ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಣೆ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರದ್ದು: ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜನೆ-ವಕೀಲ ಪ್ರತಾಪ್

ದೊಡ್ಡಬಳ್ಳಾಪುರ: ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯಬೇಕಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ಕಾಲೇಜು ವತಿಯಿಂದ ಅನುಮತಿ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ರದ್ದಾಗಿದೆ.

ವಕೀಲ ಪ್ರತಾಪ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್‌.ಎಸ್‌.ಘಾಟಿ, ಮೆಳೇಕೋಟೆ ಹಾಗೂ ತೂಬಗೆರೆ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ತಲಾ ₹5,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು.

ಕಾರ್ಯಕ್ರಮಕ್ಕೆ ಕಾಲೇಜು ವತಿಯಿಂದ ಮೊದಲೇ ಅನುಮತಿ ನೀಡಿದ್ದು, ಅದರಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಕಾಲೇಜಿನ ಪ್ರಾಂಶುಪಾಲರು ದೂರವಾಣಿ ಮೂಲಕ ಸಂಪರ್ಕಿಸಿ, ಕಾಲೇಜು ಅಭಿವೃದ್ಧಿ ಸಮಿತಿಯಿಂದ ಅನುಮೋದನೆ ದೊರೆತಿಲ್ಲ ಎಂಬ ಕಾರಣ ನೀಡಿ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಈ ಕುರಿತು ವಕೀಲ ಪ್ರತಾಪ್ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೋಟ್ ಪುಸ್ತಕ, ಕಲಿಕಾ ಸಾಮಗ್ರಿಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದೇನೆ. ಈ ವರ್ಷ ನಿಯಮಾನುಸಾರ ಕಾಲೇಜಿನ ಅನುಮತಿ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅನುಮತಿ ಹಿಂಪಡೆಯಲಾಗಿರುವುದು ಬೇಸರ ತಂದಿದೆ. ಕಾರ್ಯಕ್ರಮಕ್ಕೆ ಯಾವ ಕಾರಣದಿಂದ ಅವಕಾಶ ನಿರಾಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ರಾಜಕೀಯ ಪಿತೂರಿಯಿಂದ ಕಾರ್ಯಕ್ರಮಕ್ಕೆ ತಡೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ತೂಬಗೆರೆಯಲ್ಲೇ ಸೂಕ್ತ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿ, ಆಯ್ಕೆಯಾದ 20 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಾಪ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!