ರ ಹಣ ವರ್ಗಾವಣೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಜತೆಗೆ ಇದೀಗ ಬಯೋಮೆಟ್ರಿಕ್ ಹಾಗೂ ಮುಖ ದೃಢೀಕರಣದ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿದ್ದರೂ, ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಇ-ಕೆವೈಸಿಯನ್ನು ಪ್ರತ್ಯೇಕವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ದೊಡ್ಡಬಳ್ಳಾಪುರದಲ್ಲೇ 22,490 ರೈತರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಫ್ರೂಟ್ಸ್ ಐಡಿಯಲ್ಲಿ ನೋಂದಣಿಯಾಗಿರುವ ಸುಮಾರು 1.10 ಲಕ್ಷ ರೈತರ ಪೈಕಿ 69,020 ಮಂದಿಯ ಇ-ಕೆವೈಸಿ ಬಾಕಿ ಉಳಿದಿದೆ.

ತಾಲೂಕು| ಇ-ಕೆವೈಸಿ ಬಾಕಿ ಇರುವ ರೈತರು
ದೇವನಹಳ್ಳಿ| 15,074
ದೊಡ್ಡಬಳ್ಳಾಪುರ| 22,490
ನೆಲಮಂಗಲ| 16,003
ಹೊಸಕೋಟೆ| 15,453
ಒಟ್ಟು| 69,020

ತಾಲೂಕುವಾರು ಅಂಕಿ-ಅಂಶಗಳ ಪ್ರಕಾರ ದೊಡ್ಡಬಳ್ಳಾಪುರದಲ್ಲಿ 22,490 ರೈತರ ಇ-ಕೆವೈಸಿ ಬಾಕಿ ಉಳಿದಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಸಂಖ್ಯೆಯಾಗಿದೆ. ನೆಲಮಂಗಲದಲ್ಲಿ 16,003, ಹೊಸಕೋಟೆಯಲ್ಲಿ 15,453 ಹಾಗೂ ದೇವನಹಳ್ಳಿಯಲ್ಲಿ 15,074 ರೈತರ ಇ-ಕೆವೈಸಿ ಪೂರ್ಣಗೊಳ್ಳಬೇಕಿದೆ.

ಸಿಎಸ್‌ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್

ಇ-ಕೆವೈಸಿ ಬಾಕಿ ಇರುವ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಪಿಎಂ ಕಿಸಾನ್ ಮೊಬೈಲ್ ಆ್ಯಪ್‌ ಮೂಲಕ ಮುಖ ದೃಢೀಕರಣದ ಮೂಲಕವೂ ರೈತರು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.

ಇ-ಕೆವೈಸಿ ಸಂದರ್ಭದಲ್ಲಿ ಆಧಾರ್ ವಿವರಗಳು ಹಾಗೂ ಯೋಜನೆಯ ಫಲಾನುಭವಿ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅದನ್ನು ಸರಿಪಡಿಸಿಕೊಳ್ಳುವಂತೆಯೂ ಇಲಾಖೆ ಸೂಚಿಸಿದೆ.

ಕೊನೆಯ ಕ್ಷಣದವರೆಗೆ ಕಾಯದಿರಿ

ಜಿಲ್ಲೆಯ ರೈತರಿಗೆ ಈಗಾಗಲೇ ಪಿಎಂ ಕಿಸಾನ್ ಯೋಜನೆಯ 22 ಕಂತುಗಳ ಹಣ ಪಾವತಿಯಾಗಿದ್ದು, 23ನೇ ಕಂತಿನ ಹಣ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಇ-ಕೆವೈಸಿ ಕುರಿತು ಜಾಗೃತಿ ಮೂಡಿಸುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 69,020 ರೈತರ ಇ-ಕೆವೈಸಿ ಇನ್ನೂ ಬಾಕಿ ಇದೆ. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಕಂತಿನ ನೆರವು ಪಡೆಯಲು ಅರ್ಹ ರೈತರು ಯಾವುದೇ ವಿಳಂಬ ಮಾಡದೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಅರ್ಹ ರೈತರು ಯೋಜನೆಯ ಸೌಲಭ್ಯವನ್ನು ಪಡೆಯಲು ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಕಲಾವತಿ ಬಿ.ಜಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!