Categories: ಲೇಖನ

ಬದಲಾವಣೆ ಜಗದ ನಿಯಮ….ಅದರ ದಿಕ್ಕು ಪ್ರಗತಿಪರವಾದ ನಿಟ್ಟಿನಲ್ಲಿ ಸಾಗುವುದನ್ನು ನಾವು ಪ್ರಜ್ಞಾಪೂರ್ವಕವಾಗಿ ನಿರ್ದೇಶಿಸಬೇಕು

ಬದಲಾವಣೆ ಜಗದ ನಿಯಮ….

ಹೌದು ನಿಜ, ಆದರೆ ಅದರ ದಿಕ್ಕು ಪ್ರಗತಿಪರವಾದ ನಿಟ್ಟಿನಲ್ಲಿ ಸಾಗುವುದನ್ನು ನಾವು ಪ್ರಜ್ಞಾಪೂರ್ವಕವಾಗೀ ನಿರ್ದೇಶಿಸಬೇಕು. ಆಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯ ದಿಕ್ಕಿನಲ್ಲಿ ಇದೆ ಎಂದು ಅರ್ಥ. ಆ ಹಿನ್ನೆಲೆಯಲ್ಲಿ ಈಗಿನ ಕೆಲವು ಬದಲಾವಣೆಗಳನ್ನು ಗಮನಿಸಿ…….

ವಿಶಿಷ್ಟ ಕಾಲಘಟ್ಟದಲ್ಲಿ ನಾವು ನೀವು……..

ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ ಎನ್ನುವ ಗಾಢ ಭಾವನಾತ್ಮಕ ನಂಬಿಕೆ ಸೃಷ್ಟಿಸುತ್ತಾ ಇದ್ದ ವಾತಾವರಣ ಮಾಯವಾಗಿ, ಆಹಾರವನ್ನು ವ್ಯರ್ಥ ಮಾಡಬೇಡಿ, ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ ಎಂಬ ಘೋಷವಾಕ್ಯಗಳನ್ನು ಪ್ರಚಾರ ಮಾಡಬೇಕಾದ ಬದಲಾವಣೆಗೆ ನಾವು ಬಂದಿದ್ದೇವೆ…….

ವರ್ಷದ ಒಂದು ಹಬ್ಬಕ್ಕೆ ಒಂದು ಹೊಸ ಬಟ್ಟೆ ಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿಯಿಂದ ಫ್ಯಾಷನ್ ಡಿಸೈನರ್, ಫ್ಯಾಷನ್ ಟೆಕ್ನಾಲಜಿ ಎಂಬ ಶಿಕ್ಷಣ ಮತ್ತು ಬೃಹತ್ ಉದ್ಯಮಗಳು ತಲೆ ಎತ್ತಿ ಆರ್ಥಿಕತೆಯ ಒಂದು ಭಾಗವಾಗಿರುವ ಹಂತದಲ್ಲಿ ನಾವಿದ್ದೇವೆ…….

ಕಿತ್ತುಹೋದ, ಹಳ್ಳ ಬಿದ್ದ ಕಲ್ಲು ಮಣ್ಣಿನ ನರಕ ಸದೃಶವಾದ ರಸ್ತೆಗಳು, ಆಗಾಗ ಕಾರಣವಿಲ್ಲದೇ ನಿಂತು ಹಠ ಮಾಡಿ ತಳ್ಳಿಸಿಕೊಂಡು ಮುನ್ನಡೆಯುವ ವಾಹನಗಳು ಕೆಲವೇ ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ಟಾರು, ಸಿಮೆಂಟ್, ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಾಡು ಹೊಂದಿ ಅತ್ಯುತ್ತಮ ಜೀವ ಉಳಿಸುವ ಏರ್ ಬ್ಯಾಗ್ ಹೊಂದಿದ ವಾಹನಗಳು, ಸಾಕಷ್ಟು ತಂತ್ರಜ್ಞಾನದ ಸಹಾಯದಿಂದ ವೇಗ ನಿಯಂತ್ರಣ ಸಾಧಿಸುವ ವಾಹನಗಳು ಈಗ ನಮ್ಮ ಮುಂದೆ ಆಯ್ಕೆಗಳಾಗಿವೆ…

ಊರ ಹೊರಗೆ ದೂರದಲ್ಲಿ ಒಂದು ಪಾಳುಬಿದ್ದ ಮನೆ ಅಥವಾ ಗುಡಿಸಲುಗಳಲ್ಲಿ ಹೆಂಡ ಸಾರಾಯಿ ಮಾರಾಟ ಮಾಡಲಾಗುತ್ತಿತ್ತು. ಕುಡಿಯುವವರು ರಾತ್ರಿ ಕತ್ತಲಿನಲ್ಲಿ ಯಾರಿಗೂ ಕಾಣದಂತೆ ಕುಡಿದು ಕಳ್ಳರಂತೆ ಬಚ್ಚಿಟ್ಟುಕೊಂಡು ಮನೆ ಸೇರುತ್ತಿದ್ದರು. ಈಗ ಗಾಂಧಿ ರಸ್ತೆ, ಬಸವ ಮಾರ್ಗ, ಅಂಬೇಡ್ಕರ್ ಬೀದಿ, ವಿವೇಕಾನಂದ ಕಾಲೋನಿಗಳೆಂಬ ಹೆಸರಗಳುಳ್ಳ ಜಾಗದಲ್ಲಿ ಲಕ್ಷ್ಮೀ ಬಾರ್, ವೆಂಕಟೇಶ್ವರ ವೈನ್ನ್, ತಿರುಮಲ ಮದ್ಯದ ಅಂಗಡಿ ಮುಂತಾದ ಹೆಸರು ಇಟ್ಟುಕೊಂಡು ಊರ ಮಧ್ಯೆ ಮಿಣ ಮಿಣ ದೀಪಾಲಂಕಾರ ಮಾಡಿಕೊಂಡು ಬಹಿರಂಗವಾಗಿ ಹೆಂಗಸರು ಗಂಡಸರು ಒಟ್ಟಿಗೆ ಕುಡಿಯುವುದು ಒಂದು ಫ್ಯಾಶನ್ ಎನ್ನುವಲ್ಲಿಗೆ ಬಂದಿದೆ….

ಮೊದಲೆಲ್ಲಾ ಕೇವಲ ವ್ಯಾಪಾರಿಗಳು, ಅಧಿಕಾರಿಗಳು, ರಾಜಕಾರಣಿಗಳು, ಕಾರ್ಮಿಕರು, ವೃತ್ತಿ ನಿರತರು ಮುಂತಾದ ಕೆಲವೇ ಜನ ಬ್ಯುಸಿ ಎಂದು ಹೇಳುತ್ತಿದ್ದರು. ಈಗ ಬಹುತೇಕ ಮನುಷ್ಯರು ಎನಿಸಿಕೊಳ್ಳುವ ಗಂಡು ಹೆಣ್ಣು ಎಲ್ಲರೂ ಸೇರಿ ಪ್ರತಿಯೊಬ್ಬರೂ ಬ್ಯುಸಿಯಾಗಿದ್ದಾರೆ…..

ಹಿಂದೆ ಪೋಲೀಸು, ಜೈಲು, ಕೋರ್ಟ್ ಎಂದರೆ ಜನಕ್ಕೆ ಭಯ ಮತ್ತು ಆತಂಕದ ಜೊತೆಗೆ ಅದು ಕೇವಲ ಕಳ್ಳರು ಸುಳ್ಳುರು, ಮೋಸಗಾರರಿಗೆ ಮಾತ್ರ ಎಂಬ ಅಭಿಪ್ರಾಯವಿತ್ತು. ಈಗ ಅದು ಒಂದು ಪ್ರತಿಷ್ಠೆಯ ವಿಷಯವಾಗಿದೆ…..

ಶಿಕ್ಷಕರು, ವೈದ್ಯರು, ಪತ್ರಕರ್ತರು, ಸ್ವಾಮೀಜಿಗಳು ಏನೇ ಹೇಳಿದರು ಭಯ ಭಕ್ತಿಯಿಂದ ಕೇಳಿಸಿಕೊಂಡು ಅವರು ಹೇಳುವುದೆಲ್ಲಾ ಸತ್ಯ ಎನ್ನುವ ಮನೋಭಾವದಿಂದ ಈಗ ಅವರುಗಳು ಸತ್ಯವನ್ನೇ ಹೇಳಿದರೂ ಅದರ ಬಗ್ಗೆ ‌ಅನುಮಾನ ವ್ಯಕ್ತಪಡಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ….

ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ನಿರಂತರ ಬದಲಾವಣೆಗಳನ್ನು ಕಾಣುತ್ತಾ ಸಾಗುತ್ತಿದ್ದೇವೆ. ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಒಳ್ಳೆಯ – ಪ್ರಗತಿಪರ‌ – ಮಾನವೀಯ ಮೌಲ್ಯಗಳ ಅಳವಡಿಕೆಯ ನಿಟ್ಟಿನಲ್ಲಿ ಇದ್ದರೆ ಸಮಾಜ ಉತ್ತಮ ಗುಣಮಟ್ಟದಲ್ಲಿ ‌ಇರುತ್ತದೆ. ಆ ನಿಟ್ಟಿನಲ್ಲಿ ನಾವು – ನೀವು ಪ್ರಯತ್ನಿಸಬೇಕಾಗಿದೆ…………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

4 hours ago

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

18 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

23 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

1 day ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

2 days ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

2 days ago