
ಸಮರ್ಪಕ ದಾಖಲೆಗಳಿಲ್ಲದೆ ವಿದೇಶಗಳಿಂದ ಬಂದು ಜಿಲ್ಲೆಯಲ್ಲಿ ನೆಲೆಸಿರುವವರ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ಐವರು ನೈಜೀರಿಯಾ ಪ್ರಜೆಗಳು ಅಗತ್ಯ ದಾಖಲೆಗಳಿಲ್ಲದೆ ವಾಸವಾಗಿರುವುದು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಕೈಗಾರಿಕಾ ಪ್ರದೇಶಗಳು, ಬಾಡಿಗೆ ಮನೆಗಳು, ಲಾಡ್ಜ್ಗಳು ಹಾಗೂ ಗೆಸ್ಟ್ಹೌಸ್ಗಳಲ್ಲಿ ತೀವ್ರ ತಪಾಸಣೆ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯನ್ನು ಹೊಂದಿರುವುದರ ಜತೆಗೆ, ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಉದ್ಯೋಗ ಹಾಗೂ ಇತರ ಉದ್ದೇಶಗಳಿಗಾಗಿ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಇವರಲ್ಲಿ ಬಹುತೇಕರು ಅಗತ್ಯ ದಾಖಲೆಗಳೊಂದಿಗೆ ನೆಲೆಸಿದ್ದರೆ, ಕೆಲವರು ವೀಸಾ, ಪಾಸ್ಪೋರ್ಟ್ ಸೇರಿದಂತೆ ಕಾನೂನುಬದ್ಧ ದಾಖಲೆಗಳಿಲ್ಲದೆ ವಾಸಿಸುತ್ತಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಗಾ ಹೆಚ್ಚಿಸಿದೆ.

ಮನೆಮನೆಗೆ ಪೊಲೀಸರ ಭೇಟಿ; ಐವರು ಪತ್ತೆ
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಹಾಗೂ ರಾತ್ರಿ ಗಸ್ತು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳು ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿರುವುದು ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐವರು ನೈಜೀರಿಯಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಇವರು ವೀಸಾ, ಪಾಸ್ಪೋರ್ಟ್ನಂತಹ ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಕಳೆದ ಮೂರರಿಂದ ನಾಲ್ಕು ತಿಂಗಳಿನಿಂದ ಅವರು ಈ ಪ್ರದೇಶದಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಈ ಪ್ರಕರಣಗಳ ಬೆನ್ನಲ್ಲೇ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ವಿದೇಶಿ ಪ್ರಜೆಗಳು ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದವರ ಬಳಿ ಮಾದಕ ವಸ್ತುಗಳಿವೆಯೇ ಎಂಬ ಬಗ್ಗೆಯೂ ತಪಾಸಣೆ ನಡೆಸಲಾಗಿದೆ. ಸದ್ಯ ಮೂವರು ವಿದೇಶಿ ಪ್ರಜೆಗಳನ್ನು ಮಾದನಾಯಕನಹಳ್ಳಿ ಬಳಿಯ ವಿದೇಶಿ ಪ್ರಜೆಗಳ ಕೇಂದ್ರದಲ್ಲಿರಿಸಲಾಗಿದ್ದು, ಮತ್ತಿಬ್ಬರನ್ನು ಯಲಹಂಕ ಬಳಿಯ ಸತ್ಯಸಾಯಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಬಂಧಪಟ್ಟ ದೇಶದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಮುಂದುವರಿದಿದೆ.

22 ಕೈಗಾರಿಕಾ ವಲಯಗಳ ಮೇಲೆ ನಿಗಾ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 22 ಕೈಗಾರಿಕಾ ವಲಯಗಳಿದ್ದು, ಲಕ್ಷಾಂತರ ಕಾರ್ಮಿಕರು ವಿವಿಧ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದ ಬಂದು ಉದ್ಯೋಗ ಮಾಡುತ್ತಿದ್ದಾರೆ. ಇವರಲ್ಲಿ ಅನೇಕರು ಕೈಗಾರಿಕಾ ಪ್ರದೇಶಗಳ ಸುತ್ತಮುತ್ತಲಿನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಆದರೆ, ಕೆಲವು ಮನೆ ಮಾಲೀಕರು ಬಾಡಿಗೆ ಹಣದ ಆಸೆಯಿಂದ ಬಾಡಿಗೆಗೆ ಬರುವವರ ಪೂರ್ಣ ವಿವರಗಳನ್ನು ಸಂಗ್ರಹಿಸದೆ, ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಹಾಗೂ ಸೂಕ್ತ ಬಾಡಿಗೆ ಕರಾರು ಮಾಡಿಕೊಳ್ಳದೆ ಮನೆಗಳನ್ನು ಬಾಡಿಗೆಗೆ ನೀಡುತ್ತಿರುವ ಆರೋಪಗಳಿವೆ. ಇದರಿಂದ ಮನೆಗಳಲ್ಲಿ ಯಾರು ವಾಸಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾಡಿಗೆ ಮನೆಗಳ ಸಮಗ್ರ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಟ್ಟಡಗಳ ಕೆಲವು ಮಹಡಿಗಳಿಗೆ ಮಾತ್ರ ಸೀಮಿತವಾಗದೆ, ಎಲ್ಲ ಮಹಡಿಗಳಲ್ಲಿರುವ ಮನೆಗಳನ್ನೂ ಪರಿಶೀಲಿಸುವಂತೆ ಸೂಚಿಸಲಾಗಿದೆ. ಮನೆ ಬಾಗಿಲು ಮುಚ್ಚಿದ್ದರೆ ಅದನ್ನು ನಿರ್ಲಕ್ಷಿಸದೆ, ಪುನಃ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ಇದರೊಂದಿಗೆ ಬಾಡಿಗೆ ಮನೆಗಳ ಮಾಲೀಕರಿಗೆ ಬಾಡಿಗೆದಾರರ ಗುರುತು ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ.
ಬಾಕ್ಸ್…
ಲಾಡ್ಜ್, ಗೆಸ್ಟ್ಹೌಸ್ಗಳಲ್ಲೂ ತಪಾಸಣೆ
ರಾಜ್ಯದ ವಿವಿಧೆಡೆ ಅಕ್ರಮ ವಲಸಿಗರ ಕುರಿತು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೊಡ್ಡಬಳ್ಳಾಪುರದಲ್ಲಿ ನೈಜೀರಿಯಾ ಪ್ರಜೆಗಳು ಪತ್ತೆಯಾದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕೇವಲ ಬಾಡಿಗೆ ಮನೆಗಳಿಗೆ ಸೀಮಿತವಾಗದೆ, ಲಾಡ್ಜ್ಗಳು, ಗೆಸ್ಟ್ಹೌಸ್ಗಳು ಹಾಗೂ ವಿದೇಶಿ ಪ್ರಜೆಗಳು ತಂಗುವ ಇತರ ಸ್ಥಳಗಳಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ.
ದಾಖಲೆಗಳಿಲ್ಲದೆ ವಾಸಿಸುವ ವಿದೇಶಿ ಪ್ರಜೆಗಳನ್ನು ಗುರುತಿಸುವುದು, ಅವರ ವಾಸ್ತವ್ಯದ ಉದ್ದೇಶ ಮತ್ತು ದಾಖಲೆಗಳ ಸಿಂಧುತ್ವ ಪರಿಶೀಲಿಸುವುದು ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಕಾನೂನುಬಾಹಿರ ವಾಸಕ್ಕೆ ಕಡಿವಾಣ ಹಾಕಲು ಕ್ರಮ
ವಿದೇಶಿ ಪ್ರಜೆಗಳು ಜಿಲ್ಲೆಯಲ್ಲಿ ವಾಸಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬಾಡಿಗೆ ಮನೆ ಮಾಲೀಕರು ಹಾಗೂ ವಸತಿ ಸೌಲಭ್ಯ ಒದಗಿಸುವವರು ನಿಯಮಾನುಸಾರ ದಾಖಲೆಗಳನ್ನು ನಿರ್ವಹಿಸಬೇಕು. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬ ಸಂದೇಶವನ್ನೂ ರವಾನಿಸಲಾಗುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಕಳೆದ ವಾರ ಐವರು ನೈಜೀರಿಯಾ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಕೈಗಾರಿಕಾ ಪ್ರದೇಶಗಳು, ಬಾಡಿಗೆ ಮನೆಗಳು, ಲಾಡ್ಜ್ಗಳು, ಗೆಸ್ಟ್ಹೌಸ್ಗಳು ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸುವಂತೆ ಆಯಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ಅವರು ಹೇಳಿದ್ದಾರೆ.