ಅರ್ಧ ದಾರಿಯಲ್ಲೇ ಕೆಟ್ಟು ನಿಂತ ಸರ್ಕಾರಿ ಬಸ್: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಮಸ್ಯೆ ಮುಂದುವರಿಕೆ | ಸುಸ್ಥಿತಿಯಲ್ಲಿರುವ ಬಸ್‌ಗಳ ಸಂಚಾರಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಪದೇಪದೇ ಮಾರ್ಗಮಧ್ಯದಲ್ಲೇ ಕೆಟ್ಟು ನಿಲ್ಲುವ ಸಮಸ್ಯೆ ಮುಂದುವರಿದಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಇಂದು ದೊಡ್ಡಹಳ್ಳದಲ್ಲಿ ಸರ್ಕಾರಿ ಬಸ್‌ವೊಂದು ಮಾರ್ಗಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡು ರಸ್ತೆಯಲ್ಲೇ ನಿಂತು ಪರದಾಡುವಂತಾಯಿತು. ಬೆಳಗಿನ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಬಸ್‌ ಸೇವೆ ಸ್ಥಗಿತಗೊಂಡಿದ್ದರಿಂದ ತೊಂದರೆ ಅನುಭವಿಸಿದರು.

ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಪದೇಪದೇ ಕೈಕೊಡುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಸ್‌ಗಳು ಅರ್ಧ ದಾರಿಯಲ್ಲೇ ಕೆಟ್ಟು ನಿಲ್ಲುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಪದೇಪದೇ ಬಸ್‌ಗಳು ಕೆಟ್ಟು ನಿಲ್ಲುತ್ತಿದ್ದರೂ ಸಾರಿಗೆ ಇಲಾಖೆ ಏಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರ್ಗಕ್ಕೆ ಬಸ್‌ಗಳನ್ನು ಕಳುಹಿಸುವ ಮುನ್ನ ಅವುಗಳ ತಾಂತ್ರಿಕ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಪದೇಪದೇ ಕೆಟ್ಟು ನಿಲ್ಲುವ ಬಸ್‌ಗಳ ಬದಲಿಗೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ನಿಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪ್ರತಿದಿನ ನೂರಾರು ಪ್ರಯಾಣಿಕರು ಅವಲಂಬಿಸಿರುವ ಈ ಮಾರ್ಗದ ಸಾರಿಗೆ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ, ಬಸ್‌ಗಳ ನಿರ್ವಹಣೆ ಹಾಗೂ ಸೇವೆಯ ಗುಣಮಟ್ಟ ಸುಧಾರಿಸಬೇಕು. ಸಮಸ್ಯೆ ಮುಂದುವರಿದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!