
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ ನಿರಂತರವಾಗಿ ಗೈರಾಗುತ್ತಿರುವ ಮಕ್ಕಳನ್ನು ಗುರುತಿಸಿ ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿಕ್ಷಣ ಇಲಾಖೆ ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.
6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮನೆಮನೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಸ್ಥಿತಿ, ಶಾಲಾ ದಾಖಲಾತಿ ಹಾಗೂ ಶಾಲೆಗೆ ಗೈರಾಗುತ್ತಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹಲವು ಕಾರಣಗಳಿಂದ ಶಿಕ್ಷಣದಿಂದ ದೂರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಇದರೊಂದಿಗೆ ಸಾವಿರಾರು ಮಕ್ಕಳು ಖಾಸಗಿ ಶಾಲೆಗಳಲ್ಲೂ ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ವಿವಿಧ ಕಾರಣಗಳಿಂದ ಯಾವುದೇ ಶಾಲೆಯಲ್ಲಿ ದಾಖಲಾಗದೆ ಉಳಿದಿರುವ ಮಕ್ಕಳೂ ಇದ್ದಾರೆ. ಆರ್ಥಿಕ ಸಮಸ್ಯೆ, ಪೋಷಕರ ವಲಸೆ, ಕುಟುಂಬದ ಪರಿಸ್ಥಿತಿ, ಸಾರಿಗೆ ಸೌಲಭ್ಯದ ಕೊರತೆ, ಬಾಲಕಾರ್ಮಿಕತೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಕೇವಲ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸುವುದಕ್ಕೆ ಸೀಮಿತವಾಗದೆ, ಅವರ ಕುಟುಂಬದ ಸಮಸ್ಯೆಗಳನ್ನು ಅರಿತು ಅಗತ್ಯ ನೆರವು ಕಲ್ಪಿಸುವತ್ತಲೂ ಇಲಾಖೆ ಗಮನಹರಿಸಿದೆ.
ವಿಶೇಷವಾಗಿ ವಲಸೆ ಕಾರ್ಮಿಕರ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಸ್ಥಳಾಂತರದ ಕಾರಣದಿಂದ ಶಿಕ್ಷಣದಲ್ಲಿ ವ್ಯತ್ಯಯ ಉಂಟಾಗದಂತೆ ಮಕ್ಕಳನ್ನು ಸಮೀಪದ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಿರಂತರ ಗೈರಾಗುವ ಮಕ್ಕಳ ಮೇಲೂ ನಿಗಾ
ಶಾಲೆಗೆ ದಾಖಲಾಗಿದ್ದರೂ ನಿರಂತರವಾಗಿ ತರಗತಿಗಳಿಗೆ ಗೈರಾಗುತ್ತಿರುವ ಮಕ್ಕಳ ಬಗ್ಗೆಯೂ ಶಿಕ್ಷಣ ಇಲಾಖೆ ನಿಗಾ ವಹಿಸಿದೆ. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಹಾಜರಾತಿ ವಿವರಗಳನ್ನು ಪರಿಶೀಲಿಸಿ, ಸತತವಾಗಿ ಗೈರಾಗುತ್ತಿರುವ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬಾರದಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲ ನಿರಂತರವಾಗಿ ಗೈರಾಗಿದ್ದು, ಪೋಷಕರಿಂದ ಸೂಕ್ತ ಮಾಹಿತಿ ದೊರೆಯದ ಸಂದರ್ಭದಲ್ಲಿ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಮಕ್ಕಳ ಸ್ಥಿತಿಗತಿ ಪರಿಶೀಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಸ್ಯಾಟ್ಸ್ನಲ್ಲಿ ಬಾಕಿ ನೋಂದಣಿಗೆ ಕ್ರಮ
2026-27ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಮಾಹಿತಿಯನ್ನು ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಗೂ ಆದ್ಯತೆ ನೀಡಲಾಗಿದೆ. ವಿವಿಧ ಕಾರಣಗಳಿಂದ ಸ್ಯಾಟ್ಸ್ನಲ್ಲಿ ನೋಂದಣಿಯಾಗದೆ ಉಳಿದಿರುವ ಮಕ್ಕಳ ಮಾಹಿತಿಯನ್ನು ಶಾಲಾ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ.
ಅಂತಹ ಮಕ್ಕಳನ್ನು ಗುರುತಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಮಾಹಿತಿಯು ವ್ಯವಸ್ಥಿತವಾಗಿ ದಾಖಲಾಗುವುದರ ಜತೆಗೆ, ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯಿರುವ ಮಕ್ಕಳ ಮೇಲೂ ನಿಗಾ ವಹಿಸಲು ಅನುಕೂಲವಾಗಲಿದೆ.
ಗ್ರಾಪಂ ಮಟ್ಟದಲ್ಲೂ ಕಾರ್ಯಪಡೆ ಸಕ್ರಿಯವಾಗಲಿ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಕರೆತರುವ ಕಾರ್ಯದಲ್ಲಿ ಶಿಕ್ಷಣ ಇಲಾಖೆ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಿಕ್ಷಕರು, ಶಾಲಾ ಮುಖ್ಯಶಿಕ್ಷಕರು ಹಾಗೂ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ.
ಗುರುತಿಸಲಾದ ಮಕ್ಕಳ ಪೋಷಕರಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಿ, ಮಕ್ಕಳ ವಯಸ್ಸಿಗೆ ಅನುಗುಣವಾದ ತರಗತಿಗೆ ದಾಖಲಿಸುವುದು, ಶಾಲೆಯಲ್ಲಿ ಅನುಕೂಲಕರ ವಾತಾವರಣ ಕಲ್ಪಿಸುವುದು ಹಾಗೂ ಮಕ್ಕಳು ಮತ್ತೆ ಶಾಲೆ ಬಿಡದಂತೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುವುದು ಮುಖ್ಯವಾಗಿದೆ.
ಜುಲೈ ಅಂತ್ಯದವರೆಗೆ ನಡೆದ ದಾಖಲಾತಿ ಆಂದೋಲನದ ಬಳಿಕ ಇದೀಗ ಶಾಲೆಯಿಂದ ಹೊರಗುಳಿದ ಹಾಗೂ ನಿರಂತರ ಗೈರಾಗುತ್ತಿರುವ ಮಕ್ಕಳ ಪತ್ತೆಗೆ ಇಲಾಖೆ ಮುಂದಾಗಿರುವುದು, ಜಿಲ್ಲೆಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಯನ್ನು ಸ್ಯಾಟ್ಸ್ನಲ್ಲಿ ನೋಂದಾಯಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಶಾಲೆಯಿಂದ ದೂರ ಉಳಿದ ಮಕ್ಕಳ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಡಿಡಿಪಿಐ ರಮೇಶ್ ಹೇಳಿದ್ದಾರೆ.