Categories: ಲೇಖನ

ನಮ್ಮಲ್ಲಿ ಇನ್ನೂ ದುರಹಂಕಾರ ಇದೆ ಎಂದಾದರೆ ನಾವು ಇನ್ನೂ ಅಜ್ಞಾನಿಗಳು ಎಂದರ್ಥ…

” ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ……”-ಆಲ್ಬರ್ಟ್ ಐನ್ಸ್ಟೈನ್…..

ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ……

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಬಹುತೇಕ ಆಸಕ್ತಿಯ ಎಲ್ಲಾ ಜನರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಮತ್ತು ಸ್ವಾತಂತ್ರ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮನುಷ್ಯನಿಗೆ ಇರಬಹುದಾದ ಅಥವಾ ಬರಬಹುದಾದ ಅಹಂಕಾರ ಅಥವಾ ಅದಕ್ಕೂ ಮಿಗಿಲಾಗಿ ದುರಹಂಕಾರ ಯಾವ ಕಾರಣಗಳಿಗಾಗಿ ಅವನೊಳಗೆ ಪ್ರವೇಶಿಸುತ್ತದೆ ಎಂಬುದನ್ನು ಪರಿಶೀಲಿಸೋಣ…..

ಹಣದ ಅಹಂ, ಅಧಿಕಾರದ ಅಹಂ, ಆಸ್ತಿಯ ಅಹಂ, ಸೌಂದರ್ಯದ ಅಹಂ, ಅಕ್ಷರದ ಅಹಂ, ಜ್ಞಾನದ ಅಹಂ, ಪ್ರಶಸ್ತಿಯ ಅಹಂ, ಜನಪ್ರಿಯತೆಯ ಅಹಂ ಹೀಗೆ ನಾನಾ ಕಾರಣಗಳಿಂದಾಗಿ ಇದು ಹುಟ್ಟುತ್ತದೆ.

ಇಲ್ಲಿ ಅಹಂಕಾರ, ದುರಹಂಕಾರ, ಹೆಮ್ಮೆ ಇವುಗಳಿಗೆ ಇರುವ ವ್ಯತ್ಯಾಸ ಕೂಡ ಗಮನದಲ್ಲಿಟ್ಟುಕೊಂಡು ಚರ್ಚಿಸಬೇಕು. ಏಕೆಂದರೆ ಇತರರ ಬಳಿ ಇಲ್ಲದಿರುವುದು ನನ್ನ ಬಳಿ ಇದೆ ಎನ್ನುವ ತನ್ನ ಸ್ವ ಸಾಮರ್ಥ್ಯದ ಹೆಚ್ಚುಗಾರಿಕೆಯ ಆಂತರಿಕ ಹೆಮ್ಮೆ ಮತ್ತು ಅದರ ಭಾಗವಾಗಿ ಬಹಿರಂಗವಾಗಿ ವಿನಯದ ಪ್ರದರ್ಶನ,
ತನ್ನ ಬಳಿ ಇರುವುದು ಅವರ ಬಳಿ ಇಲ್ಲ ಎನ್ನುವ ಕಾರಣಕ್ಕಾಗಿ ಇತರರನ್ನು ಕೀಳಾಗಿ ಕಾಣುವುದು ಅಥವಾ ಅವರಿಗೆ ಮುಜುಗರವಾಗುವಂತೆ ವರ್ತಿಸುವುದು ಅಹಂಕಾರ, ಇದೇ ಕಾರಣಕ್ಕಾಗಿ ಬೇರೆಯವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವುದು ದುರಹಂಕಾರ ಮತ್ತು ಅಪರಾಧ.

ಬಹುಶಃ ಐನ್ಸ್ಟೈನ್ ಅವರ ಮಾತಿನ ಅರ್ಥ ಅಜ್ಞಾನಿಗಳು ಹೆಚ್ಚು ಅಹಂಕಾರ ಹೊಂದಿರುತ್ತಾರೆ ಕಾರಣ ಅವರಿಗೆ ಸಮಗ್ರ ಚಿಂತನೆಯಾಗಲಿ, ವಿಶಾಲ ಮನೋಭಾವವಾಗಲಿ, ಒಳ್ಳೆಯತನವಾಗಲಿ ಇರುವುದಿಲ್ಲ. ಸಂಕುಚಿತ ದೃಷ್ಟಿಕೋನ ಮತ್ತು ನಾನು ನನ್ನದು ಎಂಬ ಸ್ವಾರ್ಥ ತುಸು ಹೆಚ್ಚಾಗಿಯೇ ಇರುತ್ತದೆ. ಆ ಅಜ್ಞಾನ ಅಹಂಕಾರವಾಗಿ ನಮಗರಿವಿಲ್ಲದೇ ಪರಿವರ್ತನೆ ಹೊಂದಿ ನಮ್ಮೊಳಗೆ ಅಡಕವಾಗಿ ನಮ್ಮ ನಡವಳಿಕೆಯಾಗಿ ಮಾರ್ಪಡುತ್ತದೆ ಎಂಬುದಾಗಿರಬಹುದು.

ಆಳದಲ್ಲಿ ಅಹಂಕಾರದ ಒಳ ಅರ್ಥ ಮತ್ತೇನೋ ಇರಬಹುದು ಅಥವಾ ಆ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ವ್ಯಾವಹಾರಿಕವಾಗಿ ಐನ್ಸ್ಟೈನ್ ಹೇಳಿದ ನಡವಳಿಕೆ ನಮ್ಮ ಸುತ್ತಮುತ್ತಲಿನ ಜನರ ಒಡನಾಟದಿಂದ ನಮಗೆ ಅರಿವಾಗುತ್ತದೆ.

ಉದಾಹರಣೆಗೆ ನಮ್ಮ ನಿಮ್ಮ ನಡುವೆ ಸಾಮಾನ್ಯ ಪರಿಸ್ಥಿತಿಯಲ್ಲಿ ಆತ್ಮೀಯವಾಗಿ ಸ್ನೇಹದಿಂದ ಇರುವ ವ್ಯಕ್ತಿಗಳು ಅಥವಾ ಸಂಬಂಧಿಕರು ಯಾವುದೋ ಕಾರಣದಿಂದಾಗಿ ಅವರ ಒಟ್ಟು ಪರಿಸ್ಥಿತಿ ನಮಗಿಂತ ಉತ್ತಮವಾದಾಗ ಅವರ ವರ್ತನೆಯ ಬದಲಾವಣೆಗಳನ್ನು ಗಮನಿಸಬಹುದು.

ಅದರಲ್ಲೂ ಬಹುಮುಖ್ಯವಾಗಿ ದಿಢೀರನೆ ಜಮೀನಿನ ಕಾರಣದಿಂದ ಅಥವಾ ಅಧಿಕಾರದ ಕಾರಣದಿಂದ ಅಥವಾ ಮಕ್ಕಳ ಅನಿರೀಕ್ಷಿತ ವಿದೇಶದ ಉದ್ಯೋಗ ಕಾರಣದಿಂದ ಅಥವಾ ಶ್ರೀಮಂತ ಅಳಿಯ ಅಥವಾ ಸೊಸೆಯ ಕಾರಣದಿಂದ ಅಥವಾ ವ್ಯವಹಾರದ ಲಾಭ ಅಥವಾ ಭ್ರಷ್ಟ ಹಣದಿಂದ ಹೀಗೆ ಅವರು ನಮಗಿಂತ ಹೆಚ್ಚು ‌ಶ್ರೀಮಂತರು ಅಥವಾ ಜನಪ್ರಿಯ ವ್ಯಕ್ತಿಗಳು ಆದರೆ ಕ್ರಮೇಣ ಅವರು ಅವರಿಗಿಂತ ಕೆಳ ಹಂತದಲ್ಲಿರುವವರ ಬಗ್ಗೆ ನಿರ್ಲಕ್ಷ್ಯ ಅಥವಾ ಕೀಳು ಮನೋಭಾವ ಪ್ರದರ್ಶಿಸುತ್ತಾರೆ. ಕೆಲವು ದುರಹಂಕಾರಿಗಳು ನೇರವಾಗಿ ಮತ್ತೆ ಕೆಲವು ಅಹಂಕಾರಿಗಳು ಪರೋಕ್ಷವಾಗಿ ವ್ಯಕ್ತಪಡಿಸುತ್ತಾರೆ. ಇದರ ಹಿನ್ನೆಲೆಯಲ್ಲಿ ಐನ್ಸ್ಟೈನ್ ಮಾತುಗಳು ಹೆಚ್ಚು ಅರ್ಥವನ್ನು ಹೊರಹೊಮ್ಮಿಸುತ್ತದೆ.

ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತೊಂದಿದೆ. ಜ್ಞಾನವಂತನ ಮನಸ್ಥಿತಿ ಹೆಚ್ಚು ಸಮತೋಲನದಿಂದ ಕೂಡಿರುತ್ತದೆ. ಪ್ರಬುದ್ದತೆಯ ಮಟ್ಟ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಆಗ ವಿಷಯ ಯಾವುದೇ ಇರಲಿ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಬಹುದು.

ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮನೋಭಾವ ಮತ್ತು ನಡವಳಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಅಹಂಕಾರ ಮತ್ತು ದುರಹಂಕಾರ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಆತ್ಮವಿಮರ್ಶೆ ಇದಕ್ಕಾಗಿ ಇರುವ ಅತ್ಯುತ್ತಮ ಮಾರ್ಗ.

ಮನುಷ್ಯ ಸಾವಿರಾರು ವರ್ಷಗಳಷ್ಟು ಬದುಕುವುದಿಲ್ಲ. ಸಾಮಾನ್ಯವಾಗಿ 60 ರಿಂದ 80 ಎಂದು ಒಂದು ಅಂದಾಜು. ಈ ಕಾಲದಷ್ಟು ಜೀವನದಲ್ಲಿ ಇತರರೊಂದಿಗೆ ನಾವು ಕೂಡ ಒಂದಷ್ಟು ನೆಮ್ಮದಿ – ಸಂತೋಷದಿಂದ ಜೀವನ ನಡೆಸಬೇಕೆಂದರೆ ಇಡೀ ಸಮಾಜದ ವಾತಾವರಣ ಮುಖ್ಯವಾಗಿ ನಮ್ಮ ಮತ್ತು ನಮ್ಮ ಸಹವರ್ತಿಗಳ ನಡವಳಿಕೆ ಉತ್ತಮವಾಗಿರಬೇಕು ಅಂದರೆ ಅಹಂಕಾರ ಅಥವಾ ದುರಹಂಕಾರಗಳ ಹೆಚ್ಚು ಪ್ರದರ್ಶನಕ್ಕೆ ಅವಕಾಶ ಇರಬಾರದು.

” ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ ” ಎಂದು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಾವೆಲ್ಲರೂ ಇನ್ನು ಮುಂದೆ ನಮ್ಮ ಸಾಮರ್ಥ್ಯ, ನಮ್ಮ ಅದೃಷ್ಟ, ನಮ್ಮ ಉತ್ತಮ ಜೀವನಮಟ್ಟ, ನಮ್ಮ ಸುಖ ಸಂತೋಷಕ್ಕಾಗಿ ಹೆಮ್ಮೆ ಪಡೋಣ. ಆದರೆ ಅಹಂಕಾರ ಅಥವಾ ದುರಹಂಕಾರ ಪಡುವುದು ಬೇಡ.

ನಮ್ಮಲ್ಲಿ ಇನ್ನೂ ದುರಹಂಕಾರ ಇದೆ ಎಂದಾದರೆ ನಾವು ಇನ್ನೂ ಅಜ್ಞಾನಿಗಳು ಎಂದು ನಮ್ಮನ್ನು ನಾವೇ ನಿರ್ಧರಿಸಿ ಮತ್ತೆ ನಾವು ಅಹಂಕಾರ ತ್ಯಜಿಸಿ ಜ್ಞಾನವಂತರಾಗಲು ಪ್ರಯತ್ನಿಸೋಣ. ಇದೊಂದು ನಿರಂತರ ಪ್ರಕ್ರಿಯೆ. ಇದು ಸ್ವಲ್ಪಮಟ್ಟಿಗೆ ಸಾಧ್ಯವಾದರೆ ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಸಮಾಜ ನಿರ್ಮಾಣದೆಡೆಗೆ ನಮ್ಮ ಹೆಜ್ಜೆಗಳು ಸಾಗುತ್ತಿವೆ ಎಂದು ಭಾವಿಸಬಹುದು. ಹಾಗಾಗಲಿ ಎಂದು ನಿರೀಕ್ಷಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

5 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

9 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

16 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

17 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

1 day ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

1 day ago