
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ.
ಕೌಂಟರ್ ಇಂಟಲಿಜೆನ್ಸ್ ಸೆಲ್ ಹಾಗೂ ಸೆಂಟ್ರಲ್ ಐಬಿ ಅಧಿಕಾರಿಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಕಳೆದ ಎರಡು ವರ್ಷಗಳಿಂದ ಇನ್ಸ್ಟಾಗ್ರಾಂ ಮೂಲಕ ಪಾಕಿಸ್ತಾನ ಮೂಲದ ಶಾಜದ್ ಬುಟ್ಟಿ ನೆಟ್ವರ್ಕ್ಗೆ ಸಂಬಂಧಿಸಿದ ಗ್ಯಾಂಗ್ನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. Hammadmemon333 ಹೆಸರಿನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಸಂಪರ್ಕ ಹೊಂದಿದ್ದ ಆರೋಪಿಯು, ತನ್ನ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಮಾಹಿತಿಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನಿ ಗ್ಯಾಂಗ್ ಗಣ್ಯರು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆ ಇದ್ದು, ಇನ್ಸ್ಟಾಗ್ರಾಂ ಖಾತೆಗಳ ಮೂಲಕ ಸಂಪರ್ಕ ಸಾಧಿಸಿ ವಿವಿಧ ಕೆಲಸಗಳನ್ನು ಮಾಡಿಸುತ್ತಿತ್ತು ಎನ್ನಲಾಗಿದೆ.
ಅಬೂಬಕರ್ ಎಸಿ ರಿಪೇರಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎನ್ನಲಾಗಿದೆ. ಗ್ಯಾಂಗ್ನ ಸೂಚನೆಯಂತೆ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿ ಪಡೆದು ಬಂದಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಇಸ್ಲಾಂಪುರದಲ್ಲಿರುವ ಮನೆಯಲ್ಲಿದ್ದ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ವಿರುದ್ಧ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 113(3) ಹಾಗೂ 197(2) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.