Categories: ಲೇಖನ

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ಬೃಹತ್ ರಾಜ್ಯದ ಮುಖ್ಯಮಂತ್ರಿಯೋ ಅಥವಾ ದೇಶದ ಪ್ರಧಾನಮಂತ್ರಿಯೋ ಆಗುವ ಸಾಧ್ಯತೆಗಳನ್ನು ಸೃಷ್ಟಿಸಿರುವುದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಹಿಂದೆ ರಾಜರು ಅರಮನೆಯಲ್ಲಿ ಹುಟ್ಟುತ್ತಿದ್ದರೆ, ಈಗಿನ ರಾಜರು ಅಂದರೆ ಪ್ರಧಾನಿ ಅಥವಾ ಮುಖ್ಯಮಂತ್ರಿಗಳು ಚುನಾವಣೆಯಲ್ಲಿ, ಮತದಾನದ ಮತಗಟ್ಟೆಯಲ್ಲಿ ಹುಟ್ಟುತ್ತಿದ್ದಾರೆ ಅಥವಾ ಅದನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿ ಹೇಳುವುದಾದರೆ ಭಾರತೀಯ ಪ್ರಜೆಯ ಹೃದಯ ಮತ್ತು ಮನಸ್ಸಿನಲ್ಲಿ ಹುಟ್ಟುತ್ತಿದ್ದಾರೆ. ಆ ದೃಷ್ಟಿಯಿಂದ ಕರ್ನಾಟಕದ ಮುಖ್ಯಮಂತ್ರಿ ಯಾಗಿ ಆಯ್ಕೆಯಾಗಿರುವ ನಿಮಗೆ ಹೃದಯಪೂರ್ವಕ ಅಭಿನಂದನೆಗಳು…….

ಸ್ವಾತಂತ್ರ್ಯ ಭಾರತದ ಸುಮಾರು 80 ವರ್ಷಗಳ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ 24 ಜನರಿಗೆ ಮಾತ್ರ ಸಾಧ್ಯವಾದ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಬಹುದೊಡ್ಡ ಗೌರವ ನಿಮಗೆ ಸಿಕ್ಕಿರುವುದು ನಿಜಕ್ಕೂ ಅತ್ಯುತ್ತಮ ಸಾಧನೆಯೇ ಸರಿ. ಅದರ ಹಿಂದಿನ ಶ್ರಮ, ನೋವು, ನಲಿವು, ಸುಖ ದುಃಖ, ಏರಿಳಿತ, ತಂತ್ರ ಕುತಂತ್ರ, ಮೋಸ, ವಂಚನೆ ಎಲ್ಲವೂ ನಮಗಿಂತ ನಿಮ್ಮ ಮನಸ್ಸಿಗೇ ತುಂಬಾ ಚೆನ್ನಾಗಿ ತಿಳಿದಿರುತ್ತದೆ. ಅದರ ಆತ್ಮವಲೋಕನ ನೀವೇ ಮಾಡಿಕೊಳ್ಳಬೇಕು…..

ಆದರೆ ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನು ಗಮನಿಸಿದಂತೆ ಮತ್ತು ಮಾಧ್ಯಮಗಳಲ್ಲಿ, ಸ್ನೇಹಿತರ ವಲಯದಲ್ಲಿ, ರಾಜಕೀಯ ವಿಶ್ಲೇಷಕರ ಒಡನಾಟದಿಂದ ಲಭಿಸಿದ ಮಾಹಿತಿಗಳ ಆಧಾರದ ಮೇಲೆ ನಿಮಗೊಂದಿಷ್ಟು ಸಲಹೆ ನೀಡುವ ಒಂದು ಸಣ್ಣ ಪ್ರಯತ್ನವೇ ಈ ಒಂದು ಪತ್ರ…..

ಶ್ರೀ ಡಿಕೆ ಶಿವಕುಮಾರ್ ಅವರೇ, ಸದ್ಯದಲ್ಲಿ ನಿಮ್ಮ ಮೇಲೆ ಒಂದು ರೀತಿಯ ಸಿನಿಮಾ ನಟರಿಗೆ ಸೃಷ್ಟಿಯಾದಂತ ಇಮೇಜ್ ಮತ್ತು ಕ್ರೇಜ್ ಸೃಷ್ಟಿಯಾಗಿದೆ. ಅದರ ಪ್ರಕಾರ ನೀವು ಅತ್ಯಂತ ಭ್ರಷ್ಟರೆಂದು, ದುರಹಂಕಾರಿಗಳೆಂದು, ಬಾಹುಬಲ, ತೋಳ್ಬಲದ ಮೂಲಕ ಅಧಿಕಾರ ಸ್ಥಾಪಿಸುವವರೆಂದು, ಜಾತಿವಾದಿ ಎಂದು, ಧಾರ್ಮಿಕ ನಂಬಿಕೆಯ ಅಂಧಶ್ರದ್ದೆಯ, ಮೂಡ ನಂಬಿಕೆಯ ವ್ಯಕ್ತಿ ಎಂದು, ಚುನಾವಣಾ ಕುತಂತ್ರಗಾರರೆಂದು ಇತ್ಯಾದಿ ಇತ್ಯಾದಿ ಕೆಟ್ಟ ರೀತಿಯ ಆರೋಪಗಳು ನಿಮ್ಮ ಮೇಲಿವೆ….

ಹಾಗೆಯೇ ಅತ್ಯುತ್ತಮ ಶ್ರಮಜೀವಿ ಎಂದು, ಸಮಸ್ಯೆಗಳ ಪರಿಹಾರದ ಚಾಣಕ್ಯರೆಂದು, ಚುನಾವಣಾ ತಂತ್ರಗಾರಿಕೆಯ ಅತ್ಯುತ್ತಮ ಸಂಘಟಕರೆಂದು, ಹಿಡಿದ ಹಠ ಸಾಧಿಸುವ ಛಲಗಾರರೆಂದು, ಒಳ್ಳೆಯ ಆಡಳಿತಗಾರರೆಂದು ಕೆಲವು ಸಹಜ ಹೊಗಳಿಕೆಗಳು ಸಹ ನಿಮ್ಮ ಮೇಲಿದೆ.

ಏನೇ ಇರಲಿ, ಅವೆಲ್ಲವೂ ಬಾಹ್ಯವಾದದ್ದು. ಸಾರ್ವಜನಿಕರು, ರಾಜಕೀಯ ವಿಶ್ಲೇಷಕರು, ಮಾಧ್ಯಮದವರು ಅವರವರ ಸಾಮರ್ಥ್ಯ, ಗ್ರಹಿಕೆ, ಮಿತಿಗೆ ತಕ್ಕಂತೆ ನಿಮ್ಮನ್ನು ವರ್ಣಿಸುವರು. ಇದು ನಿಜವೇ ಆಗಿರಬೇಕೆಂದೇನಿಲ್ಲ ಅಥವಾ ಸುಳ್ಳು ಎಂದು ಅಲ್ಲ. ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ನಿಮ್ಮ ಕೆಲಸ ಕಾರ್ಯಗಳ, ಗುಣಾವಗುಣಗಳ ತುಲನಾತ್ಮಕ ಅಧ್ಯಯನವು ಸೇರಿರುತ್ತದೆ.

ಇದೀಗ ರಾಜ್ಯದ ಮುಖ್ಯಮಂತ್ರಿಗಳು ನೀವಾಗಿರುವುದರಿಂದ ಈ ನಿಮ್ಮ ಮೇಲಿನ ಹೊಗಳಿಕೆ ತೆಗಳಿಕೆಗಳಲ್ಲಿ ಯಾವುದನ್ನು ನೀವು ಎಷ್ಟರಮಟ್ಟಿಗೆ ಸ್ವೀಕರಿಸಿ, ಆರೋಪಗಳನ್ನು ನಿರಾಕರಿಸುವಂತಹ ಕೆಲಸ ಮಾಡುವಿರಿ ಮತ್ತು ನಿಮ್ಮ ಸಾಮರ್ಥ್ಯದ ಮತ್ತೊಂದು ಅಗ್ನಿಪರೀಕ್ಷೆಯಲ್ಲಿ ಗೆಲ್ಲುವಿರಿ ಎಂಬುದು ಮುಂದಿನ ದಿನಗಳು ನಿರ್ಧರಿಸುತ್ತದೆ…

ಮೊದಲನೆಯದಾಗಿ,
ನೀವು ನಿಮ್ಮ ಅಧಿಕಾರದ ಅವಧಿಯಲ್ಲಿ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ಹೊರಟಿರುವಿರಿ. ಯಾವುದೇ ಸರ್ಕಾರಿ ಕೆಲಸಕ್ಕೆ ಹತ್ತು ರೂಪಾಯಿ ಸಹ ಲಂಚ ಕೊಡುವಂತಿಲ್ಲ. ಹಾಗೆ ಕೇಳಿದರೆ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಹೇಳಿದ್ದೀರಿ. ಅದಕ್ಕಾಗಿ ಮಾರ್ಗಸೂಚಿ ರೂಪಿಸುವುದಾಗಿ ಹೇಳಿದ್ದೀರಿ. ತುಂಬಾ ಸಂತೋಷ. ಏಕೆಂದರೆ ನಿಮ್ಮ ಮೇಲೆ ಇರುವ ಬಹುದೊಡ್ಡ ಆರೋಪ ನೀವು ಸಹ ಭ್ರಷ್ಟರೆಂದು. ಇತಿಹಾಸ ಏನೇ ಇರಲಿ ವರ್ತಮಾನದಲ್ಲಿ ನೀವು ನಿಜಕ್ಕೂ ಆತ್ಮ ಸಾಕ್ಷಿಗೆ ಅನುಸಾರವಾಗಿ ನಡೆದುಕೊಳ್ಳುವವರೇ
ಆದರೆ ಅತ್ಯಂತ ಪ್ರಾಮಾಣಿಕವಾಗಿ ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನಿಸಿ. ಅದು ಅಷ್ಟು ಸುಲಭವಲ್ಲ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ನಿಮ್ಮ ಸುತ್ತಮುತ್ತಲು ಭ್ರಷ್ಟರೇ ತುಂಬಿರುತ್ತಾರೆ. ನಿಮ್ಮನ್ನು ಬೆಳೆಸಿದವರು ಭ್ರಷ್ಟರೇ ಆಗಿರುತ್ತಾರೆ. ಇಂಥಹ ಸನ್ನಿವೇಶದಲ್ಲಿ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ನಿಮ್ಮ ಕುರ್ಚಿ ಅಲುಗಾಡಬಹುದು. ಆದರೂ ಭ್ರಷ್ಟಾಚಾರದ ವಿರುದ್ಧ ನಿಮ್ಮ ಹೋರಾಟ ಪ್ರಾಮಾಣಿಕವಾಗಿರಬಹುದು ಎಂದು ವೈಯಕ್ತಿಕವಾಗಿ ಭಾವಿಸುವೆ. ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೇಳಿಕೆಗಳನ್ನು ಜನರು ಹಾಸ್ಯಸ್ಪದವಾಗಿ ನೋಡಿದರೂ ನೀವು ಮಾತ್ರ ವಿಚಲಿತರಾಗದೆ ನಿಜಕ್ಕೂ ಸಾಧ್ಯವಾದಷ್ಟು ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದೇ ಆದರೆ ಈ ನೆಲದ ಋಣ ತೀರಿಸಿದಂತಾಗುತ್ತದೆ.

ಎರಡನೆಯದಾಗಿ,
ನಿಮ್ಮ ಮೇಲಿರುವ ದುರಹಂಕಾರಿ ಎಂಬ ಆರೋಪ. ಅದು ವ್ಯಕ್ತಿಗತ ಆರೋಪವಾಗಿರಬಹುದು. ಆದರೆ ಸಾರ್ವಜನಿಕವಾಗಿ ದುರಹಂಕಾರವನ್ನು ಪ್ರದರ್ಶಿಸುವುದು ಒಳ್ಳೆಯದಲ್ಲ. ನಿಮ್ಮ ದೇಹ ಚಲನೆ, ಮಾತುಗಳು ಕಠಿಣವಾಗಿದ್ದರು ದುರಹಂಕಾರದ ವರ್ತನೆ ಮಾತ್ರ ಸಹನೀಯವಲ್ಲ. ಯಾರನ್ನೇ ಆಗಲಿ ಮಾತನಾಡಿಸುವಾಗ ಸೌಜನ್ಯವನ್ನು ಸಾಮಾನ್ಯ ಜನ ನಿರೀಕ್ಷಿಸುತ್ತಾರೆ. ಸೇಬನ್ನು ತಿಂದು ಸಾರ್ವಜನಿಕರ ಮೇಲೆ ಎಸೆಯುವುದು ಅಂತಹ ಒಳ್ಳೆಯ ನಡೆಯಲ್ಲ. ಆಂತರ್ಯದ ದುರಾಂಕಾರ ಸಾಂಕೇತಿಕವಾಗಿ ಈ ರೀತಿ ಪ್ರಕಟವಾಗಿದೆ ಎಂದು ಭಾವಿಸಬಹುದು. ಹಿಂದೊಮ್ಮೆ ನಿಮ್ಮ ಹೆಗಲ ಮೇಲೆ ಕೈ ಇಟ್ಟ ನಿಮ್ಮದೇ ಪಕ್ಷದ ಕಾರ್ಯಕರ್ತನ ಕಪಾಳಕ್ಕೆ ಹೊಡೆದದ್ದು ಕೂಡ ನಿಮ್ಮ ದುರಹಂಕಾರದ ಪರಮಾವಧಿ. ಇದೀಗ ನೀವು ಕರ್ನಾಟಕದ ಮುಖ್ಯಮಂತ್ರಿ. ಸಹಜವಾಗಿಯೇ ರಾಜ್ಯದ ಎಲ್ಲಾ ಜನರ ಮತ್ತು ಸಂಪನ್ಮೂಲಗಳ ಒಡೆಯರು ನೀವು. ಆದ್ದರಿಂದ ಹೆಮ್ಮೆ ಇರಲಿ, ಆದರೆ ನಿಮ್ಮ ವರ್ತನೆಯಲ್ಲಿ ದುರಹಂಕಾರ ಮಾತ್ರ ಖಂಡಿತವಾಗಲೂ ಇಟ್ಟುಕೊಳ್ಳಬೇಡಿ. ಸಾಧ್ಯವಾದಷ್ಟು ವಿನಯವಂತಿಕೆ ಬೆಳೆಸಿಕೊಳ್ಳಿ.

ಮೂರನೆಯದಾಗಿ,
ನಿಮ್ಮ ಮೂಲ ನಂಬಿಕೆಯನ್ನು ಮೀರಿ ಮೂಢನಂಬಿಕೆಯಾಗಿ ನಿಮ್ಮ ಅನೇಕ ನಡವಳಿಕೆಗಳು ಕಂಡು ಬರುತ್ತಿದೆ. ಇದು ಸಹ ಸಹನೀಯವಲ್ಲ. ನಿಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಜ್ಜಯ್ಯನ ಭಾವಚಿತ್ರ ಇಟ್ಟು , ಅದಕ್ಕೆ ನಮಸ್ಕರಿಸಿ ಒಂದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಿರಿ. ನಾಳೆಯ ದಿನ ಅಧಿಕಾರಕ್ಕೆ ಮರಳಿದಾಗ ಪ್ರತಿಪಕ್ಷದ ಸದಸ್ಯರು ಸಹಜವಾಗಿ ಅಲ್ಲಿ ಶ್ರೀರಾಮನ ಫೋಟೋ ಇಟ್ಟಾಗ ಅದನ್ನು ಜಾತ್ಯತೀತ ನೆಲೆಯಲ್ಲಿ, ಸಂವಿಧಾನಾತ್ಮಕವಾಗಿ ವಿರೋಧಿಸುವ ನೈತಿಕತೆ ಇಲ್ಲವಾಗುತ್ತದೆ. ಮುಂದೆ ಮತ್ತೊಬ್ಬರು ಅಲ್ಲಿ ಜೀಸಸ್ ಫೋಟೋ ಇಡಬಹುದು, ಇನ್ನೊಬ್ಬರು ನಮಾಜು ಮಾಡಬಹುದು. ಲೋಕಭವನ ಆ ರೀತಿ ವೈಯಕ್ತಿಕ ನಂಬಿಕೆಗಳ ತಾಣವಾಗಬಾರದು, ಮೌಲ್ಯವಾಗಬಾರದು. ಅದು ಸಂವಿಧಾನಾತ್ಮಕ ಮೌಲ್ಯಗಳ ಪ್ರತಿಬಿಂಬವಾಗಬೇಕು. ಮುಂದೆ ಎಚ್ಚರಿಕೆ ವಹಿಸಿ…

ನಾಲ್ಕನೆಯದಾಗಿ,
ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಖಂಡಿತವಾಗಲೂ ಇಲ್ಲಿಯವರೆಗೆ ಹೆಚ್ಚಿನ ಬದಲಾವಣೆ ಯಾವ ಸರ್ಕಾರದಿಂದಲೂ ಆಗಿಲ್ಲ. ಪ್ರತಿ ಸರ್ಕಾರಿ ಶಾಲೆಯು ಸುಸಜ್ಜಿತವಾದ ಖಾಸಗಿ ಶಾಲೆಯಂತೆ ಪ್ರಬಲವಾಗಿ, ಆಧುನಿಕವಾಗಿ, ಆಕರ್ಷಕವಾಗಿ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಒಂದಷ್ಟು ಸಮರೋಪಾದಿಯ ಕ್ರಮ ಕೈಗೊಳ್ಳಿ. ಅದನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೇರಿಸಿ. ಹಾಗೆಯೇ ಸರ್ಕಾರಿ ಆಸ್ಪತ್ರೆಗಳು ಸಹ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ರೀತಿಯಲ್ಲಿ ಆಧುನಿಕರಣ ಗೊಳಿಸಿ. ಒಂದು ಯಂತ್ರ ಕೆಟ್ಟು ಹೋದರೆ ಮತ್ತೊಂದು ಯಂತ್ರ ಸದಾ ಸಿದ್ಧವಾಗಿರಬೇಕು. ಒಬ್ಬ ವೈದ್ಯರು ಅಥವಾ ದಾದಿಯರು ರಜೆ ಹಾಕಿದರೆ ಇನ್ನೊಬ್ಬರು ಅದಕ್ಕೆ ಪರ್ಯಾಯವಾಗಿ ಸಿದ್ಧವಾಗಿರಬೇಕು. ಎಲ್ಲಾ ರೀತಿಯ ಔಷಧಿಗಳು ಲಭ್ಯವಿರಬೇಕು. ಕಡಿಮೆ ವೆಚ್ಚದ್ದಾಗಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ಒಂದು ಅಚಾತುರ್ಯವಾಗದಂತೆ ಎಚ್ಚರವಹಿಸಿ. ಸದ್ಯ ಆರೋಗ್ಯ ಮಂತ್ರಿಗಳಾದ ಯುಟಿ ಖಾದರ್ ಅವರು ಒಂದಷ್ಟು ಕ್ರಿಯಾತ್ಮಕವಾಗಿ ನಡೆದುಕೊಳ್ಳುತ್ತಿರುವ ಸುದ್ದಿಯನ್ನು ನೋಡಿದ್ದೇವೆ.

ಐದನೆಯದಾಗಿ,
ಹಿಂದೆ ಆಡಳಿತ ಮಾಡಿದ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಆಡಳಿತವನ್ನು ಸಹ ನೀವು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಬಲ ಸಮುದಾಯದ ನೀವು ನರೇಂದ್ರ ಮೋದಿಯವರ ಮಿನಿ ಆಡಳಿತದಂತೆ ಅಭಿವೃದ್ಧಿ ಎಂಬ ವಸ್ತು ಸಂಸ್ಕೃತಿಯನ್ನು ಮಾತ್ರ ಅನುಕರಣೆ ಮಾಡದೆ ಸಾಮಾಜಿಕ ನ್ಯಾಯದ ಬಗ್ಗೆಯೂ ಸಹ ಚಿಂತನೆ ನಡೆಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಿಮ್ಮ ಮುಂದಿರುವುದು ಬಿಡದಿ ಟೌನ್ಶಿಪ್ ಯೋಜನೆ. ನೀವೇ ಹೇಳಿದಂತೆ ಗುಜರಾತಿನಲ್ಲಿ ನರೇಂದ್ರ ಮೋದಿಯವರು ಐದಾರು ಟೌನ್ಶಿಪ್‌ಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದೀರಿ. ಗುಜರಾತಿನ ಪರಿಸ್ಥಿತಿ ಏನೋ ಎತ್ತೋ ಗೊತ್ತಿಲ್ಲ. ಆದರೆ ಕರ್ನಾಟಕದಲ್ಲಿ ಸದ್ಯಕ್ಕೆ ಕೃಷಿ ಭೂಮಿಯಲ್ಲಿ ಟೌನ್ಶಿಪ್ ನಿರ್ಮಾಣವಾಗುವಷ್ಟು ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಯಾರೋ ಕೆಲವು ಶ್ರೀಮಂತ ವ್ಯಕ್ತಿಗಳ ಜೀವನ ಶೈಲಿಗೆ ಉಪಯೋಗವಾಗುವ ಟೌನ್ ಶಿಪ್ ನಿರ್ಮಿಸಲು, ಒಂಬತ್ತು ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಕೃಷಿ ಭೂಮಿಯನ್ನು ನಾಶ ಮಾಡುವುದು, ರೈತರ ವಿರೋಧವನ್ನು ಕಟ್ಟಿಕೊಳ್ಳುವುದು, ಅದಕ್ಕಾಗಿ ಹಠ ಮಾಡುವುದು ಅಂತಹ ಒಳ್ಳೆಯ ತೀರ್ಮಾನವಲ್ಲ. ಮೋದಿಯವರ ಅಭಿವೃದ್ಧಿಯ ಯೋಜನೆಯಂತೆ, ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಯೋಚನೆಯು ನಿಮ್ಮ ಆಡಳಿತದ ಭಾಗವಾಗಿರಲಿ. ಇಡೀ ರಾಜ್ಯದ ಎಲ್ಲಾ ಜನರ ವಿಶ್ವಾಸ ಗಳಿಸಿ. ಬಿಡದಿ ಯೋಜನೆಗೆ ಹಠ ಮಾಡಬೇಡಿ. ಸದ್ಯಕ್ಕೆ ಅದನ್ನು ನಿಲ್ಲಿಸುವುದೇ ಒಳಿತು. ಮುಂದೆ ರಾಜ್ಯ ಶ್ರೀಮಂತವಾದಾಗ ಯಾರೋ ಖಾಸಗಿ ವ್ಯಕ್ತಿಗಳು ಬೇಕಾದರೆ ನಿರ್ಮಿಸಿಕೊಳ್ಳಲಿ. ಸರ್ಕಾರ ಈ ನಿಟ್ಟಿನಲ್ಲಿ ಮುಂದುವರೆಯುವುದು ಉಚಿತವಲ್ಲ….

ಪ್ರಾರಂಭದ ನಿಮ್ಮ ಅತ್ಯುತ್ಸಾಹದ ಕೆಲವು ನಡೆಗಳು ಖಂಡಿತವಾಗಲೂ ಉತ್ತಮವಾಗಿದೆ, ಪ್ರೋತ್ಸಾಹದಾಯಕವಾಗಿದೆ. ಆದರೆ ಅದು ಆರಂಭ ಶೂರತ್ವವಾಗಬಾರದು , ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಒಟ್ಟಿಗೆ ಹೋಗಲಿ. ನಿರುದ್ಯೋಗ ಸಮಸ್ಯೆ ನಿವಾರಣೆಗೂ ಒತ್ತು ನೀಡಿ. ಪರಿಸರ, ಆಹಾರ, ನೀರು, ಗಾಳಿ ಎಂಬ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಅದರ ಶುದ್ಧೀಕರಣಕ್ಕೆ ಮಹತ್ವ ನೀಡಿ.

ಆಡಳಿತ ಎಂದರೆ ಕೇವಲ ಯೋಜನೆಗಳನ್ನು ಘೋಷಿಸುವುದಲ್ಲ. ಇರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ಅದರಲ್ಲಿಯೇ ಎಲ್ಲರೂ ವಿಫಲರಾಗುತ್ತಿರುವುದು, ಆಡಳಿತ ಯಂತ್ರ ಜಡ್ಡು ಹಿಡಿದಿರುವುದು, ಭ್ರಷ್ಟ ಗೊಂಡಿರುವುದು. ಅದನ್ನು ನೀವು ಸರಿಯಾಗಿ ನಿರ್ವಹಿಸಿದ್ದೇ ಆದರೆ ಖಂಡಿತವಾಗಲೂ ನಿಮಗೆ ಉತ್ತಮ ಭವಿಷ್ಯವಿದೆ. ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನೀವು ಯಶಸ್ವಿಯಾಗಲಿ ಎಂದು ಆಶಿಸುತ್ತಾ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ಗಿರಿ ಆರೋಪ: ಯುವಕನ ಮೇಲೆ ಹಲ್ಲೆ, 6 ಜನರ ವಿರುದ್ಧ ಪ್ರಕರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರಿನಲ್ಲಿ ಮಾತನಾಡುತ್ತಿದ್ದ ಸ್ನೇಹಿತರ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ…

17 hours ago

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

2 days ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

3 days ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

4 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

4 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

4 days ago