
ನವದೆಹಲಿ: 2026ರಲ್ಲಿ ರೂಪುಗೊಳ್ಳುತ್ತಿರುವ “ಸೂಪರ್ ಎಲ್ ನಿನೊ” ಪರಿಣಾಮ ದೇಶದ ಮಾನ್ಸೂನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವನ್ನು ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ವಿವಿಧ ಹವಾಮಾನ ಮಾದರಿಗಳ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ಈ ವರ್ಷ ದೇಶಕ್ಕೆ ದೀರ್ಘಾವಧಿಯ ಸರಾಸರಿಯ ಕೇವಲ ಶೇ.92ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ತಜ್ಞರ ಅಂದಾಜಿನಂತೆ, ಮಧ್ಯ ಹಾಗೂ ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 1.2 ರಿಂದ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಈ ಬೆಳವಣಿಗೆ ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದ್ದು, ಭಾರತದಲ್ಲಿ ಕಡಿಮೆ ಮಳೆ, ತೀವ್ರ ಶಾಖದ ಅಲೆ, ನೀರಿನ ಕೊರತೆ ಹಾಗೂ ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.
ಎಲ್ ನಿನೊ ಎಂದರೇನು?
“ಎಲ್ ನಿನೊ” ಎಂಬುದು ಪೆಸಿಫಿಕ್ ಮಹಾಸಾಗರದ ಮಧ್ಯ ಹಾಗೂ ಪೂರ್ವ ಭಾಗದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಹವಾಮಾನ ವಿದ್ಯಮಾನವಾಗಿದೆ. ಈ ಸಂದರ್ಭ ಸಾಮಾನ್ಯವಾಗಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ದಿಕ್ಕು ಬದಲಿಸುತ್ತವೆ. ಇದರ ಪರಿಣಾಮ ಜಾಗತಿಕ ಹವಾಮಾನ ಮಾದರಿಗಳಲ್ಲಿ ಮಹತ್ವದ ಬದಲಾವಣೆ ಉಂಟಾಗುತ್ತದೆ.
ಮಾನ್ಸೂನ್ ಮೇಲೆ ನೇರ ಪರಿಣಾಮ
ಭಾರತದ ನೈಋತ್ಯ ಮಾನ್ಸೂನ್ ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎಲ್ ನಿನೊ ಪರಿಣಾಮ ಹೆಚ್ಚು ಗೋಚರಿಸುವ ಸಾಧ್ಯತೆ ಇದೆ. ಇದರಿಂದ ಮಾನ್ಸೂನ್ ಗಾಳಿಯ ಬಲ ಕುಗ್ಗಿ, ಅನಿಯಮಿತ ಮಳೆ ಹಾಗೂ ಹಲವು ರಾಜ್ಯಗಳಲ್ಲಿ ಮಳೆಯ ಕೊರತೆ ಉಂಟಾಗಬಹುದು. 2015-16 ರ ಎಲ್ ನಿನೊ ಸಂದರ್ಭದಂತೆಯೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಹವಾಮಾನ ತಜ್ಞರು ಸೂಚಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲು
ಕಡಿಮೆ ಮಳೆ ಹಾಗೂ ಮಣ್ಣಿನ ತೇವಾಂಶದ ಕೊರತೆಯಿಂದ ಅಕ್ಕಿ, ಸೋಯಾಬೀನ್, ಹತ್ತಿ ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಇದರ ಪರಿಣಾಮ ರೈತರ ಆದಾಯದ ಮೇಲೆ ಮಾತ್ರವಲ್ಲದೆ ಗ್ರಾಮೀಣ ಆರ್ಥಿಕತೆಯ ಮೇಲೂ ನೇರವಾಗಿ ಬೀಳಲಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ನೀರಾವರಿ ವ್ಯವಸ್ಥೆಗೂ ತೊಂದರೆಯಾಗಬಹುದು.
ಶಾಖದ ಅಲೆ, ನೀರಿನ ಬಿಕ್ಕಟ್ಟು
ಉತ್ತರ ಭಾರತ ಸೇರಿದಂತೆ ಹಲವು ಪ್ರದೇಶಗಳಲ್ಲಿ ದೀರ್ಘಾವಧಿಯ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಷ್ಣಾಂಶ ಹೆಚ್ಚಳದಿಂದ ವಿದ್ಯುತ್ ಬಳಕೆ ಹೆಚ್ಚುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಆತಂಕವೂ ವ್ಯಕ್ತವಾಗಿದೆ.
ಸಾಗರದ ಬದಲಾವಣೆಗಳೂ ಕಾರಣ
ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನ ಹಾಗೂ ಲವಣಾಂಶದಲ್ಲಿನ ಬದಲಾವಣೆಗಳು ಬರ ಪರಿಸ್ಥಿತಿಯ ತೀವ್ರತೆಯನ್ನು ಶೇ.20ರವರೆಗೆ ಹೆಚ್ಚಿಸಬಹುದು ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಹೀಗಾಗಿ ಸಮುದ್ರದ ಸ್ಥಿತಿಗತಿಗಳು ಭಾರತದ ಹವಾಮಾನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ.
ಲಾ ನಿನಾದಿಂದ ಎಲ್ ನಿನೊಗೆ ಪರಿವರ್ತನೆ
ಪ್ರಸ್ತುತ ಸಮಭಾಜಕ ಪೆಸಿಫಿಕ್ ಪ್ರದೇಶದಲ್ಲಿ ದುರ್ಬಲ ಲಾ ನಿನಾ ಮಾದರಿಯ ಪರಿಸ್ಥಿತಿ ಕಂಡುಬರುತ್ತಿದ್ದು, ಅದು ಕ್ರಮೇಣ ENSO-ತಟಸ್ಥ ಸ್ಥಿತಿಗೆ ಬದಲಾಗುತ್ತಿದೆ. ಆದರೆ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಎಲ್ ನಿನೊ ಪರಿಸ್ಥಿತಿ ಬೆಳೆಯುವ ಸಾಧ್ಯತೆ ಹೆಚ್ಚಿದೆ ಎಂದು ಮಾನ್ಸೂನ್ ಮುನ್ಸೂಚನಾ ಮಾದರಿಗಳು ತಿಳಿಸಿವೆ.
ಮಾನ್ಸೂನ್ ನಿರ್ಧರಿಸುವ ಪ್ರಮುಖ ಅಂಶಗಳು
ಭಾರತದ ಮಳೆಯ ಪ್ರಮಾಣವನ್ನು ENSO (ಎಲ್ ನಿನೊ-ದಕ್ಷಿಣ ಆಂದೋಲನ), IOD (ಹಿಂದೂ ಮಹಾಸಾಗರ ದ್ವಿಧ್ರುವಿ) ಹಾಗೂ MJO (ಮ್ಯಾಡೆನ್-ಜೂಲಿಯನ್ ಆಂದೋಲನ) ಪ್ರಮುಖವಾಗಿ ನಿಯಂತ್ರಿಸುತ್ತವೆ.
ENSO: ಎಲ್ ನಿನೊ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಭಾರತದಲ್ಲಿ ಕಡಿಮೆ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತದೆ. ಲಾ ನಿನಾ ಉತ್ತಮ ಮಳೆಗೆ ಪೂರಕವಾಗಿರುತ್ತದೆ.
IOD: ಹಿಂದೂ ಮಹಾಸಾಗರದ ತಾಪಮಾನ ವ್ಯತ್ಯಾಸವನ್ನು ಸೂಚಿಸುವ ಈ ವ್ಯವಸ್ಥೆಯಲ್ಲಿ ಧನಾತ್ಮಕ ಸ್ಥಿತಿ ನಿರ್ಮಾಣವಾದರೆ ಮಾನ್ಸೂನ್‌ಗೆ ಅನುಕೂಲವಾಗುವ ಸಾಧ್ಯತೆ ಇದೆ.
MJO: ಪ್ರತಿ ೩೦ರಿಂದ ೬೦ ದಿನಗಳಿಗೊಮ್ಮೆ ಪೂರ್ವದತ್ತ ಚಲಿಸುವ ಮೋಡ ಮತ್ತು ಮಳೆಯ ವ್ಯವಸ್ಥೆಯಾಗಿದ್ದು, ಹಿಂದೂ ಮಹಾಸಾಗರದ ಮೇಲೆ ಸಕ್ರಿಯವಾಗಿದ್ದಾಗ ಮಳೆಯ ಚಟುವಟಿಕೆ ಹೆಚ್ಚುತ್ತದೆ.
ಧನಾತ್ಮಕ IOD ಆಶಾಕಿರಣ
ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ತಟಸ್ಥ IOD ಪರಿಸ್ಥಿತಿಗಳು ಮುಂದುವರಿದಿದ್ದರೂ, ಮಾನ್ಸೂನ್ ಅಂತ್ಯದ ವೇಳೆಗೆ ಧನಾತ್ಮಕ IOD ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ. ಇದು ಎಲ್ ನಿನೊದ ಪ್ರತಿಕೂಲ ಪರಿಣಾಮವನ್ನು ಭಾಗಶಃ ತಗ್ಗಿಸಬಹುದಾದ ಅಂಶವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2026ರಲ್ಲಿ ಸೂಪರ್ ಎಲ್ ನಿನೊ ರೂಪುಗೊಳ್ಳುವ ಸಾಧ್ಯತೆ ಭಾರತಕ್ಕೆ ಹವಾಮಾನ, ಕೃಷಿ, ಜಲ ಸಂಪನ್ಮೂಲ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರು ನೀಡಬಹುದು. ಮುಂದಿನ ವಾರಗಳು ಹಾಗೂ ತಿಂಗಳುಗಳಲ್ಲಿ ಎಲ್ ನಿನೊದ ತೀವ್ರತೆ ಮತ್ತು ಮಾನ್ಸೂನ್‌ನ ಬೆಳವಣಿಗೆ ಮೇಲೆ ನಿಕಟ ನಿಗಾ ಅಗತ್ಯವಾಗಿದ್ದು, ರೈತರು ಹಾಗೂ ಸಂಬಂಧಿತ ಇಲಾಖೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

2026ರಲ್ಲಿ ‘ಸೂಪರ್ ಎಲ್ ನಿನೊ’ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಗಳು ಕಳವಳಕಾರಿ. ಇದರ ಪರಿಣಾಮವಾಗಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ಕೃಷಿ ಕ್ಷೇತ್ರ, ಜಲಾಶಯಗಳು, ಅಂತರ್ಜಲ ಮಟ್ಟ ಹಾಗೂ ಕುಡಿಯುವ ನೀರಿನ ಲಭ್ಯತೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ. ರೈತರು ಹವಾಮಾನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆ ಆಯ್ಕೆ, ನೀರಿನ ಸಮರ್ಪಕ ಬಳಕೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಅಗತ್ಯ. ಸರ್ಕಾರವೂ ನೀರಿನ ಸಂರಕ್ಷಣೆ ಹಾಗೂ ಬರ ನಿರ್ವಹಣೆಗೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ. ನಿಂಗರಾಜು ಜಿ.ಕೆ ಹೇಳಿದ್ದಾರೆ.