ನ. 6ರಂದು ದೊಡ್ಡಬಳ್ಳಾಪುರದಲ್ಲಿ ನೈಟಿಂಗೇಲ್ಸ್ ಸ್ಮೃತಿ ಗ್ರಾಮ ಲೋಕಾರ್ಪಣೆ

ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ ಕಲ್ಯಾಣ ಹಾಗೂ ಡಿಮೆನ್ಷಿಯಾ (ಮರೆವಿನ ಕಾಯಿಲೆ) ಆರೈಕೆಯಲ್ಲಿ ಸುಮಾರು 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ಸಮೀಪ ಸ್ಥಾಪಿಸಿರುವ ಸಮಗ್ರ ಡಿಮೆನ್ಷಿಯಾ ಆರೈಕೆ ಕೇಂದ್ರವಾದ ‘ನೈಟಿಂಗೇಲ್ಸ್ ಸ್ಮೃತಿ ಗ್ರಾಮ’ ನವೆಂಬರ್ 6ರಂದು ಉದ್ಘಾಟನೆಗೊಳ್ಳಲಿದೆ.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರು ಸ್ಮೃತಿ ಗ್ರಾಮವನ್ನು ಉದ್ಘಾಟಿಸಲಿದ್ದು, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಶಾಸಕ ಧೀರಜ್ ಮುನಿರಾಜ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದೇಶದಲ್ಲಿ ಡಿಮೆನ್ಷಿಯಾ ಆರೈಕೆಯ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಾಪನೆಯಾಗಿರುವ ಈ ಸ್ಮೃತಿ ಗ್ರಾಮವು ಹಿರಿಯ ನಾಗರಿಕರ ಆರೈಕೆಯಲ್ಲಿ ಮಾದರಿ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಒಂದೇ ಆವರಣದಲ್ಲಿ ವಿಶೇಷ ವಸತಿ ಆರೈಕೆ, ಆರೈಕೆದಾರರಿಗೆ ತರಬೇತಿ, ಸಂಶೋಧನೆ ಹಾಗೂ ನಾವೀನ್ಯತೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಯೋಜನೆಯ ಮೊದಲ ಹಂತದಲ್ಲಿ ಆರ್ಥಿಕವಾಗಿ ಹಿಂದುಳಿದ 100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆ ಸೌಲಭ್ಯ ಒದಗಿಸಲಾಗುತ್ತದೆ. ವಿಶೇಷವಾಗಿ ಅಸಹಾಯಕ ಸ್ಥಿತಿಯಲ್ಲಿರುವವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಒಂಟಿಯಾಗಿ ವಾಸಿಸುವವರು ಹಾಗೂ ಕುಟುಂಬದ ಸಮರ್ಪಕ ಬೆಂಬಲವಿಲ್ಲದ ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗುತ್ತದೆ.

55 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ, ಡಿಮೆನ್ಷಿಯಾ ಇರುವುದನ್ನು ವೈದ್ಯಕೀಯವಾಗಿ ದೃಢಪಡಿಸಿರುವ ಹಿರಿಯ ನಾಗರಿಕರು ದಾಖಲಾತಿಗೆ ಅರ್ಹರಾಗಿರುತ್ತಾರೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ, ದಿನದ 24 ಗಂಟೆಗಳ ಆರೈಕೆಯ ಅಗತ್ಯವಿರುವ ಹಾಗೂ ಆರೈಕೆಗಾಗಿ ಕುಟುಂಬದ ಸದಸ್ಯರ ಬೆಂಬಲವಿಲ್ಲದ ಅಥವಾ ಅತ್ಯಲ್ಪ ಬೆಂಬಲ ಹೊಂದಿರುವ ಹಿರಿಯರಿಗೆ ಆದ್ಯತೆ ನೀಡಲಾಗುವುದು ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

ಹಿರಿಯ ನಾಗರಿಕರಿಗೆ ಗೌರವಯುತ, ಸುರಕ್ಷಿತ ಹಾಗೂ ನಿರಂತರ ಆರೈಕೆ ಒದಗಿಸುವ ಉದ್ದೇಶದಿಂದ ಆರಂಭವಾಗುತ್ತಿರುವ ನೈಟಿಂಗೇಲ್ಸ್ ಸ್ಮೃತಿ ಗ್ರಾಮವು ಡಿಮೆನ್ಷಿಯಾ ಆರೈಕೆ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!