ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಹಾನದಿ ನಾರ್ದರ್ನ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಪ್ರಸಂಜಿತ್ ದಾಸ್ ಅವರ ಬಳಿ ಒಟ್ಟು 21,88,620 ನಗದನ್ನು ಪತ್ತೆಹಚ್ಚಿದ್ದಾರೆ.

ಕಟಕ್ ಜಿಲ್ಲೆಯ ಜಗತ್ಪುರದಲ್ಲಿರುವ ಮಹಾನದಿ ನಾರ್ದರ್ನ್ ವಿಭಾಗದಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಂಜಿತ್ ದಾಸ್ ಅವರು, ಶುಕ್ರವಾರ ತಡರಾತ್ರಿ ಭುವನೇಶ್ವರದ ಎ.ಜಿ. ಚೌಕ್ ಸಮೀಪ ಅಧಿಕೃತವಾಗಿ ಬಾಡಿಗೆಗೆ ಪಡೆದಿದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಜಿಲೆನ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಅವರ ಬಳಿಯಿದ್ದ 7,28,620 ನಗದು ಪತ್ತೆಯಾಗಿದೆ.

ಇದಾದ ಬಳಿಕ ಶನಿವಾರ ಬೆಳಗಿನ ಜಾವ ಅವರ ಬಾಡಿಗೆ ಮನೆ ಹಾಗೂ ಪಿತ್ರಾರ್ಜಿತ ಮನೆಯ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಬಾಡಿಗೆ ಫ್ಲ್ಯಾಟ್‌ನಲ್ಲಿ ನಡೆಸಿದ ಶೋಧದ ವೇಳೆ ಹೆಚ್ಚುವರಿಯಾಗಿ 14,60,000 ನಗದು ಪತ್ತೆಯಾಗಿದೆ.

ಒಟ್ಟು 21,88,620 ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಲೆಕ್ಕಪತ್ರ ಹಾಗೂ ಮೂಲವನ್ನು ತಿಳಿಸಲು ಪ್ರಸಂಜಿತ್ ದಾಸ್ ವಿಫಲರಾದ ಹಿನ್ನೆಲೆಯಲ್ಲಿ, ವಿಜಿಲೆನ್ಸ್ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಪತ್ತೆಯಾದ ಹಣದ ಮೂಲ ಹಾಗೂ ಅಕ್ರಮವಾಗಿ ಸಂಪಾದಿಸಿದ ಹಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಈ ಸಂಬಂಧ ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!