ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು ಮತ್ತು ಚೆನ್ನೈ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದ್ದು, ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

‘ಪ್ರಗತಿ ಪಥ ಯಾತ್ರೆ ದರ್ಶನ’ ಕಾರ್ಯಕ್ರಮದ ಅಂಗವಾಗಿ ದೇವನಹಳ್ಳಿ ಸಮೀಪ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಪ್ರಮುಖ ಭಾಗವಾಗಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ ಹಾಗೂ ನರಸಾಪುರ ಕೈಗಾರಿಕಾ ವಲಯ ಸೇರಿದಂತೆ ಹಲವು ಮ್ಯಾನುಫ್ಯಾಕ್ಚರಿಂಗ್ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇದರಿಂದ ಕೈಗಾರಿಕಾ ಚಟುವಟಿಕೆಗಳು ವಿಸ್ತರಿಸಿ, ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿದ್ದು, ‘ವಿಕಸಿತ ಭಾರತ’ ನಿರ್ಮಾಣದ ಗುರಿಗೆ ಇಂತಹ ಯೋಜನೆಗಳು ಬಲ ತುಂಬಲಿವೆ ಎಂದು ಹೇಳಿದರು.

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ‘ಭಾರತಮಾಲಾ ಪರಿಯೋಜನೆ ಹಂತ-1’ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪ್ರಮುಖ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆಯಾಗಿದ್ದು, ದೇಶದ ಎರಡು ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ನಗರಗಳ ನಡುವೆ ವೇಗದ ಹಾಗೂ ತಡೆರಹಿತ ಸಂಚಾರ ವ್ಯವಸ್ಥೆ ಒದಗಿಸಲಿದೆ ಎಂದರು.

“ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ತತ್ವದಡಿ ದೇಶ ಮುನ್ನಡೆಯುತ್ತಿದ್ದು, ತೆರಿಗೆ ಸಂಗ್ರಹಣೆಯ ಆಧಾರದ ಮೇಲೆ ಮಾತ್ರ ಅನುದಾನ ಹಂಚಿಕೆ ನಡೆಯುವುದಿಲ್ಲ. ರಾಜ್ಯದ ವಿವಿಧ ಭಾಗಗಳಿಂದ ತೆರಿಗೆ ಸಂಗ್ರಹವಾಗುವುದರಿಂದ ಕೇವಲ ಬೆಂಗಳೂರು ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ವಾದ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಗಳ ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರಬೇಕು. ಅಗತ್ಯ ನಿಧಿ ವ್ಯವಸ್ಥೆ ಬಗ್ಗೆ ಸದನದಲ್ಲಿ ಚರ್ಚಿಸಿ ಬಜೆಟ್‌ನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬೇಕಾಬಿಟ್ಟಿ ಗ್ಯಾರಂಟಿಗಳನ್ನ ಕೊಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನ ಕೊಡುತ್ತಿವೆ. ನಿಮ್ಮಿಂದ ಕೊಡಲು ಆಗದಿದ್ದರೆ ಸದನದಲ್ಲಿ ಚರ್ಚೆ ಮಾಡಿ, ಬಜೆಟ್‌ನಲ್ಲಿ ನಿಧಿ ಸಂಗ್ರಹದ ಬಗ್ಗೆ ಪ್ಲಾನ್ ಮಾಡಿ. ಅದನ್ನು ಬಿಟ್ಟು ಬೇಕಾಬಿಟ್ಟಿ ಗ್ಯಾರಂಟಿ ಕೊಡೋದ್ರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ಚಿಕ್ಕಬಳ್ಳಾಪುರ ಭಾಗದಲ್ಲಿ ಹೂವು ಮತ್ತು ಹಣ್ಣುಗಳ ಉತ್ಪಾದನೆ ಹೆಚ್ಚಿದ್ದರೂ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಕೊರತೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಬೇಡಿಕೆ ಬಂದಿಲ್ಲ. ಕೇಂದ್ರ ಬಜೆಟ್‌ನಲ್ಲಿ ಅಗತ್ಯ ಅನುದಾನದ ಅವಕಾಶ ಇದ್ದರೂ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತಿಳಿಸಿದರು.

ಡಿಜಿಟಲ್ ಪಾವತಿ ವ್ಯವಸ್ಥೆ, ದೇಶಾದ್ಯಂತ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಹಾಗೂ ವಾಯುಕ್ಷೇತ್ರದ ಸಂಪರ್ಕದಲ್ಲಿನ ಕ್ರಾಂತಿ- ಇವು ಪ್ರಧಾನಿ ನರೇಂದ್ರ ಮೋದಿ ಸರಕಾರದ ಪ್ರಮುಖ ಕ್ರಾಂತಿಕಾರಿ ಸಾಧನೆಗಳು ಎಂದು ವಿಶ್ಲೇಷಿಸಿದರು.

ಅಮೆರಿಕವು ಬಡ್ಡಿ ದರ ಕಡಿಮೆ ಮಾಡುವುದು, ಅಮೆರಿಕದ ಹಣಕಾಸು ಕ್ಷೇತ್ರದ ಕ್ರಮಗಳು ಕೂಡ ರೂಪಾಯಿಯ ವಿನಿಮಯ ದರ ಏರುಪೇರಿಗೆ ಕಾರಣವಾಗಿದೆ. ಜಪಾನ್ ಯೆನ್ ಕೂಡ ಡಾಲರ್ ಎದುರು ಮೌಲ್ಯ ಕಳೆದುಕೊಂಡಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ನಾವು ಕಚ್ಚಾ ತೈಲ, ಗ್ಯಾಸ್ ಅನ್ನು ಹೊರಗಿನಿಂದ ತರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಾವು ಸ್ವಾವಲಂಬಿಗಳಲ್ಲ. ಇದಕ್ಕೆ ಪಾವತಿಯನ್ನು ಡಾಲರ್ ನಲ್ಲೇ ಮಾಡಬೇಕಿದೆ. ಎರಡನೇಯದಾಗಿ ಗರಿಷ್ಠ ಪ್ರಮಾಣದ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತೇವೆ. ರಸಗೊಬ್ಬರದ ಆಮದು ವೆಚ್ಚ ಹೆಚ್ಚಾಗುತ್ತಿದೆ. ಕೋವಿಡ್ ಅವಧಿಯಲ್ಲಿ ನಾವು ರಸಗೊಬ್ಬರದ ಬ್ಯಾಗ್‍ಗೆ ಸುಮಾರು 300 ರೂ. ದರ ನಿಗದಿಪಡಿಸಿದ್ದೇವೆ. ಅದೇ ಬ್ಯಾಗ್ ಆಮದು ದರ 3 ಸಾವಿರಕ್ಕೆ ಏರಿದೆ. ಇದರಿಂದ 2700 ರೂ. ಸಬ್ಸಿಡಿಯನ್ನು ಕೇಂದ್ರವು ನೀಡಬೇಕಿದೆ ಎಂದು ವಿವರಿಸಿದರು.

ಇದಲ್ಲದೇ, ಚಿನ್ನದ ಆಮದು ಮಾಡಿಕೊಂಡು ಡಾಲರ್ ನಲ್ಲಿ ಪಾವತಿ ನಡೆಯುತ್ತಿದೆ. ಚಿನ್ನದ ಪ್ರತಿ ಔನ್ಸ್ ದರ ರಾಕೆಟ್‍ನಂತೆ ತೀವ್ರವಾಗಿ ಏರುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿಯವರು ಕಾರ್ ಪೂಲಿಂಗ್‍ನಂಥ ಕ್ರಮಕ್ಕೆ ಮುಂದಾಗಲು ಮನವಿ ಮಾಡಿದ್ದಾಗಿ ವಿವರ ನೀಡಿದರು.

ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ಭಾವಿಸಿದರೆ, ಯಾದಗಿರಿ, ಕಲಬುರ್ಗಿ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಕೊಡಬೇಕು? ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಕರ್ನಾಟಕದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕರು ಇದೆಲ್ಲವನ್ನೂ ತಿಳಿದಿದ್ದಾರೆ. ಆದರೂ, ಅವರು ಸದ್ದುಗದ್ದಲ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮನೆಗಳ ನಿರ್ಮಾಣ, ಶೌಚಾಲಯ ನಿರ್ಮಾಣ, ಮನೆಮನೆಗೆ ನಲ್ಲಿ ನೀರು ಮೊದಲಾದ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಕೇಂದ್ರವು ನೆರವಾಗುತ್ತಿದೆ ಎಂದರು.

ಅಣ್ಣಾಮಲೈ ಅವರು ಪಕ್ಷ ತೊರೆದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕೇಡರ್ ಆಧರಿತ ಪಕ್ಷ. ಜನಸಂಘದ ಸ್ಥಾಪಕರಾದ ಬಾಲರಾಜ ಮಧೋಕ್ ಅವರು ಕೆಲ ಸಮಯದ ಬಳಿಕ ಪಕ್ಷ ತೊರೆದಿದ್ದರು. ಕಲ್ಯಾಣ್ ಸಿಂಗ್ ಅವರೂ ಪಕ್ಷ ತೊರೆದು ಕೆಲ ಸಮಯದ ಬಳಿಕ ಪಕ್ಷಕ್ಕೆ ಮರಳಿದ್ದಾರೆ. ಉಮಾಭಾರತಿಯವರು, ಯಡಿಯೂರಪ್ಪನವರು ಒಂದು ಸಂದರ್ಭದಲ್ಲಿ ಪಕ್ಷ ತೊರೆದಿದ್ದರು. ಆದರೆ, ಪಕ್ಷ ಮುಂದುವರೆಯಿತು. ಯಡಿಯೂರಪ್ಪನವರು ಪಕ್ಷಕ್ಕೆ ಮರಳಿದಾಗ ನಾವು ಸಂತಸಪಟ್ಟೆವು ಎಂದು ವಿಶ್ಲೇಷಿಸಿದರು.

ಮೋದಿ ಅವರ ನೇತೃತ್ವದ 12 ಪೂರ್ಣ ವರ್ಷಗಳ ಕಾರ್ಯನಿರ್ವಹಣೆಯು ದಾಖಲೆಗಳ ಅವಧಿ ಎಂದು ತಿಳಿಸಿದರು. ಪ್ರಧಾನಿಯಾಗಿ 4,399 ದಿನಗಳ ಆಡಳಿತದ ಗರಿಷ್ಠ ದಾಖಲೆಯನ್ನೂ ಮೋದಿಯವರು ಮಾಡಿದ್ದಾರೆ ಎಂದು ತಿಳಿಸಿದರು. ಈ ಮೂಲಕ ನೆಹರೂ ಅವರ ಚುನಾಯಿತ ಪ್ರಧಾನಿಯಾಗಿ ಅವಧಿಯ ದಾಖಲೆಯನ್ನು ಮುರಿದಿದ್ದಾರೆ ಎಂದರು.

ಕರ್ನಾಟಕದಲ್ಲಿ ಶೇ 96ರಷ್ಟು ವಿದ್ಯುದೀಕೃತ ರೈಲ್ವೆ ವ್ಯವಸ್ಥೆ ಈಗ ಸಾಧ್ಯವಾಗಿದೆ. ಹೊಸ ವಂದೇ ಭಾರತ್ ಎಕ್ಸ್‍ಪ್ರೆಸ್‍ಗಳನ್ನು ಆರಂಭಿಸಲಾಗಿದೆ. ಏಮ್ಸ್, ಐಐಟಿಗಳನ್ನು ದೇಶಾದ್ಯಂತ ಆರಂಭಿಸಿದ್ದೇವೆ ಎಂದು ಅವರು ಮೋದಿಯವರ ಸರಕಾರದ ಕ್ರಾಂತಿಕಾರಿ ಸಾಧನೆಗಳ ವಿವರ ನೀಡಿದರು.

ಆದಾಯ ತೆರಿಗೆ ಮಿತಿ 2014ರಲ್ಲಿ 2.5 ಲಕ್ಷ ಆಗಿತ್ತು. ಅದನ್ನು ಈಗ 12.75 ಲಕ್ಷಕ್ಕೆ ಏರಿಸಿದ್ದೇವೆ. ಇದು ಮಧ್ಯಮ ವರ್ಗದವರಿಗೆ ಕೊಟ್ಟ ಕೊಡುಗೆ ಎಂದು ತಿಳಿಸಿದರು. ಜಿಎಸ್‍ಟಿಯಿಂದಾಗಿ ತೆರಿಗೆ ವ್ಯವಸ್ಥೆಯ ಸುಧಾರಣೆ ಎಂದು ಅವರು ಹೇಳಿದರು.

ರಾಜ್ಯದ್ಯಕ್ಷರಾದ ಬಿ.ವೈ ವಿಜಯೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ, ಕೇವಲ ದಿನಗಳಲ್ಲಿ  ಸಾಧನೆಯಲ್ಲ ,ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದಾರೆ .ಜಗತ್ತಿನ ನಾಲ್ಕನೇ ಶಕ್ತಿಯುತ ರಾಷ್ಟ್ರವಾಗಿ ಬೆಳೆಯಲು ಕೇವಲ ಭಾಷಣದಿಂದ ಮಾತ್ರ ಸಾಧ್ಯವಿಲ್ಲ ಅವರ ನಾಯಕತ್ವದಿಂದ ಇದೆಲ್ಲವು ಸಾಧ್ಯ ಎಂದು ಹೇಳಿದರು.

ಸಂಸದ ಡಾ.ಕೆ ಸುಧಾಕರ್ ಮಾತನಾಡಿ, ಮುಂಬರುವ ಚುನಾವಣೆಗಳಿಗೆ ಕಾಲಾವಕಾಶ ಕಡಿಮೆ ಇದ್ದು,ಪಕ್ಷವು ಸ್ವಕ್ಷೇತ್ರದ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕು, ಅಹಿಂದ ನಾಯಕತ್ವಕ್ಕೆ ತಿಲಾಂಜಲಿ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಅಹಿಂದರನ್ನು ಮತ್ತು ದಲಿತರನ್ನು ಮತಗಳಿಗೆ ಮಾತ್ರ ಸೀಮಿತವಾಗಿಸಿದ್ದಾರೆ, ಆದರೆ ಬಿಜೆಪಿ ಪಕ್ಷ ಜಾತ್ಯಾತೀತವಾಗಿ ಈ ದೇಶದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದಾಗಿದೆ ಅದರಿಂದ ಪಕ್ಷ ಸಂಘಟನೆಗೆ ಇನ್ನಷ್ಟು ಚುರುಕಾಗಿ ಶ್ರಮಿಸಬೇಕು ಮತ್ತೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆ ಮಾಡಬೇಕಾಗಿದೆ ಎಂದರು.

ಈ ವೇಳೆ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಮಾಜಿ ಶಾಸಕ ಚಂದ್ರಣ್ಣ, ದೇವನಹಳ್ಳಿ ಮಂಡಲದ ಅಧ್ಯಕ್ಷ ಅಂಬರೀಷ್ ಗೌಡ, ವಿಭಾಗ ಪ್ರಭಾರಿ ಬ್ಯಾಟರಂಗೇಗೌಡ, ವಿಧಾನಪರಿಷತ್ ಸದಸ್ಯ ಎಸ್. ಕೇಶವ ಪ್ರಸಾದ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಮುಖರು ಇದ್ದರು.

Ramesh Babu

Journalist

Recent Posts

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

11 hours ago

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

1 day ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

2 days ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

3 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

3 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

4 days ago