ದರಗಳ ಏರಿಕೆಯ ಮೂಲಕ ಜನರಿಂದ ಗಳಿಕೆ, ಕಾಂಗ್ರೆಸ್ ಸರ್ಕಾರಕ್ಕೆ ಕೆಲವೇ ದಿನಗಳ ಬಾಳಿಕೆ- ವಿಪಕ್ಷ ನಾಯಕ ಆರ್.ಅಶೋಕ್

ಹಾಲು ದರ ಏರಿಕೆ, ಮೊಸರು ದರ ಏರಿಕೆಯ ನಂತರ ಬಸ್ ಟಿಕೆಟ್ ದರ ಏರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ, ಜನಸಾಮಾನ್ಯರ ಬದುಕಿಗೆ ಬೆಲೆ ಏರಿಕೆಯ ಬರೆ ಹಾಕಿದೆ. ನಾಲಾಯಕ್‌ ತುಘಲಕ್ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದರಗಳ ಏರಿಕೆಯೇ ಮತ್ತೊಂದು ಗ್ಯಾರಂಟಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಆರ್ಥಿಕವಾಗಿ ಸುದೃಢವಾಗಿದ್ದ ಕರ್ನಾಟಕವನ್ನು ಅವೈಜ್ಞಾನಿಕ ಆರ್ಥಿಕ ನಿರ್ವಹಣೆ ಮತ್ತು ಬೇಜವಾಬ್ದಾರಿ ಆಡಳಿತದಿಂದ ಸಂಕಷ್ಟಕ್ಕೆ ತಳ್ಳಲಾಗಿದೆ. ಉಚಿತ ಗ್ಯಾರಂಟಿಗಳ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ, ಅದರ ಆರ್ಥಿಕ ಹೊರೆಯನ್ನು ಭರಿಸಲಾಗದೆ ಈಗ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ತಿಳಿಸಿದ್ದಾರೆ.

ಸಾರಿಗೆ ನಿಗಮಗಳಿಗೆ ಸರ್ಕಾರವೇ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ಪಾವತಿಸದೆ, ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಸ್ ಟಿಕೆಟ್ ದರವನ್ನು ಸುಮಾರು 40% ವರೆಗೆ ಹೆಚ್ಚಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದ್ದಾರೆ.

ಒಂದೆಡೆ ಉಚಿತ ಪ್ರಯಾಣದ ಘೋಷಣೆ, ಮತ್ತೊಂದೆಡೆ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ಬಾಕಿ! ಹಿಂದೆ ಲಾಭದಲ್ಲಿದ್ದ KSRTC, BMTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ಇಂದು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಡೀಸೆಲ್, ಬಿಡಿಭಾಗ ಖರೀದಿ, ನೌಕರರ ಭವಿಷ್ಯ ನಿಧಿ ಪಾವತಿಗೂ ಹಣದ ಕೊರತೆ ಎದುರಾಗಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಲಾಭದಲ್ಲಿದ್ದ ಸಾರಿಗೆ ನಿಗಮಗಳು ಇಂದು ಈ ಸ್ಥಿತಿಗೆ ತಲುಪಿರುವುದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.

ಪ್ರಯಾಣಿಕರ ಕಷ್ಟ ಅರಿಯದ ಬಂಡೆ ಹೃದಯದ ಸಿಎಂ ಡಿಕೆ ಶಿವಕುಮಾರ್ ಅವರೇ, ಡೀಸೆಲ್ ದರ ಏರಿಕೆಯ ನೆಪ ಹೇಳುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ, ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಭರವಸೆ ನೀಡಿ, ಈಗ ಹಾಲು, ಮೊಸರು ಮತ್ತು ಬಸ್ ಪ್ರಯಾಣದ ದರ ಏರಿಸಿ ಜನರ ಬದುಕನ್ನು ದುಬಾರಿಗೊಳಿಸುತ್ತಿರುವುದೇ ನಿಮ್ಮ ಆಡಳಿತದ ಮಾದರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಉಚಿತ ಎಂದು ಹೇಳಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಸುವುದು ಯಾವ ರೀತಿಯ ಜನಪರ ಆಡಳಿತ? ಎಂದು ಪ್ರಶ್ನಿಸಿದ್ದಾರೆ.

ಈ ಜನವಿರೋಧಿ ಬೆಲೆ ಏರಿಕೆ ವಿರುದ್ಧ ನವೆಂಬರ್ 5 ರಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ. ಜನರ ಹಿತಕ್ಕಾಗಿ ನಮ್ಮ ಹೋರಾಟ ನಿರಂತರ. ಸಾರ್ವಜನಿಕರು ಕೂಡ ಈ ಹೋರಾಟದಲ್ಲಿ ಭಾಗವಹಿಸಿ ಈ ದರಿದ್ರ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!