
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ ಸರಣಿ ಅಪಘಾತ ಸಂಭವಿಸಿದೆ.
ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ಕಡೆಗೆ ಸಾಗುತ್ತಿದ್ದ ಲಾರಿಯ ಚಾಲಕನ ನಿಯಂತ್ರಣ ತಪ್ಪಿದ್ದು, ಮೊದಲು ತನ್ನ ಮುಂದೆ ಸಂಚರಿಸುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಲಾರಿ ರಸ್ತೆ ವಿಭಜಕ ದಾಟಿ ಎದುರುಗಡೆಯ ರಸ್ತೆಗೆ ನುಗ್ಗಿ, ಎದುರಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೂ ಡಿಕ್ಕಿ ಹೊಡೆದಿದೆ.

ಅಪಘಾತದ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳದಲ್ಲಿದ್ದ ಹೆದ್ದಾರಿ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಭೀಕರ ದೃಶ್ಯಗಳು ಸೆರೆಯಾಗಿವೆ.
ಅದೃಷ್ಟವಶಾತ್ ಲಾರಿ, ಟ್ರಾಕ್ಟರ್ ಹಾಗೂ ಬೊಲೆರೋ ವಾಹನಗಳ ಚಾಲಕರು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.

ಘಟನೆಯ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.