ಬೆಂಗಳೂರು ಗ್ರಾಮಾಂತರ: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಗೆ ಸರ್ಕಾರ ಅ.20ರವರೆಗೆ ಗಡುವು ವಿಸ್ತರಿಸಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ ಶೇ.26.65ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 3,75,606 ಇ-ಕೆವೈಸಿ ಪ್ರಕ್ರಿಯೆಗಳು ಇನ್ನೂ ಬಾಕಿ ಉಳಿದಿದ್ದು, ವಿಸ್ತರಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಆಹಾರ ಇಲಾಖೆಗೆ ಸವಾಲಾಗಿದೆ.
ಇ-ಕೆವೈಸಿ ಪ್ರಕ್ರಿಯೆ ಆರಂಭಗೊಂಡ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 5,12,096 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 1,36,490 ಪ್ರಕರಣಗಳು ಪೂರ್ಣಗೊಂಡಿದ್ದು, ಇನ್ನೂ 3,75,606 ಪ್ರಕರಣಗಳು ಬಾಕಿ ಉಳಿದಿವೆ. ವಿವಿಧೆಡೆ ಸರ್ವರ್ ಸಮಸ್ಯೆ, ತಾಂತ್ರಿಕ ತೊಂದರೆ ಹಾಗೂ ಪಡಿತರ ಅಂಗಡಿಗಳ ಕಾರ್ಯನಿರ್ವಹಣೆಯಲ್ಲಿನ ವ್ಯತ್ಯಯದಿಂದ ಇ-ಕೆವೈಸಿ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಈ ಹಿಂದೆ ಸೆ.30ರವರೆಗೆ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ನೀಡಲಾಗಿತ್ತು. ಆದರೆ ಹಲವೆಡೆ ತಾಂತ್ರಿಕ ಸಮಸ್ಯೆಯಿಂದ ಪ್ರಕ್ರಿಯೆ ನಿಧಾನಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಅ.20ರವರೆಗೆ ಗಡುವು ವಿಸ್ತರಿಸಿದೆ. ಇದರಿಂದ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ದೊರೆತಂತಾಗಿದೆ.
ದೊಡ್ಡಬಳ್ಳಾಪುರದಲ್ಲಿ 1.21 ಲಕ್ಷ ಬಾಕಿ
ಜಿಲ್ಲೆಯ ತಾಲೂಕುವಾರು ಅಂಕಿ-ಅಂಶ ಗಮನಿಸಿದರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತಿ ಹೆಚ್ಚು 1,21,731 ಇ-ಕೆವೈಸಿ ಪ್ರಕರಣಗಳು ಬಾಕಿ ಉಳಿದಿವೆ. ಒಟ್ಟು 1,59,985 ಪ್ರಕರಣಗಳ ಪೈಕಿ 38,254 ಪೂರ್ಣಗೊಂಡಿದ್ದು, ಶೇ.23.91ರಷ್ಟು ಪ್ರಗತಿ ಸಾಧಿಸಲಾಗಿದೆ.
ಹೊಸಕೋಟೆ ತಾಲೂಕಿನಲ್ಲಿ 1,33,101 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 26,445 ಪೂರ್ಣಗೊಂಡಿದ್ದು, ಇನ್ನೂ 1,06,656 ಪ್ರಕರಣಗಳು ಬಾಕಿ ಇವೆ. ತಾಲೂಕಿನಲ್ಲಿ ಶೇ.19.87ರಷ್ಟು ಪ್ರಗತಿ ದಾಖಲಾಗಿದೆ.
ನೆಲಮಂಗಲ ತಾಲೂಕಿನಲ್ಲಿ 1,10,434 ಪ್ರಕರಣಗಳ ಪೈಕಿ 35,337 ಪೂರ್ಣಗೊಂಡಿದ್ದು, 75,097 ಪ್ರಕರಣಗಳು ಬಾಕಿ ಉಳಿದಿವೆ. ಶೇ.32ರಷ್ಟು ಪ್ರಗತಿ ಸಾಧಿಸಲಾಗಿದೆ.
ದೇವನಹಳ್ಳಿ ತಾಲೂಕಿನಲ್ಲಿ 1,08,576 ಪ್ರಕರಣಗಳ ಪೈಕಿ 36,454 ಇ-ಕೆವೈಸಿ ಪೂರ್ಣಗೊಂಡಿದ್ದು, 72,122 ಪ್ರಕರಣಗಳು ಬಾಕಿ ಇವೆ. ತಾಲೂಕಿನಲ್ಲಿ ಶೇ.33.57ರಷ್ಟು ಪ್ರಗತಿ ದಾಖಲಾಗಿದೆ.
ಸಮಯಕ್ಕೆ ತೆರೆಯದ ಪಡಿತರ ಅಂಗಡಿಗಳು
ಇ-ಕೆವೈಸಿ ಪ್ರಕ್ರಿಯೆ ನಡೆಸಬೇಕಾದ ಪಡಿತರ ಅಂಗಡಿಗಳ ಕಾರ್ಯನಿರ್ವಹಣೆಯ ಬಗ್ಗೆಯೂ ಫಲಾನುಭವಿಗಳಿಂದ ದೂರುಗಳು ಕೇಳಿಬರುತ್ತಿವೆ. ಕೆಲವೆಡೆ ಅಂಗಡಿಗಳು ನಿಗದಿತ ಸಮಯಕ್ಕೆ ತೆರೆಯದಿರುವುದು, ನಿರಂತರವಾಗಿ ಸೇವೆ ಲಭ್ಯವಾಗದಿರುವುದು ಹಾಗೂ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಒಂದಕ್ಕಿಂತ ಹೆಚ್ಚು ಬಾರಿ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಸರ್ಕಾರದ ಸೂಚನೆಯಂತೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಪಡಿತರ ಅಂಗಡಿಗಳು ಕಾರ್ಯನಿರ್ವಹಿಸಬೇಕಿದೆ. ರಜಾ ದಿನಗಳನ್ನು ಹೊರತುಪಡಿಸಿ ತಿಂಗಳ ಎಲ್ಲ ದಿನಗಳಲ್ಲೂ ಪಡಿತರ ವಿತರಿಸುವಂತೆ ಸೂಚಿಸಲಾಗಿದೆ.
ಆದರೆ ಕೆಲವು ಅಂಗಡಿಗಳಲ್ಲಿ ಸಮಯ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳಿದ್ದು, ಕೆಲಸಕ್ಕೆ ತೆರಳುವವರು, ವೃದ್ಧರು ಹಾಗೂ ದೂರದ ಗ್ರಾಮಗಳಿಂದ ಬರುವ ಫಲಾನುಭವಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಈ ಕುರಿತು ಈ ಹಿಂದೆಯೂ ದೂರುಗಳು ಬಂದಿದ್ದರೂ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ ಎನ್ನಲಾಗಿದೆ.
ಅಧಿಕಾರಿಗಳ ಮೇಲ್ವಿಚಾರಣೆ ಅಗತ್ಯ
ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಹೆಚ್ಚುವರಿ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲಿ ಸಮರ್ಪಕ ಸಿಬ್ಬಂದಿ ವ್ಯವಸ್ಥೆ, ಸಮಯ ಪಾಲನೆ ಹಾಗೂ ಫಲಾನುಭವಿಗಳಿಗೆ ಅಗತ್ಯ ಮಾರ್ಗದರ್ಶನ ಕಲ್ಪಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಗುರುತಿಸಿ, ತಾಲೂಕು ಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ.
ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಪಡಿತರ ಸೌಲಭ್ಯ ಪಡೆಯುವಲ್ಲಿ ತೊಂದರೆಯಾಗಬಹುದು ಎಂಬ ಆತಂಕ ಫಲಾನುಭವಿಗಳಲ್ಲಿದೆ. ಹೀಗಾಗಿ ಅರ್ಹ ಪಡಿತರ ಚೀಟಿದಾರರು ಅ.20ರೊಳಗೆ ತಮ್ಮ ವ್ಯಾಪ್ತಿಯ ಪಡಿತರ ಅಂಗಡಿಗೆ ತೆರಳಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತಾಲೂಕುವಾರು ಬಾಕಿ
ತಾಲೂಕು| ಇ-ಕೆವೈಸಿ ಬಾಕಿ
ದೇವನಹಳ್ಳಿ| 72,122
ದೊಡ್ಡಬಳ್ಳಾಪುರ| 1,21,731
ಹೊಸಕೋಟೆ| 1,06,656
ನೆಲಮಂಗಲ| 75,097
ಒಟ್ಟು| 3,75,606
ಜಿಲ್ಲೆಯಲ್ಲಿ ಒಟ್ಟಾರೆ ಚಿತ್ರ
– ಆರಂಭಿಕ ಬಾಕಿ: 5,12,096
– ಪೂರ್ಣಗೊಂಡಿರುವುದು: 1,36,490
– ಇನ್ನೂ ಬಾಕಿ: 3,75,606
– ಪ್ರಗತಿ: ಶೇ.26.65
– ಅಂತಿಮ ಗಡುವು: ಅ.20
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ಅ.20ರವರೆಗೂ ಕೆವೈಸಿ ಮಾಡಿಸಿಕೊಳ್ಳುವ ಗಡುವನ್ನು ಸರ್ಕಾರ ವಿಸ್ತರಿಸಿದೆ. ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಬಳಸಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…
ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…
ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…
ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…
ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…