ಭಾರತದ ಜಾತಿ ವ್ಯವಸ್ಥೆಗೆ ಚಲನೆಯಿಲ್ಲ- ಸಿಎಂ ಸಿದ್ದರಾಮಯ್ಯ

ಬಸವಣ್ಣನವರ ಆದರ್ಶಗಳನ್ನು ಪಾಲಿಸಿದ ಡಾ.ಸಿದ್ಧರಾಮ ಶರಣರು 2025-26ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು, ಅವರಿಗೆ ಅಭಿನಂದನೆಗಳು ಎಂದು ಸಿಎಂ ಸಿದ್ದರಾಮಯ್ಯ ನವರು ಶುಭ ಕೋರಿದರು.

ಬಸವಣ್ಣನವರು ಸಮಾಜದಲ್ಲಿ ಜಾತಿ-ವರ್ಣ ವ್ಯವಸ್ಥೆಗಳ ವಿರುದ್ಧ ಹೋರಾಡಿದರು. ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಕರ್ಮ ಸಿದ್ಧಾಂತವನ್ನು ಅಲ್ಲಗಳೆದಿದ್ದರು. ಸಾವಿರಾರು ವರ್ಷಗಳಿಂದ ಶೋಷಿತ ವರ್ಗಗಳು ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿತ್ತು. ಬಸವಾದಿ ಶರಣರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮಕ್ಕೆ ನಾಂದಿ ಹಾಡಿದರು. ವೈದಿಕ ಧರ್ಮದಲ್ಲಿ ಚರ್ತುವರ್ಣ ವ್ಯವಸ್ಥೆಯಿತ್ತು. ಆದ್ದರಿಂದ ಹನ್ನರೆಡನೇ ಶತಮಾನದಲ್ಲಿ ಸಮಾನತೆ, ಮಾನವೀಯತೆಯಿಂದ ಕೂಡಿದ ಲಿಂಗಾಯತ ಧರ್ಮವನ್ನು ಸ್ಥಾಪಿಸಲಾಯಿತು ಎಂದರು.

ವೈರುಧ್ಯತೆಯ ಸಮಾಜದಲ್ಲಿ ಬದಲಾವಣೆ ತರಲು ಬುದ್ಧ, ಬಸವಾದಿ ಶರಣರು ಶ್ರಮಿಸಿದ್ದರು. ಆದರೂ ಇಂದಿಗೂ ಜಾತಿವ್ಯವಸ್ಥೆ ಪ್ರಚಲಿತವಾಗಿದೆ. ಭಾರತದ ಜಾತಿ ವ್ಯವಸ್ಥೆಗೆ ಚಲನೆಯಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ದೊರಕಿದಾಗ ಮಾತ್ರ ಚಲನೆಯಿಲ್ಲದ ಜಾತಿವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ‘ಇವನಾರವ ಇವನಾರವ’ ಎನ್ನುವ ಬದಲು ಇವ ‘ಇವ ನಮ್ಮವ’ ಎನ್ನುವ ವ್ಯವಸ್ಥೆ ಬರುವವರೆಗೂ ಬಸವ ವಿಚಾರಗಳು ಪ್ರಸ್ತುತವಾಗಿರುತ್ತವೆ ಎಂದು ಹೇಳಿದರು.

ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವವನ್ನು ವಿಶ್ವಕ್ಕೆ ಪರಿಚಯಿಸಿ, ಎಲ್ಲಾ ವೃತ್ತಿಗಳೂ ಘನತೆಯುಳ್ಳದ್ದು ಎಂದಿದ್ದರು. ಉತ್ಪಾದನೆಯಾದ ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳುವುದೇ ಕಾಯಕ ಮತ್ತು ದಾಸೋಹದ ಮೂಲಮಂತ್ರ. ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಜಾರಿಗೆ ಬರುವ ಮುಂಚೆ ಮನುಶಾಸ್ತ್ರ ಜಾರಿಯಲ್ಲಿತ್ತು. ಆದ್ದರಿಂದ ಅವರು ’ಹಿಂದು ಧರ್ಮವನ್ನು ಸುಧಾರಿಸಲು ಸಾಧ್ಯವಾಗಲಿಲ್ಲ’ವೆಂದು ಮನುಶಾಸ್ತ್ರವನ್ನು ಸುಡುತ್ತೇನೆ ಎಂದಿದ್ದರು. ಸಮಾಜದ ಅಶಕ್ತರ ಮೇಲೆ ನಡೆದ ಅನ್ಯಾಯಗಳ ಇತಿಹಾಸದ ಬಗ್ಗೆ ಅರಿವಿಲ್ಲದವರು ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲವೆಂದರು ಎಂದರು.

ಸಮಾಜದಲ್ಲಿ ಅಸಮಾನತೆಯನ್ನು ನಿರಂತರಗೊಳಿಸಲು ಪಟ್ಟಭದ್ರಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಜಾತಿವ್ಯವಸ್ಥೆ ನಿರ್ಮೂಲನೆಗೆ ವೈಚಾರಿಕ – ವೈಜ್ಞಾನಿಕ ಶಿಕ್ಷಣ ಅಗತ್ಯ. ಆದ್ದರಿಂದ ಯುವಜನತೆ ಮೂಢನಂಬಿಕೆಗಳಿಗೆ ಬಲಿಯಾಗಬಾರದು ಎಂದರು.

ಬಸವ ಭವನಕ್ಕೆ 5 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಬಸವಣ್ಣಪಥದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಬಗ್ಗೆ ಶಪಥ ಮಾಡಬೇಕು. ನಮ್ಮ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋಗಳನ್ನು ಕಡ್ಡಾಯ ಮಾಡಿದ್ದಲ್ಲದೆ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಸವಣ್ಣನವರ ಕರ್ಮ ಭೂಮಿ ಅನುಭವ ಮಂಟಪದ ಪುನ: ಸ್ಥಾಪನೆಗೆ ಗೋ.ರು.ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅದರ ವರದಿಯನ್ವಯ ಅನುದಾನ ನೀಡಲಾಗಿದೆ. ಈ ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳುವ ಬಗ್ಗೆ ಭರವಸೆಯಿದೆ ಎಂದರು.

ಬಸವಣ್ಣನವರ ವಿಚಾರಗಳನ್ನು ನಮ್ಮ ಸರ್ಕಾರ ಅನುಸರಿಸುತ್ತಿದೆ. ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!