ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ವಿಚಾರ: ಕೊನೆಗೂ ಎಫ್‌ಐಆರ್ ದಾಖಲು

ದೊಡ್ಡಬಳ್ಳಾಪುರ: ಕರ್ತವ್ಯ ನಿರತ ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಸಮವಸ್ತ್ರಕ್ಕೆ ಕೈಹಾಕಿ ತಳ್ಳಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಗರದ ಡಿ.ಕ್ರಾಸ್ ವೃತ್ತದಲ್ಲಿ ನವೆಂಬರ್ 22ರ ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು. ಕಾರು ಚಾಲನೆ ಮಾಡುತ್ತಿದ್ದ ನಾಸಿರ್ ಎಂಬಾತ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನಾಗರಾಜು ಸ್ಥಳಕ್ಕೆ ಧಾವಿಸಿದ್ದಾರೆ. ಬೈಕ್ ಸವಾರನನ್ನು ರಸ್ತೆಯ ಬದಿಗೆ ಕರೆತಂದು, ಕಾರನ್ನು ರಸ್ತೆ ಬದಿಗೆ ನಿಲ್ಲಿಸುವಂತೆ ಚಾಲಕ ನಾಸಿರ್‌ಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ನಾಸಿರ್ ಜೊತೆಗಿದ್ದ ಇದ್ರಿಸ್ ಎಂಬಾತ ಏಕಾಏಕಿ ಪೊಲೀಸ್ ಸಿಬ್ಬಂದಿ ನಾಗರಾಜು ಅವರ ಮೇಲೆ ಹಲ್ಲೆ ನಡೆಸಿ, ಸಮವಸ್ತ್ರಕ್ಕೆ ಕೈಹಾಕಿ ತಳ್ಳಾಡಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸ್ ಸಿಬ್ಬಂದಿ ಮೇಲೆಯೇ ಸಾರ್ವಜನಿಕವಾಗಿ ಹಲ್ಲೆ ನಡೆದಿದ್ದರೂ, ಆರಂಭದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸರು ಕೇವಲ ಎನ್‌ಸಿಆರ್ ದಾಖಲಿಸಿ ಸುಮ್ಮನಾಗಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಗಂಭೀರ ಸ್ವರೂಪದ ಘಟನೆ ನಡೆದಿದ್ದರೂ ಎಫ್‌ಐಆರ್ ದಾಖಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆಯೂ ಎದ್ದಿತ್ತು.

ಕರ್ತವ್ಯ ನಿರತ ಪೊಲೀಸರಿಗೇ ಸಾರ್ವಜನಿಕ ಸ್ಥಳದಲ್ಲಿ ರಕ್ಷಣೆ ಇಲ್ಲದಂತಾದರೆ ಸಾಮಾನ್ಯ ಜನರ ಗತಿಯೇನು? ಪೊಲೀಸ್ ಸಮವಸ್ತ್ರಕ್ಕೆ ಕೈಹಾಕಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಇಲಾಖೆಯೇ ನಿರ್ಲಕ್ಷ್ಯ ವಹಿಸಿದರೆ ಸಾರ್ವಜನಿಕರಿಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂಬ ಚರ್ಚೆ ವ್ಯಾಪಕವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕೊನೆಗೂ ಇಂದು ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ಪೊಲೀಸ್ ಕ್ರಮದ ಬಗ್ಗೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!