
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಎಪಿಎಂಸಿ (ಕೃಷಿ ಇಲಾಖೆ) ಹೆಚ್ಚುವರಿ ನಿರ್ದೇಶಕಿ ಪುಷ್ಪ ಡಿ.ಆರ್., ಕೆಆರ್‌ಐಡಿಎಲ್‌ನ ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರವೀಣ್ ಶ್ರೀಹರಿ ಹಾಗೂ ಸಾರ್ವಜನಿಕ ಕಾಮಗಾರಿ ಇಲಾಖೆ (PWD) ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಅವರಿಗೆ ಸಂಬಂಧಿಸಿದ ಒಟ್ಟು 14 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.

20ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮನೆಗಳು, ಕಚೇರಿಗಳು ಮತ್ತು ಇತರೆ ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಮೌಲ್ಯಯುತ ವಸ್ತುಗಳ ಪರಿಶೀಲನೆ ನಡೆಸಿದರು.

ಎಪಿಎಂಸಿ ಹೆಚ್ಚುವರಿ ನಿರ್ದೇಶಕಿ ಪುಷ್ಪ ಡಿ.ಆರ್. ಅವರ ನಿವಾಸದಲ್ಲಿ ಚಿನ್ನಾಭರಣ ಸೇರಿದಂತೆ ದುಬಾರಿ ವಸ್ತುಗಳು ಪತ್ತೆಯಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ವಶಪಡಿಸಿಕೊಂಡ ದಾಖಲೆಗಳು ಮತ್ತು ಆಸ್ತಿ-ಪಾಸ್ತಿಗಳ ಮೌಲ್ಯಮಾಪನ ಕಾರ್ಯ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಭ್ರಷ್ಟಾಚಾರ ಮತ್ತು ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧದ ಪ್ರಕರಣಗಳಲ್ಲಿ ಲೋಕಾಯುಕ್ತ ಇಲಾಖೆ ತನಿಖೆಯನ್ನು ಮುಂದುವರಿಸಿದ್ದು, ದಾಳಿಯಲ್ಲಿ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.