ಮುಂಗಾರು ಮಳೆ ಕೊರತೆ, ಭೂಗರ್ಭದ ನೀರಿಗೆ ಭಾರೀ ಹೊಡೆತ: ಜಲಬಿಕ್ಕಟ್ಟಿನ ಮುನ್ಸೂಚನೆ

ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅಂತರ್ಜಲ ಮರುಪೂರಣಗೊಂಡು ನೀರಿನ ಮಟ್ಟ ಏರಿಕೆಯಾಗಬೇಕಾದರೆ, ಈ ಬಾರಿ ಮುಂಗಾರು ಅವಧಿಯಲ್ಲೇ ಅಂತರ್ಜಲ ಮತ್ತಷ್ಟು ಆಳಕ್ಕೆ ಇಳಿದಿರುವುದು ಜಿಲ್ಲೆಗೆ ಎಚ್ಚರಿಕೆಯ ಗಂಟೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ, ಕುಡಿಯುವ ನೀರು, ಪಶುಸಂಗೋಪನೆ ಹಾಗೂ ಕೈಗಾರಿಕಾ ವಲಯಕ್ಕೂ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಕೊಳವೆಬಾವಿಗಳ ನೀರಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ರೈತರು ಬೆಳೆಗಳಿಗೆ ನೀರುಣಿಸಲು ಪರದಾಡುತ್ತಿದ್ದು, ಕೆಲವು ಕಡೆ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳೂ ನೀರಿನ ಕೊರತೆಯಿಂದ ಒಣಗುವ ಹಂತ ತಲುಪಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯ ಮೇಲೂ ಇದರ ಪರಿಣಾಮ ಗೋಚರಿಸುತ್ತಿದೆ.

ಕಳೆದ ವರ್ಷಕ್ಕಿಂತ 2.25 ಮೀಟರ್ ಕುಸಿತ

ಜಿಲ್ಲೆಯ ಅಂತರ್ಜಲ ಅಧ್ಯಯನದ ಪ್ರಕಾರ ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜೂನ್ ವೇಳೆಗೆ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 2.25 ಮೀಟರ್ ಕುಸಿದಿದೆ. 2025ರ ಜೂನ್‌ನಲ್ಲಿ 24.49 ಮೀಟರ್ ಆಳದಲ್ಲಿ ಲಭ್ಯವಿದ್ದ ಅಂತರ್ಜಲ, 2026ರ ಜೂನ್‌ನಲ್ಲಿ 26.74 ಮೀಟರ್ ಆಳಕ್ಕೆ ಇಳಿದಿದೆ. ಅಂದರೆ ನೀರು ಪಡೆಯಲು ಇನ್ನಷ್ಟು ಆಳಕ್ಕೆ ಕೊಳವೆಬಾವಿ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ನೆಲಮಂಗಲ ತಾಲೂಕಿನಲ್ಲಿ ಅತ್ಯಧಿಕ 4.70 ಮೀಟರ್, ಹೊಸಕೋಟೆಯಲ್ಲಿ 2.55 ಮೀಟರ್, ದೇವನಹಳ್ಳಿಯಲ್ಲಿ 1.27 ಮೀಟರ್ ಹಾಗೂ ದೊಡ್ಡಬಳ್ಳಾಪುರದಲ್ಲಿ 0.46 ಮೀಟರ್ ಅಂತರ್ಜಲ ಕುಸಿತ ದಾಖಲಾಗಿದೆ.

ಮೇಗಿಂತ ಜೂನ್‌ನಲ್ಲೇ ಹೆಚ್ಚು ಕುಸಿತ

ಸಾಮಾನ್ಯವಾಗಿ ಮೇ ತಿಂಗಳು ಬೇಸಿಗೆಯ ತೀವ್ರ ಅವಧಿಯಾಗಿದ್ದು, ಜೂನ್ ವೇಳೆಗೆ ಮುಂಗಾರು ಆರಂಭವಾದ ನಂತರ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಾಣಬೇಕಾಗುತ್ತದೆ. ಆದರೆ ಈ ಬಾರಿ ಚಿತ್ರಣ ಸಂಪೂರ್ಣ ವಿಭಿನ್ನವಾಗಿದೆ.

2026ರ ಮೇ ತಿಂಗಳಲ್ಲಿ ದೊಡ್ಡಬಳ್ಳಾಪುರದಲ್ಲಿ 24.78 ಮೀಟರ್ ಇದ್ದ ಅಂತರ್ಜಲ ಜೂನ್‌ನಲ್ಲಿ 24.61 ಮೀಟರ್ ಆಗಿದ್ದು ಅಲ್ಪ ಪ್ರಮಾಣದ ಸುಧಾರಣೆ ಕಂಡಿದೆ. ಆದರೆ ದೇವನಹಳ್ಳಿ 22.82 ಮೀಟರ್‌ನಿಂದ 22.88 ಮೀಟರ್‌ಗೆ, ಹೊಸಕೋಟೆ 18.65 ಮೀಟರ್‌ನಿಂದ 19.29 ಮೀಟರ್‌ಗೆ ಹಾಗೂ ನೆಲಮಂಗಲ 39.31 ಮೀಟರ್‌ನಿಂದ 40.18 ಮೀಟರ್‌ಗೆ ಕುಸಿದಿದೆ. ಜಿಲ್ಲೆಯ ಸರಾಸರಿಯಾಗಿ ಒಂದು ತಿಂಗಳಲ್ಲೇ 0.35 ಮೀಟರ್ ಅಂತರ್ಜಲ ಇಳಿಕೆಯಾಗಿದೆ.

101 ಗ್ರಾಮ ಪಂಚಾಯಿತಿಗಳಲ್ಲಿ ನಿರಂತರ ನಿಗಾ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವನ್ನು ಅಳೆಯಲು ಅಧ್ಯಯನ ಕೊಳವೆಬಾವಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ತಿಂಗಳು ಈ ಕೊಳವೆಬಾವಿಗಳ ಮೂಲಕ ನೀರಿನ ಮಟ್ಟವನ್ನು ಪರಿಶೀಲಿಸಲಾಗುತ್ತಿದೆ.

ಜೂನ್ ತಿಂಗಳ ವೀಕ್ಷಣೆಯಲ್ಲಿ ಶೇ.67ರಷ್ಟು ಅಧ್ಯಯನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ ದಾಖಲಾಗಿದೆ. ಜುಲೈ ತಿಂಗಳಲ್ಲಿಯೂ ಸಮರ್ಪಕ ಮಳೆಯಾಗದಿದ್ದರೆ ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಚಿತ್ರಣ

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನೆಲಮಂಗಲದಲ್ಲಿ ಅಂತರ್ಜಲವೇ ಅತ್ಯಂತ ಆಳದಲ್ಲಿದ್ದು, ಸರಾಸರಿ 40.18 ಮೀಟರ್ ಕೆಳಗೆ ನೀರು ಲಭ್ಯವಾಗುತ್ತಿದೆ. ಹೊಸಕೋಟೆಯಲ್ಲಿ 19.29 ಮೀಟರ್ ಆಳದಲ್ಲೇ ನೀರು ದೊರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ತುಸು ಉತ್ತಮ ಸ್ಥಿತಿಯಲ್ಲಿದೆ.

ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯೂ ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ 1.64 ಮೀಟರ್ ಏರಿಕೆ ಕಂಡಿದ್ದರೆ, ಹೊಸಕೋಟೆಯ ಒಂದು ಅಧ್ಯಯನ ಕೊಳವೆಬಾವಿಯಲ್ಲಿ 0.07 ಮೀಟರ್ ಏರಿಕೆಯಾಗಿದೆ. ಆದರೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪ್ರದೇಶದಲ್ಲಿ 1.24 ಮೀಟರ್ ಕುಸಿತ ದಾಖಲಾಗಿದ್ದು ಆತಂಕ ಹೆಚ್ಚಿಸಿದೆ.

ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಈಗಾಗಲೇ ನೀರಾವರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಆದರೆ ಅಂತರ್ಜಲ ಕುಸಿಯುತ್ತಿರುವುದರಿಂದ ಅನೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ತೋಟಗಾರಿಕಾ ಬೆಳೆಗಳು, ತರಕಾರಿ, ಹೂ ಬೆಳೆ ಹಾಗೂ ಮೇವು ಬೆಳೆಗಳಿಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಕೃಷಿ ಮಾತ್ರವಲ್ಲದೆ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಮೇಲೂ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ.

ಜಲಸಂರಕ್ಷಣೆಗೆ ಈಗಲೇ ಕ್ರಮ ಅಗತ್ಯ

ತಜ್ಞರ ಅಭಿಪ್ರಾಯದಂತೆ ಅಂತರ್ಜಲ ಮಟ್ಟವನ್ನು ಸ್ಥಿರಗೊಳಿಸಲು ಮಳೆ ನೀರನ್ನು ಭೂಮಿಯೊಳಗೆ ಇಳಿಸುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆ, ಸರ್ಕಾರಿ ಕಟ್ಟಡ ಹಾಗೂ ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು, ಕೆರೆ-ಕಟ್ಟೆಗಳ ಪುನಶ್ಚೇತನ, ಕೊಳವೆಬಾವಿಗಳ ರೀಚಾರ್ಜ್, ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಗೆ ಉತ್ತೇಜನ ನೀಡುವುದು ಕಾಲದ ಅಗತ್ಯವಾಗಿದೆ.

ನೀರಿನ ಮಿತ ಬಳಕೆ ಮತ್ತು ಜಲಮೂಲಗಳ ಸಮರ್ಪಕ ನಿರ್ವಹಣೆಯಿಂದ ಮಾತ್ರ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಬಿಕ್ಕಟ್ಟನ್ನು ತಗ್ಗಿಸಲು ಸಾಧ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಸಲಹೆಗಳು

ಮಳೆ ನೀರಿನ ಸಂಗ್ರಹ ಹಾಗೂ ಕೊಯ್ಲು ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಬೇಕು.

ಕೆರೆ, ಕಟ್ಟೆ ಹಾಗೂ ಜಲಮೂಲಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು.

ಕೊಳವೆಬಾವಿಗಳ ರೀಚಾರ್ಜ್ ಕಾಮಗಾರಿಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕು.

ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ವಿಸ್ತರಿಸಬೇಕು.

ನೀರಿನ ಮಿತ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.

ಮುಂಗಾರು ವ್ಯತ್ಯಯದಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಮಳೆ ಕೊರತೆ ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಕೊಳವೆಬಾವಿಗಳ ರೀಚಾರ್ಜ್‌ಗೆ ಆದ್ಯತೆ ನೀಡಿ, ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಿದರೆ ಮಾತ್ರ ಅಂತರ್ಜಲವನ್ನು ಸಂರಕ್ಷಿಸಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಪಲ್ಲವಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಕೆರೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಹೆಜ್ಜಾಜಿ ಕೆರೆಯೂ ಸಂಪೂರ್ಣ ಬತ್ತಿಹೋಗಿದೆ. ಆ ಕೆರೆಯಲ್ಲಿ ನೀರಿದ್ದರೆ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಉತ್ತಮವಾಗಿರುತ್ತಿತ್ತು. ಇದೀಗ ನೀರಿನ ಅಭಾವದಿಂದ ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಸಂಕಷ್ಟಕ್ಕೀಡಾಗಿವೆ. ಜಾನುವಾರುಗಳಿಗೆ ಮೇವು ಬೆಳೆಸಲು ಹಾಗೂ ಕುಡಿಯಲು ಬೇಕಾದ ನೀರೂ ಸಿಗದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಕೂಡಲೇ ಶಾಶ್ವತ ನೀರಾವರಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಮಧುರನಹೊಸಹಳ್ಳಿ ಯುವ ರೈತ ಮುಕುಂದ ಕೆ ಹೇಳಿದ್ದಾರೆ.

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

7 minutes ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

12 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

18 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

18 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago