
ದೊಡ್ಡಬಳ್ಳಾಪುರ: ಖಾಸಗಿ ಕಾಲೇಜಿನ ಸಮೀಪದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಕೆ.ಜಿ. 670 ಗ್ರಾಂ ಗಾಂಜಾ, ಅಂದಾಜು 6 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಹಾಗೂ ಸುಮಾರು 1 ಲಕ್ಷ ರೂ. ಮೌಲ್ಯದ ಪ್ಯಾಷನ್ ಪ್ರೊ ಬೈಕ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಸುಮಾರು 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಯಲಹಂಕ ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದ ಸುರೇಶ್ (34), ದೊಡ್ಡಬಳ್ಳಾಪುರ ಕಸಬಾ ಹೋಬಳಿಯ ರಾಜೀವ್‌ಗಾಂಧಿ ಕಾಲೋನಿ ನಿವಾಸಿ ರೋಹಿತ್ ಕುಮಾರ್ (25) ಹಾಗೂ ಗಂಗಾಧರಪುರ ನಿವಾಸಿ ರೂಪೇಶ್ ಕುಮಾರ್ ಮಂಡಲ್ (30) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಬಿಹಾರ ಹಾಗೂ ಜಾರ್ಖಂಡ್ ಮೂಲದವರಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಗಾಂಜಾ ಎಲ್ಲಿಂದ ತರಲಾಗಿತ್ತು ಮತ್ತು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 446/2026ರಂತೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ವಿ. ಚಂದ್ರಕಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವೆಂಕಟೇಶ್ ಪ್ರಸನ್ನ ಹಾಗೂ ಲಕ್ಷ್ಮೀನಾರಾಯಣ, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಪಿಎಸ್‌ಐ ನಾರಾಯಣಸ್ವಾಮಿ, ಪ್ರೊಬೇಷನರಿ ಪಿಎಸ್‌ಐಗಳಾದ ವಿನಾಯಕ ಪಾಟೀಲ್ ಹಾಗೂ ನಾಗರಾಜು, ಎಎಸ್‌ಐ ರಾಧಾಕೃಷ್ಣ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಂಗನಾಥ್, ಸುನಿಲ್ ಭಾಸಗಿ, ಮಂಜುನಾಥ್, ಚಂದ್ರಶೇಖರ್, ಎಹೆಚ್‌ಸಿ ನಟರಾಜು, ಪಿಸಿ ಪ್ರವೀಣ್ ಹಾಗೂ ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತಂಡದ ಕಾರ್ಯವನ್ನು ಎಸ್‌ಪಿ ಎಂ.ವಿ. ಚಂದ್ರಕಾಂತ್ ಶ್ಲಾಘಿಸಿದ್ದಾರೆ.