ಜಿಲ್ಲೆಯಲ್ಲಿ ಪಾತಾಳ ಮುಟ್ಟಿದ ಅಂತರ್ಜಲ! ಕೊಳವೆಬಾವಿಗಳ ಅತಿಯಾದ ಬಳಕೆ, ಮಳೆ ಕೊರತೆ; 1,250 ಅಡಿಯಲ್ಲೂ ನೀರು ಸಿಗುವುದು ಅನುಮಾನ

ಬೆಂಗಳೂರು ಗ್ರಾಮಾಂತರ: ಯಾವುದೇ ನದಿ ಮೂಲವಿಲ್ಲದ ಬಯಲುಸೀಮೆ ಪ್ರದೇಶವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲದ ಮೇಲಿನ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಜಲಮಟ್ಟ ಆತಂಕಕಾರಿ ಸ್ಥಿತಿಗೆ ತಲುಪಿದೆ. ಮಳೆ ಕೊರತೆ, ಕೊಳವೆಬಾವಿಗಳ ಅತಿಯಾದ ಬಳಕೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಅಗತ್ಯ ಕ್ರಮಗಳ ಕೊರತೆಯಿಂದಾಗಿ ಹಲವು ಪ್ರದೇಶಗಳಲ್ಲಿ ನೂರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಸಿಗುವುದು ದುಸ್ತರವಾಗುತ್ತಿದೆ.

ಒಂದು ಕಾಲದಲ್ಲಿ 400ರಿಂದ 500 ಅಡಿ ಆಳದಲ್ಲೇ ಸಮರ್ಪಕವಾಗಿ ನೀರು ದೊರೆಯುತ್ತಿತ್ತು ಎನ್ನಲಾಗುತ್ತಿದ್ದು, ಪ್ರಸ್ತುತ ಜಿಲ್ಲೆಯ ಕೆಲವು ಭಾಗಗಳಲ್ಲಿ 1,250 ಅಡಿ ಆಳದವರೆಗೂ ಕೊಳವೆಬಾವಿ ಕೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜಿಲ್ಲೆಯ ಭವಿಷ್ಯದ ಜಲಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

51,872 ಕೊಳವೆಬಾವಿಗಳೇ ಜೀವನಾಡಿ

ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರು ಸೇರಿದಂತೆ ವಿವಿಧ ಉದ್ದೇಶಗಳಿಗೆ ಒಟ್ಟು 51,872 ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 46,842 ಕೊಳವೆಬಾವಿಗಳು ಕೃಷಿ ಚಟುವಟಿಕೆಗಳಿಗೆ, 3,401 ಕೊಳವೆಬಾವಿಗಳು ಕುಡಿಯುವ ನೀರಿಗೆ ಹಾಗೂ 1,629 ಕೊಳವೆಬಾವಿಗಳು ಕೈಗಾರಿಕಾ ಉದ್ದೇಶಗಳಿಗೆ ಬಳಕೆಯಾಗುತ್ತಿವೆ.

ತಾಲೂಕುವಾರು ನೋಡಿದರೆ ದೇವನಹಳ್ಳಿಯಲ್ಲಿ 12,848, ದೊಡ್ಡಬಳ್ಳಾಪುರದಲ್ಲಿ 15,315, ಹೊಸಕೋಟೆಯಲ್ಲಿ 15,363 ಹಾಗೂ ನೆಲಮಂಗಲದಲ್ಲಿ 8,346 ಕೊಳವೆಬಾವಿಗಳು ನೀರಿನ ಪ್ರಮುಖ ಆಸರೆಯಾಗಿವೆ.

ಇಷ್ಟೊಂದು ಪ್ರಮಾಣದಲ್ಲಿ ಭೂಮಿಯೊಳಗಿನ ನೀರನ್ನು ನಿರಂತರವಾಗಿ ಹೊರತೆಗೆಯುತ್ತಿರುವ ಪರಿಣಾಮ, ಮಳೆ ಮೂಲಕ ಭೂಮಿಗೆ ಸೇರುವ ನೀರಿಗಿಂತ ಹೊರತೆಗೆಯುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟದಲ್ಲಿ ಏರಿಳಿತ ಕಂಡುಬರುತ್ತಿದೆ.

26 ಕೊಳವೆಬಾವಿಗಳಲ್ಲಿ ಅಂತರ್ಜಲದ ನಿಗಾ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಏರಿಳಿತವನ್ನು ನಿರಂತರವಾಗಿ ಪರಿಶೀಲಿಸಲು 26 ಕೊಳವೆಬಾವಿಗಳನ್ನು ಮೇಲ್ವಿಚಾರಣಾ ಕೇಂದ್ರಗಳಾಗಿ ಗುರುತಿಸಲಾಗಿದೆ. ದೇವನಹಳ್ಳಿಯಲ್ಲಿ 6, ದೊಡ್ಡಬಳ್ಳಾಪುರದಲ್ಲಿ 10, ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ತಲಾ 5 ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವನ್ನು ದಾಖಲಿಸಲಾಗುತ್ತಿದೆ.

ಲಭ್ಯವಿರುವ ಅಂಕಿ-ಅಂಶಗಳು ಸಹ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳಾಗಿರುವುದನ್ನು ತೋರಿಸುತ್ತವೆ.

1,250 ಅಡಿ ಆಳಕ್ಕೂ ಇಳಿದ ಜಲಾನ್ವೇಷಣೆ

ಇಲಾಖೆಯ ಅಂದಾಜಿನ ಪ್ರಕಾರ, ದೇವನಹಳ್ಳಿಯಲ್ಲಿ 850ರಿಂದ 1,150 ಅಡಿ, ದೊಡ್ಡಬಳ್ಳಾಪುರದಲ್ಲಿ 700ರಿಂದ 1,000 ಅಡಿ, ಹೊಸಕೋಟೆಯಲ್ಲಿ 900ರಿಂದ 1,200 ಅಡಿ ಹಾಗೂ ನೆಲಮಂಗಲದಲ್ಲಿ 800ರಿಂದ 1,250 ಅಡಿ ಆಳದವರೆಗೆ ಕೊಳವೆಬಾವಿ ಕೊರೆದಾಗ ನೀರು ದೊರೆಯುವ ಸಾಧ್ಯತೆ ಇದೆ.

ಹೀಗಾಗಿ ಭೂಮಿಯೊಳಗಿನ ನೀರಿನ ಪದರಗಳು ಕ್ರಮೇಣ ಆಳಕ್ಕೆ ಸರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕೊಳವೆಬಾವಿ ಕೊರೆಸುವ ವೆಚ್ಚವೂ ಹೆಚ್ಚುವ ಸಾಧ್ಯತೆ ಇದೆ. ನೀರು ದೊರೆಯುವ ಖಾತರಿಯೂ ಇಲ್ಲದ ಸ್ಥಿತಿ ರೈತರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

ಹೊಸಕೋಟೆಯಲ್ಲಿ ಜಲಮಟ್ಟದ ತೀವ್ರ ಇಳಿಕೆ

2021ರಿಂದ 2025ರವರೆಗಿನ ಮೇಲ್ವಿಚಾರಣಾ ಅಂಕಿ-ಅಂಶಗಳನ್ನು ಗಮನಿಸಿದರೆ ತಾಲೂಕುಗಳ ಅಂತರ್ಜಲ ಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.

2021ರಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ ನೆಲಮಟ್ಟದಿಂದ 34.57 ಮೀಟರ್‌ನಲ್ಲಿದ್ದರೆ, 2022ರಲ್ಲಿ 29.36, 2023ರಲ್ಲಿ 22.37, 2024ರಲ್ಲಿ 23.61 ಹಾಗೂ 2025ರಲ್ಲಿ 23.70 ಮೀಟರ್ ದಾಖಲಾಗಿದೆ.

ಹೊಸಕೋಟೆಯಲ್ಲಿ 2021ರಲ್ಲಿ 37.85 ಮೀಟರ್‌ನಲ್ಲಿದ್ದ ಜಲಮಟ್ಟ 2025ರಲ್ಲಿ 16.40 ಮೀಟರ್‌ಗೆ ಬದಲಾಗಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿಯೂ ವರ್ಷದಿಂದ ವರ್ಷಕ್ಕೆ ಗಮನಾರ್ಹ ಏರಿಳಿತ ದಾಖಲಾಗಿದೆ. ನೆಲಮಂಗಲದಲ್ಲಿ 2025ರಲ್ಲಿ 35.73 ಮೀಟರ್ ದಾಖಲಾಗಿರುವುದು ಮೇಲ್ವಿಚಾರಣಾ ಕೇಂದ್ರಗಳಲ್ಲಿನ ಸ್ಥಳೀಯ ವ್ಯತ್ಯಾಸವನ್ನೂ ಸೂಚಿಸುತ್ತದೆ.

ಮಳೆ ಬರುತ್ತದೆ, ನೀರು ಮಾತ್ರ ಭೂಮಿಗೆ ಸೇರುವುದಿಲ್ಲ!

ಜಿಲ್ಲೆಯ ಬಹುತೇಕ ಕೃಷಿ ಚಟುವಟಿಕೆಗಳು ಕೊಳವೆಬಾವಿ ಆಧಾರಿತವಾಗಿವೆ. ಆದರೆ ಭೂಮಿಯಿಂದ ಹೊರತೆಗೆಯುವ ನೀರಿಗೆ ಅನುಗುಣವಾಗಿ ಮಳೆನೀರನ್ನು ಭೂಮಿಗೆ ಇಂಗಿಸುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿಲ್ಲ.

ಮಳೆನೀರು ಕೊಯ್ಲು, ಕೃಷಿಹೊಂಡ, ಚೆಕ್‌ಡ್ಯಾಂ, ರೀಚಾರ್ಜ್‌ ಪಿಟ್‌ ಸೇರಿದಂತೆ ಅಂತರ್ಜಲ ಮರುಪೂರಣ ವ್ಯವಸ್ಥೆಗಳನ್ನು ವ್ಯಾಪಕವಾಗಿ ಅಳವಡಿಸುವ ಅಗತ್ಯವಿದ್ದರೂ, ಈ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದ ಆಸಕ್ತಿ ಕಂಡುಬರುತ್ತಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಟ್ಟಡಗಳಿಗೆ ಮಳೆನೀರು ಕೊಯ್ಲು ಅಳವಡಿಸುವಂತೆ ಸೂಚನೆ ನೀಡುತ್ತಿದ್ದರೂ, ಕೆಲವರು ಇದಕ್ಕೆ ಬದಲಾಗಿ ಹೊಸ ಕೊಳವೆಬಾವಿ ಕೊರೆಸುವತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

‘ತೆಗೆದಷ್ಟು ನೀರು ಭೂಮಿಗೆ ಸೇರಿಸದಿದ್ದರೆ ಅಂತರ್ಜಲದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ’ ಎಂಬ ಎಚ್ಚರಿಕೆ ತಜ್ಞರಿಂದ ವ್ಯಕ್ತವಾಗಿದೆ.

ಜಲಮಟ್ಟ ಉಳಿಸಲು ಜನರ ಸಹಭಾಗಿತ್ವ ಅಗತ್ಯ

ಅಂತರ್ಜಲದ ಸಮಸ್ಯೆ ಕೇವಲ ಸರ್ಕಾರ ಅಥವಾ ಇಲಾಖೆಯ ಹೊಣೆಯಾಗದೆ, ಸಾರ್ವಜನಿಕರು ಹಾಗೂ ರೈತರ ಸಹಭಾಗಿತ್ವವೂ ಅತ್ಯಗತ್ಯವಾಗಿದೆ. ಮಳೆನೀರನ್ನು ಸಂಗ್ರಹಿಸಿ ಭೂಮಿಗೆ ಇಂಗಿಸುವುದು, ಕೃಷಿಹೊಂಡ ನಿರ್ಮಾಣ, ನೀರಿನ ಮಿತ ಬಳಕೆ ಹಾಗೂ ಲಭ್ಯವಿರುವ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.

ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟದಲ್ಲಿ ಏರಿಳಿತ ಸಹಜ. ಆದರೆ ಅತಿಯಾದ ಕೊಳವೆಬಾವಿ ಬಳಕೆ, ಮಳೆ ಕೊರತೆ ಹಾಗೂ ಅಂತರ್ಜಲ ಮರುಪೂರಣಕ್ಕೆ ನಿರಾಸಕ್ತಿ ಸೇರಿದಂತೆ ಹಲವು ಕಾರಣಗಳಿಂದ ಜಲಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಳೆನೀರು ಕೊಯ್ಲು, ಕೃಷಿಹೊಂಡ ಬಳಕೆ ಮತ್ತು ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ರೈತರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಹನಿ ನೀರು ಅಮೂಲ್ಯ ಎಂಬುದನ್ನು ಅರಿತು ನೀರಿನ ಮಿತ ಬಳಕೆಗೆ ಗಮನ ನೀಡಬೇಕು ಎಂದು ಹಿರಿಯ ಭೂ ವಿಜ್ಞಾನಿ ಪಲ್ಲವಿ ಹೇಳಿದ್ದಾರೆ.

ಅಂತರ್ಜಲ ಮಟ್ಟ: ತಾಲೂಕುವಾರು ಅಂಕಿ-ಅಂಶ

ತಾಲೂಕು| 2021| 2022| 2023| 2024| 2025
ದೇವನಹಳ್ಳಿ| 33.56 ಮೀ| 25.42 ಮೀ| 19.01 ಮೀ| 21.09 ಮೀ| 20.56 ಮೀ
ದೊಡ್ಡಬಳ್ಳಾಪುರ| 31.97 ಮೀ| 23.04 ಮೀ| 20.31 ಮೀ| 23.40 ಮೀ| 22.50 ಮೀ
ಹೊಸಕೋಟೆ| 37.85 ಮೀ| 35.30 ಮೀ| 22.87 ಮೀ| 16.79 ಮೀ| 16.40 ಮೀ
ನೆಲಮಂಗಲ| 34.91 ಮೀ| 33.70 ಮೀ| 27.29 ಮೀ| 33.17 ಮೀ| 35.73 ಮೀ
ಜಿಲ್ಲೆಯ ಸರಾಸರಿ| 34.57 ಮೀ| 29.36 ಮೀ| 22.37 ಮೀ| 23.61 ಮೀ| 23.70 ಮೀ

ಎಷ್ಟು ಕೊಳವೆಬಾವಿ?

– ಒಟ್ಟು: 51,872
– ಕೃಷಿ: 46,842
– ಕುಡಿಯುವ ನೀರು: 3,401
– ಕೈಗಾರಿಕೆ: 1,629
– ಅಂತರ್ಜಲ ಮೇಲ್ವಿಚಾರಣಾ ಕೊಳವೆಬಾವಿಗಳು: 26
– ಗರಿಷ್ಠ ಅಂದಾಜು ಆಳ: 1,250 ಅಡಿ

Ramesh Babu

Journalist

Recent Posts

ಕನಸವಾಡಿ ಶನಿಮಹಾತ್ಮಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಜಿ.ಸತ್ಯನಾರಾಯಣಸ್ವಾಮಿ ನಿಧನ

ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶನಿಮಹಾತ್ಮಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಜಿ. ಸತ್ಯನಾರಾಯಣಸ್ವಾಮಿ (74) ಅವರು ಗುರುವಾರ ರಾತ್ರಿ…

4 hours ago

ಯುವ ಸಂಸತ್ತು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಲಾ ಕಾಲೇಜಿನ ಪುನೀತ್ ಕುಮಾರ್‌ಗೆ ಪ್ರಥಮ ಸ್ಥಾನ; ರಾಜ್ಯಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಜಿಲ್ಲಾ ಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿ ಪುನೀತ್ ಕುಮಾರ್ ಪ್ರಥಮ…

13 hours ago

ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ:*ಪ್ರಜಾಪ್ರಭುತ್ವದ ಅರಿವು ಮೂಡಿಸಲು ಯುವ ಸಂಸತ್ ಉತ್ತಮ ವೇದಿಕೆ-ಡಿಸಿ

ಮಕ್ಕಳೇ ದೇಶದ ಭವಿಷ್ಯದ ಪ್ರಜೆಗಳು. ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ನಾಗರಿಕರಾಗಬೇಕಾದರೆ ಅವರಿಗೆ ಬಾಲ್ಯದಿಂದಲೇ ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು,…

14 hours ago

ಕೆಸ್ತೂರು ಗ್ರಾಮದಲ್ಲಿ ಸ್ಮಶಾನ ಜಾಗಕ್ಕೂ ಕಬಳಿಕೆ ಕಂಟಕ: ಭೂಗಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹ: ದಲಿತ ಕುಟುಂಬಗಳಿಗೆ ಮೀಸಲಿಟ್ಟ ಗೋಮಾಳ ಜಾಗ ರಕ್ಷಣೆಗೆ ಪ್ರಜಾ ವಿಮೋಚನಾ ಚಳವಳಿ ಒತ್ತಾಯ

ದೊಡ್ಡಬಳ್ಳಾಪುರ: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸುಮಾರು 70ರಿಂದ 80 ದಲಿತ ಕುಟುಂಬಗಳು ವಾಸವಿದ್ದು, ಈ ಕುಟುಂಬಗಳಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ…

16 hours ago

ನನ್ನ ಅವಧಿಯಲ್ಲಿ ದೊಡ್ಡಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ

ದೊಡ್ಡಬಳ್ಳಾಪುರ: 2024ರಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಮತದಾರರನ್ನು ಗುರುತಿಸಿ ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸುವ ಉದ್ದೇಶದಿಂದ ಪಕ್ಷದ ವತಿಯಿಂದ 40 ದಿನಗಳ…

19 hours ago

ಸ್ಟೀರಿಂಗ್ ಕಟ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್; ತಪ್ಪಿದ ಭಾರೀ ಅನಾಹುತ: ರಸ್ತೆ ಗುಂಡಿಗಳೇ ಅವಘಡಕ್ಕೆ ಕಾರಣ ಎಂಬ ಶಂಕೆ

ದೊಡ್ಡಬಳ್ಳಾಪುರ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೀರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ…

1 day ago