Categories: ಲೇಖನ

ಆಕ್ರೋಶ, ಅರಾಜಕತೆ ಮತ್ತು ಮಾಧ್ಯಮಗಳು…..

ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳ ಘಟನೆಗಳನ್ನು ನೋಡುತ್ತಿದ್ದರೆ ನಮ್ಮ ದೇಶದ ಸುತ್ತಮುತ್ತ ನಡೆದ ಬಾಂಗ್ಲಾ, ಶ್ರೀಲಂಕಾ, ನೇಪಾಳದ ದಂಗೆಗಳನ್ನು ಸ್ವಲ್ಪ ಮಟ್ಟಿಗೆ ಹೋಲುವಂತಿದ್ದರು, ಇನ್ನೂ ಆ ಮಟ್ಟಕ್ಕೆ ಹೋಗಿಲ್ಲ. ಮುಂದೆ ಯಾವ ಹಂತಕ್ಕೆ ಹೋಗುತ್ತದೆಯೋ ಸದ್ಯಕ್ಕೆ ಊಹೆ ಮಾಡುವುದು ಕಷ್ಟ.

ಏಕೆ ಭಾರತದಲ್ಲಿ ಈ ಒಂದು ನೀಟ್ ಹಗರಣ ಇಷ್ಟೊಂದು ದೊಡ್ಡ ಹಂತಕ್ಕೆ ಹೋಗಿ, ಇಷ್ಟೊಂದು ಆರಾಜಕತೆ ಸೃಷ್ಟಿಸುತ್ತಿದೆ. ಜೆನ್ ಜಿಗಳ ಈ ಆಕ್ರೋಶಕ್ಕೆ ಕಾರಣವೇನು. ಅವರು ವಿದ್ಯಾರ್ಥಿಗಳಲ್ಲ, ದೇಶದ್ರೋಹಿಗಳು ಎನ್ನುವ ಆರೋಪಗಳ ಹಿಂದಿನ ಸತ್ಯಾಸತ್ಯತೆ ಏನು ? ಎಂದು ಸ್ವಲ್ಪ ಯೋಚಿಸಬೇಕಾಗುತ್ತದೆ.

ಭಾರತದ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಬಹುತೇಕ ಪ್ರಜಾಪ್ರಭುತ್ವವನ್ನು, ಅದರ ಕಾರ್ಯವಿಧಾನವನ್ನು ನೋಡಿದಾಗ ಇತರ ಮೂರು ಅಂಗಗಳ ನಂತರ ಮಾಧ್ಯಮ ರಂಗ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಶಾಸಕಾಂಗ ಕಾನೂನು ರೂಪಿಸಿದರೆ, ಕಾರ್ಯಾಂಗ ಅದನ್ನು ಅನುಷ್ಠಾನಗೊಳಿಸಿದರೆ, ನ್ಯಾಯಾಂಗ ಅದನ್ನು ಅರ್ಥೈಸಿದರೆ, ಮಾಧ್ಯಮ ಅದರ ಕಾವಲುಗಾರನಂತೆ ಕೆಲಸ ನಿರ್ವಹಿಸುತ್ತದೆ.

ಎಲ್ಲಾ ರೀತಿಯ ಮಾಧ್ಯಮಗಳು ಸದಾ ವಿರೋಧ ಪಕ್ಷದಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಸರ್ಕಾರವನ್ನು ಹೊಗಳುವುದಕ್ಕಿಂತ ಸರ್ಕಾರದ ತಪ್ಪುಗಳನ್ನೇ ಮುಂದೆ ಮಾಡುತ್ತಾ, ವಿಮರ್ಶಿಸುತ್ತಾ ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
” ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಪತ್ರಕರ್ತ ಕಂಡ ” ಎಂಬಷ್ಟು ಸೂಕ್ಷ್ಮತೆ ಬೇಕಾಗುತ್ತದೆ. ಜನರ ಭಾವನೆಗಳಿಗೆ ಧ್ವನಿಯಾಗುವುದರ ಜೊತೆಗೆ ದೂರ ದೃಷ್ಟಿ, ವಿವೇಚನೆ ಬಹಳ ಮುಖ್ಯವಾಗುತ್ತದೆ. ಪ್ರಾಮಾಣಿಕತೆ, ನಿಷ್ಪಕ್ಷಪಾತತೆ ಇನ್ನೂ ಮುಖ್ಯವಾಗುತ್ತದೆ. ಅದು ಸದಾಕಾಲ ಪ್ರಶ್ನಿಸುತ್ತಾ ಇದ್ದರೆ ಜನರಲ್ಲೂ ಕೂಡ ಒಂದು ಅಭಿಪ್ರಾಯ ಮೂಡುತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಕಾವಲು ನಾಯಿಗಳು ಸಾಕು ನಾಯಿಗಳಾಗಿ ಒಡೆಯನ ತೊಡೆಯ ಮೇಲೆ ಕುಳಿತು ಹಾಲು ಕುಡಿದು, ಬಿಸ್ಕೆಟ್ ತಿನ್ನುತ್ತಾ ತನ್ನ ಕೆಲಸವನ್ನು ಮರೆತ ಕಾರಣ ಪ್ರಶ್ನಿಸುವ ಮನೋಭಾವವೇ ಕಡಿಮೆಯಾಗಿತ್ತು. ಸಾರ್ವಜನಿಕ ಅಭಿಪ್ರಾಯಗಳ ಪ್ರತಿಫಲನ, ಪ್ರತಿಧ್ವನಿ ಇಲ್ಲವಾಗಿತ್ತು. ಬಹುತೇಕ ಒಂದೇ ದಿಕ್ಕಿನಲ್ಲಿ ಎಲ್ಲಾ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದ್ದವು.

ಆಡಳಿತ ವ್ಯವಸ್ಥೆಯ ವಿರುದ್ಧ ಇದ್ದ ಕೆಲವು ಮಾಧ್ಯಮಗಳನ್ನು ಸರ್ಕಾರದ ಪರ ಇದ್ದ ಬಂಡವಾಳಶಾಹಿಗಳೇ ಕೊಂಡುಕೊಂಡು ಬಿಟ್ಟರು.

ಇದರ ಪರಿಣಾಮ ಜನರ ಭಾವನೆಗಳಿಗೆ ಧ್ವನಿ ಇಲ್ಲವಾಯಿತು, ಬೆಲೆ ಇಲ್ಲದಾಯಿತು. ಜನರ ಭಾವನೆಗಳು ದಿಕ್ಕು ತಪ್ಪಿದವು. ಕೆಲವೇ ಕೆಲವು ವ್ಯಕ್ತಿಗಳ ಅಭಿಪ್ರಾಯ, ಅನಿಸಿಕೆಗಳೇ ಸಾರ್ವಜನಿಕ ಅಭಿಪ್ರಾಯ ಎಂದು ಬಿಂಬಿತವಾಗುತ್ತಿದ್ದವು. ಇದು ಕೆಲವು ವರ್ಷಗಳಿಂದ ನಡೆದುಕೊಂಡೇ ಬಂದಿತು.

ಆದರೆ ಯಾವುದೋ ಒಂದು ಹಂತದಲ್ಲಿ ಇದು ಭುಗಿಲೇಳಲೇಬೇಕಿತ್ತು. ಅದಕ್ಕೆ ಒಂದು ಕಾರಣ ಮತ್ತು ನೆಪ ಬೇಕಿತ್ತು. ಬಹುಶಃ ಅದು ಈ ನೀಟ್ ಹಗರಣದ ರೂಪದಲ್ಲಿ ಸ್ಪೋಟಗೊಂಡಿರಬಹುದು.

ಏಕೆಂದರೆ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿ ಇತ್ಯಾದಿ ಎಲ್ಲಾ ಸಮಸ್ಯೆಗಳಿಗಿಂತ ಸ್ವಚ್ಛಂದವಾಗಿ ಬದುಕುವ ಮಾನವನ ಹಕ್ಕು ಮತ್ತು ಸ್ವಾತಂತ್ರ್ಯ ಬಹಳ ಮುಖ್ಯ. ಸ್ವಾತಂತ್ರ್ಯ ಇಲ್ಲದ ಕಾರಣಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕಾರಣಕ್ಕೆ ಕಮ್ಯುನಿಸ್ಟ್ ಆಡಳಿತಗಳು ಬಹುತೇಕ ಶಿಥಿಲವಾದವು.
ಪ್ರಜಾಪ್ರಭುತ್ವದ ಸೌಂಧರ್ಯವೇ ಅಭಿವ್ಯಕ್ತಿ ಸ್ವಾತಂತ್ರ ಮತ್ತು ಪ್ರಶ್ನಿಸುವ ಮನೋಭಾವ.

ಇಡೀ ವಿಶ್ವದ ಬಹುದೊಡ್ಡ ಯಶಸ್ವಿ ಪ್ರಜಾಪ್ರಭುತ್ವವಾದ ಭಾರತದ ಪ್ರಧಾನ ಮಂತ್ರಿಗಳು ಕಳೆದ 12 ವರ್ಷಗಳಿಂದ ಮಾಧ್ಯಮವನ್ನು ಅತ್ಯಂತ ಕನಿಷ್ಠವಾಗಿ, ನಿಕೃಷ್ಟವಾಗಿ, ನಿರ್ಲಕ್ಷಿಸಿದ ನಂತರವೂ, ಯಾವುದೇ ಪತ್ರಿಕಾಗೋಷ್ಠಿ ಮಾಡದ ನಂತರವೂ ಮಾಧ್ಯಮಗಳನ್ನು ಅವರನ್ನು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ಅದಕ್ಕಾಗಿ ಅವರನ್ನು ಬಹಿಷ್ಕರಿಸುವ ಧೈರ್ಯ ತೋರಲಿಲ್ಲ. ಪತ್ರಿಕಾಗೋಷ್ಠಿಯ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡಲಿಲ್ಲ. ಅವರ ಚುನಾವಣಾ ಗೆಲ್ಲುವ ಸಾಮರ್ಥ್ಯವನ್ನೇ ಬಹುದೊಡ್ಡ ಸಾಮರ್ಥ್ಯ ಎಂಬಂತೆ ಬಿಂಬಿಸಿದವು. ಅದರ ಪರಿಣಾಮ ಇಡೀ ವಿಶ್ವದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಅತ್ಯಂತ ಕೆಳಮಟ್ಟಕ್ಕೆ ಇಳಿಯಿತು ಆಗಲು ಭಾರತೀಯ ಮಾಧ್ಯಮ ರಂಗ ಎಚ್ಚೆತ್ತುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ.

ಪ್ರಧಾನಿಯವರಿಗೆ ನಿಜಕ್ಕೂ ಸಮಾಜದ ನೈಜ ಸಮಸ್ಯೆಗಳ ಅರಿವೇ ಆಗಲಿಲ್ಲ. ಅವರು ಭ್ರಮಾಲೋಕದಲ್ಲಿ ತೇಲಿದರು. ಪ್ರಶ್ನೆಗಳನ್ನು ಎದುರಿಸಿದ್ದರೆ ವಾಸ್ತವ ಅರ್ಥವಾಗುತ್ತಿತ್ತು. ಅದರಲ್ಲಿ ಮಾಧ್ಯಮಗಳು ಸಂಪೂರ್ಣ ವಿಫಲವಾದವು. ಅದರ ಪರಿಣಾಮವೇ ಇವತ್ತಿನ ಝಂಜಿ ದಂಗೆ….

ನಕಲಿ ದೇಶಭಕ್ತಿ, ನಕಲಿ ರಾಷ್ಟ್ರೀಯತೆ, ನಕಲಿ ರಾಮ ಭಕ್ತಿ { pseudo development, pseudo nationalism pseudo religious devotion ) ಎಂದು ಸಹ ಕರೆಯಬಹುದು. ಅದರ ಸುತ್ತಲೂ ಜನರನ್ನು ಭಾವನಾತ್ಮಕವಾಗಿ ಸಮ್ಮೋಹನಗೊಳಿಸಿದರು. ಏಕೆಂದರೆ ಕಳೆದ ಹಲವು ವರ್ಷಗಳಿಂದ ಈ ದೇಶದ ಮಾನವೀಯ ಮೌಲ್ಯಗಳು, ಸಂವಿಧಾನಾತ್ಮಕ ಮೌಲ್ಯಗಳು, ಪ್ರಾಕೃತಿಕ ಮೌಲ್ಯಗಳು ಮತ್ತು ಇತರ ಸಂಪನ್ಮೂಲಗಳು ನಿಜಕ್ಕೂ ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಹೊಡೆತವನ್ನು ತಿಂದಿವೆ . ಈ ನೆಲದ ಮೂಲ ಸಂಸ್ಕೃತಿಗೆ ವಿರುದ್ಧವಾಗಿ ಪಾಶ್ಚಾತ್ಯ ಸಂಸ್ಕೃತಿಯ ಕೆಟ್ಟ ಅಂಶಗಳು ಆಡಳಿತದ ಮುಖಾಂತರ ಜನ ಮಾನಸದೊಳಗೆ ನುಗ್ಗಿ ತುಂಬಾ ಅಪಾಯಕಾರಿ ಮತ್ತು ದುಷ್ಪರಿಣಾಮ ಉಂಟು ಮಾಡುತ್ತಿವೆ. ಅದನ್ನು ಗ್ರಹಿಸಿ ಜನರಿಗೆ ಮುಟ್ಟಿಸಲು ಮಾಧ್ಯಮಗಳು ವಿಫಲವಾದವು. ಸರ್ಕಾರವನ್ನು ಪ್ರಶ್ನಿಸಲು ಮರೆತುಬಿಟ್ಟವು. ದೇಶದ ಸಾಲ 201 ಲಕ್ಷ ಕೋಟಿಗೆ ಏರಿಕೆಯಾಗಿದೆ.( 2014 ರವರೆಗೆ ಕೇವಲ 63 ಲಕ್ಷ ಕೋಟಿ ಇತ್ತು) ಅದರ ಅರಿವನ್ನು ಮೂಡಿಸಲೇ ಇಲ್ಲ. ಅದರ ಪರಿಣಾಮವೇ ಸಾಮಾಜಿಕ ಜಾಲತಾಣಗಳ ತೀವ್ರ ಬೆಳವಣಿಗೆ ಮತ್ತು ಮಾಧ್ಯಮಗಳಿಗೆ ಪರ್ಯಾಯವಾಗಿ ಪ್ರಬಲ ಶಕ್ತಿಯಾಗಿ ಬೆಳವಣಿಗೆ ಹೊಂದಿದ್ದು.

ತಮ್ಮ ಕೈಗಳೊಳಗೆ ಮೊಬೈಲ್ ಹಿಡಿದು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಸಿಕ್ಕ ನಂತರ ಈ ಝನ್ ಜಿ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದೆ.

ಪತ್ರಕರ್ತರು ಸಂವೇದನಾಶೀಲ, ವಿವೇಚನಾಶೀಲ, ಸೂಕ್ಷ್ಮತೆ ಮರೆತ ಕಾರಣ ಇಂದು ಈ ಪರಿಸ್ಥಿತಿ ಉದ್ಭವಿಸಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಜನರ ಭಾವನೆಗಳ ಬಹುದೊಡ್ಡ ವೇದಿಕೆಯಾಗಬೇಕಿತ್ತು. ಆದರೆ ಅದರ ಸಂಪಾದಕರು, ವರದಿಗಾರರು ಅತಿಯಾದ ವಾಚಾಳಿತನದಿಂದ ತಾವೇ ವಕೀಲರು, ತಾವೇ ನ್ಯಾಯಾಧೀಶರು ಎಂಬಂತೆ ಎಲ್ಲ ವಿಷಯಗಳ ಬಗ್ಗೆ ತಾವೇ ತೀರ್ಪು ನೀಡುತ್ತಾ, ಸಂಪನ್ಮೂಲ ವ್ಯಕ್ತಿಗಳಾಗಿ ವಾಕ್ಚತುರ್ಯದ, ಸಂಕುಚಿತ ಮನೋಭಾವದ ಕೆಲವೇ ವ್ಯಕ್ತಿಗಳನ್ನು ಮತ್ತೆ ಮತ್ತೆ ಕರೆಸಿಕೊಂಡು ಅವರ ಮೂಲಕವೇ ವಿಷಯವನ್ನು ಕಿರುಚುತ್ತಾ ಕೊನೆಗೆ ಸತ್ಯ ಮತ್ತು ವಾಸ್ತವವನ್ನು ಮರೆಮಾಚಿದ ಪರಿಣಾಮವೇ ಇಂದು ಜೆನ್ಜೀ ಹೋರಾಟ.

ರಾಜಕಾರಣಿಗಳ ಮೇಲಿದ್ದಷ್ಟೇ ಕೋಪ ಈಗ ಮಾಧ್ಯಮಗಳ ಮೇಲೆ ತಿರುಗಿರುವುದನ್ನು ಕಾಣುತ್ತಿದ್ದೇವೆ. ಅನೇಕರು ಈ ಸಮಾಜದ ಈಗಿನ ಅದೋಗತಿಗೆ ಮಾಧ್ಯಮವೇ ಕಾರಣ ಎಂದು ಮಾತನಾಡಿಕೊಳ್ಳುವುದಕ್ಕೆ ಕಾರಣವೂ, ಅವರ ಅವೈಜ್ಞಾನಿಕ ಚಿಂತನೆ, ಸುದ್ದಿಗಳ ವಿಶ್ಲೇಷಣೆ, ಮೌಢ್ಯ, ವಿಕೃತಿಗಳೇ ಆಗಿವೆ.

” ತನ್ನನ್ನು ಮಾರಿಕೊಂಡ ಒಬ್ಬ ಪತ್ರಕರ್ತ ನೂರು ಭಯೋತ್ಪಾದಕರಿಗೆ ಸಮ ” ಎಂದು ಸಂವಿಧಾನ ಪಿತಾಮಹ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಓದಿದ ನೆನಪು. ಇಂದು ಅದು ನಿಜವಾಗುತ್ತಿದೆ. ಆ ಕಾರಣದಿಂದ ಮಾಧ್ಯಮ ರಂಗ ಎಚ್ಚೆತ್ತುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರೇ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಕ್ರಾಂತಿಗೆ ಮುನ್ನುಡಿ ಬರೆಯಬಹುದು. ಅದು ಅರಾಜಕತೆಗೆ ದಾರಿಯಾಗಬಹುದು.

ಅರಾಜಕತೆ ಒಳ್ಳೆಯದಲ್ಲ. ಒಂದು ಗುಂಪು ಒಂದು ಸಮೂಹವಾಗಿ ವರ್ತಿಸುವುದು ಉತ್ತಮ ಬೆಳವಣಿಗೆಯಲ್ಲ. ಅದಕ್ಕೆ ಮಾಧ್ಯಮ ಕಾರಣವಾಗಬಾರದು, ಜಾಗೃತರಾಗಿ. ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕ ಮುಕ್ತ – ಖಾಸಗಿ ಹೂಡಿಕೆದಾರರಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ- ಸಚಿವ ಕೆ.ಜೆ. ಜಾರ್ಜ್

ಕರ್ನಾಟಕವನ್ನು ದೇಶದ ಹೂಡಿಕೆ ಸ್ನೇಹಿ ಪ್ರವಾಸೋದ್ಯಮ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದ್ದು, ಖಾಸಗಿ ಹೂಡಿಕೆದಾರರಿಗೆ…

3 hours ago

ಹೆದ್ದಾರಿಯಿಂದ ನಗರ ಬೀದಿವರೆಗೆ ಶುಭಾಶಯ, ಸ್ವಾಗತ ಬ್ಯಾನರ್‌ಗಳದ್ದೇ ಆರ್ಭಟ: ನ್ಯಾಯಾಲಯದ ನಿರ್ದೇಶನಕ್ಕೂ ಸೊಪ್ಪು ಹಾಕದ ಅನಧಿಕೃತ ಫ್ಲೆಕ್ಸ್‌ಗಳು: ಸ್ವಚ್ಛತೆ, ಸುರಕ್ಷತೆ ಹಾಗೂ ಪರಿಸರಕ್ಕೆ ದೊಡ್ಡ ಸವಾಲು

ಬೆಂಗಳೂರು ಗ್ರಾಮಾಂತರ: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಬಿಲ್‌ಬೋರ್ಡ್‌ಗಳನ್ನು ಅಳವಡಿಸದಂತೆ ರಾಜ್ಯ ಸರ್ಕಾರ ಮತ್ತು ನ್ಯಾಯಾಲಯಗಳು…

1 day ago

ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟನೆ: ನಂದಿಬೆಟ್ಟದ ಸಂಚಾರ ದಟ್ಟಣೆಗೆ ರೋಪ್‌ವೇ ಹಾಗೂ ಸಮಗ್ರ ಪಾರ್ಕಿಂಗ್ ಯೋಜನೆ- ಸಚಿವ ಕೆ.ಜೆ ಜಾರ್ಜ್

ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ…

2 days ago

ಸಮಾಜಸೇವಕ ಮಹೇಂದ್ರ ಬಾಬುಗೆ ಅದ್ಧೂರಿ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಸಾಯಿರಾಂ ಡ್ರಿಪ್ ಇರಿಗೇಷನ್ ಹಾಗೂ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಬಿ. ಮಹೇಂದ್ರ ಬಾಬು ಅವರ 46ನೇ ವರ್ಷದ ಹುಟ್ಟುಹಬ್ಬವನ್ನು…

2 days ago

ಕುಖ್ಯಾತ ಅಂತರರಾಜ್ಯ ಕೇಬಲ್ ಕಳ್ಳರ ಬಂಧನ: ₹15 ಲಕ್ಷ ಮೌಲ್ಯದ ಕೇಬಲ್ ವಶ

ದೊಡ್ಡಬಳ್ಳಾಪುರ: ಅಲ್ಯೂಮಿನಿಯಂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಂತರರಾಜ್ಯ ಕೇಬಲ್ ಕಳ್ಳರ ಜಾಲವನ್ನು…

3 days ago

RSS ನೋಂದಣಿಗೆ ಆಗ್ರಹಿಸಿ ಪ್ರತಿಭಟನೆ; ರಾಷ್ಟ್ರಪತಿಗಳಿಗೆ ಮನವಿ

ದೊಡ್ಡಬಳ್ಳಾಪುರ : ಹೊರದೇಶಗಳಲ್ಲಿ ಅಲ್ಲಿನ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಘ ಪರಿವಾರ, ಇಲ್ಲಿನ ನೆಲದ ಕಾನೂನಿಗೆ ವ್ಯತಿರಿಕ್ತವಾಗಿ…

3 days ago