ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ: ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ವಿತರಣೆ

ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ ದುರ್ಬಳಕೆ ತಡೆದು, ಲಭ್ಯವಿರುವ ದಾಸ್ತಾನನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ರಾಜ್ಯ ಸರ್ಕಾರ ರೈತರ ಫಾರ್ಮರ್ ಐಡಿ (ಎಫ್‌ಐಡಿ) ಆಧಾರಿತ ವಿತರಣಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಯೂರಿಯಾ ಖರೀದಿಸಲು ರೈತರು ಎಫ್‌ಐಡಿ ಹೊಂದಿರುವುದು ಅನಿವಾರ್ಯವಾಗಿದ್ದು, ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾತ್ರ ರಸಗೊಬ್ಬರ ವಿತರಣೆ ನಡೆಯಲಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕ ರಸಗೊಬ್ಬರ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮ ಭಾರತದಲ್ಲಿಯೂ ಯೂರಿಯಾ ಲಭ್ಯತೆ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಕಂಡುಬಂದಿದ್ದು, ಮುಂಗಾರು ಹಂಗಾಮಿನಲ್ಲಿ ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಎಫ್‌ಐಡಿ ಇಲ್ಲದೆ ಯೂರಿಯಾ ಸಿಗದು

ಕೃಷಿ ಇಲಾಖೆಯ ಸೂಚನೆಯಂತೆ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಕೃಷಿ ಜಮೀನುಗಳ ಆರ್‌ಟಿಸಿ ಅಥವಾ ಪಹಣಿ ದಾಖಲೆಗಳನ್ನು ಎಫ್‌ಐಡಿಗೆ ಜೋಡಿಸಬೇಕು. ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಅಥವಾ ದಾಖಲೆಗಳನ್ನು ಜೋಡಿಸಲು ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಸಂಖ್ಯೆ, ಪಹಣಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿ ಎಫ್‌ಐಡಿ ಪಡೆಯಬಹುದಾಗಿದೆ. ಇದುವರೆಗೆ ನೋಂದಣಿ ಮಾಡಿಸದ ರೈತರು ಶೀಘ್ರ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ಎಕರೆಗೆ ತಿಂಗಳಿಗೆ 45 ಕೆಜಿ

ಹೊಸ ನಿಯಮದ ಪ್ರಕಾರ, ರೈತರಿಗೆ ಪ್ರತಿ ತಿಂಗಳು ಒಂದು ಎಕರೆಗೆ ಒಂದು ಬ್ಯಾಗ್ (45 ಕೆಜಿ) ಯೂರಿಯಾ ಮಾತ್ರ ನೀಡಲಾಗುತ್ತದೆ. ಅಧಿಕೃತ ರಸಗೊಬ್ಬರ ಮಾರಾಟಗಾರರು ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್‌ಐಡಿ ಸಂಖ್ಯೆ ದಾಖಲಿಸಿ ಮಾತ್ರ ಯೂರಿಯಾ ಮಾರಾಟ ಮಾಡಬೇಕಿದೆ.

ಈ ವ್ಯವಸ್ಥೆಯಿಂದ ಯೂರಿಯಾ ಸಂಗ್ರಹಣೆ, ಅಕ್ರಮ ಮಾರಾಟ ಹಾಗೂ ಬೇರೆ ಉದ್ದೇಶಗಳಿಗೆ ದುರ್ಬಳಕೆಯನ್ನು ತಡೆಯಲು ಸಾಧ್ಯವಾಗಲಿದೆ ಎಂದು ಕೃಷಿ ಇಲಾಖೆ ಅಭಿಪ್ರಾಯಪಟ್ಟಿದೆ.

ಡಿಎಪಿಗೂ ಇದೇ ಮಾದರಿ?

ಯೂರಿಯಾ ವಿತರಣೆಯಂತೆ ಡಿಎಪಿ ಸೇರಿದಂತೆ ಇತರೆ ಪ್ರಮುಖ ರಸಗೊಬ್ಬರಗಳಿಗೂ ಇದೇ ಮಾದರಿಯ ನಿಯಂತ್ರಿತ ವಿತರಣಾ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಪರಿಸ್ಥಿತಿ ಹೇಗಿರಲಿದೆ ಎಂಬುದು ರೈತರಲ್ಲಿ ಕುತೂಹಲ ಮೂಡಿಸಿದೆ.

ಜಿಲ್ಲೆಗೆ 11,418 ಮೆಟ್ರಿಕ್ ಟನ್ ಯೂರಿಯಾ ಅಗತ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷ 69,548 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಒಟ್ಟು 11,418 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ.

ತಿಂಗಳವಾರು ಬೇಡಿಕೆ ಹೀಗಿದೆ:

ಜೂನ್ : 2,374 ಮೆ.ಟನ್

ಜುಲೈ : 2,462 ಮೆ.ಟನ್

ಆಗಸ್ಟ್ : 2,130 ಮೆ.ಟನ್

ಸೆಪ್ಟೆಂಬರ್ : 2,022 ಮೆ.ಟನ್

ಇದರ ಜೊತೆಗೆ 7,567 ಮೆ.ಟನ್ ಡಿಎಪಿ, 1,354 ಮೆ.ಟನ್ ಎಂಒಪಿ, 14,744 ಮೆ.ಟನ್ ಕಾಂಪ್ಲೆಕ್ಸ್ ಹಾಗೂ 1,086 ಮೆ.ಟನ್ ಎಸ್‌ಎಸ್‌ಪಿ ಅಗತ್ಯವಿದ್ದು, ಒಟ್ಟು 36,169 ಮೆ.ಟನ್ ರಸಗೊಬ್ಬರಗಳ ಬೇಡಿಕೆ ಇದೆ.

ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ವೇಗ

ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಹಲವೆಡೆ ಮೊದಲ ಹಂತದ ಬಿತ್ತನೆ ಪೂರ್ಣಗೊಂಡಿದ್ದು, ಉಳಿಮೆ ಕಾರ್ಯಗಳು ಸಾಗುತ್ತಿವೆ.

ಜೂನ್ ಅಂತ್ಯ ಹಾಗೂ ಜುಲೈ ಮೊದಲಾರ್ಧದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಬಿತ್ತನೆ ಕಾರ್ಯ ಗರಿಗೆದರಲಿದೆ.

ಕೃಷಿ ಇಲಾಖೆ ಈಗಾಗಲೇ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದ್ದು, ರೈತರಿಗೆ ವಿತರಣೆ ಪ್ರಕ್ರಿಯೆ ಮುಂದುವರಿದಿದೆ.

ಪ್ರಮುಖಾಂಶಗಳು

ಒಟ್ಟು ಮುಂಗಾರು ಬಿತ್ತನೆ ಗುರಿ: 69,548 ಹೆಕ್ಟೇರ್

ಯೂರಿಯಾ ಒಟ್ಟು ಬೇಡಿಕೆ: 11,418 ಮೆ.ಟನ್

ಪ್ರತಿ ಎಕರೆಗೆ ತಿಂಗಳಿಗೆ: 45 ಕೆಜಿ ಯೂರಿಯಾ

ಯೂರಿಯಾ ಖರೀದಿಗೆ: ಎಫ್‌ಐಡಿ ಕಡ್ಡಾಯ

ಮಾರಾಟ ವ್ಯವಸ್ಥೆ: ಕೆ-ಕಿಸಾನ್ ತಂತ್ರಾಂಶದ ಮೂಲಕ

ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದ ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ರೈತರಿಗೆ ಸಮರ್ಪಕವಾಗಿ ಯೂರಿಯಾ ದೊರಕುವಂತೆ ಎಫ್‌ಐಡಿ ಆಧಾರಿತ ವಿತರಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರತಿ ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ಯೂರಿಯಾ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!