Categories: ಲೇಖನ

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ…..

ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಬಾರಿಯ ದಸರಾ ಮಹೋತ್ಸವವನ್ನು ಪೌರಕಾರ್ಮಿಕರು( ಹತ್ತು ಜನ ಪೌರಕಾರ್ಮಿಕರ ತಂಡ ಅಥವಾ ಸಾಂಕೇತಿಕವಾಗಿ ಯಾರಾದರೂ ಒಬ್ಬ ಸ್ಥಳೀಯ ಪೌರಕಾರ್ಮಿಕರು ) ಉದ್ಘಾಟಿಸಲು ಆಹ್ವಾನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇಡೀ ರಾಜ್ಯದಲ್ಲಿ ಆರೋಗ್ಯಯುತ, ಸ್ವಚ್ಛ ವಾತಾವರಣ ನಿರ್ಮಾಣವಾಗಲು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಒಮ್ಮೆ ಮೈಸೂರು ದಸರಾವನ್ನು ಉದ್ಘಾಟಿಸಿದರೆ ಅವರ ಬಗೆಗಿನ ಜನರ ಅಭಿಪ್ರಾಯ ಮತ್ತಷ್ಟು ಗೌರವಪೂರ್ಣವಾಗಬಹುದು. ಏಕೆಂದರೆ ಕಸ ಸಂಗ್ರಹಿಸುವ, ರಸ್ತೆ ಗುಡಿಸುವ, ಒಳಚರಂಡಿ ರಿಪೇರಿ ಮಾಡುವ ಕೆಲಸದ ಬಗ್ಗೆ, ಅದನ್ನು ನಿರ್ವಹಿಸುವವರ ಬಗ್ಗೆ ಸಾರ್ವಜನಿಕರಿಗೆ ಒಂದು ರೀತಿಯ ಕೀಳು ಅಭಿಪ್ರಾಯವಿರುತ್ತದೆ. ಅದನ್ನು ಹೋಗಲಾಡಿಸಿ ಸ್ವಚ್ಛ ಮಾಡುವವರು ನಮ್ಮಂತೆ ಮನುಷ್ಯರು, ಅವರು ಕೂಡ ಎಲ್ಲ ರೀತಿಯ ಗೌರವಕ್ಕೂ ಅರ್ಹರು. ಅವರದು ಬಹಳ ಮಹತ್ವದ, ಬಹಳಷ್ಟು ಜವಾಬ್ದಾರಿಯುತ ಕೆಲಸವಾಗಿದೆ. ಅದನ್ನು ನಿರ್ವಹಿಸುವವರನ್ನು ನಾವು ಹೃದಯಪೂರ್ವಕವಾಗಿ ಗೌರವಿಸಬೇಕು ಎಂಬ ಸಂದೇಶ ಕೊಡುವ ನಿಟ್ಟಿನಲ್ಲಿ ದಸರಾ ಉದ್ಘಾಟನೆ ಅವರಿಂದಲೇ ಆಗಬೇಕು ಎಂಬುದು ಶ್ರೀ ಶಿವಣ್ಣನವರ ಅಭಿಪ್ರಾಯ. ಬಹುಶಃ ಅದಕ್ಕೆ ಎಲ್ಲಾ ಸಾರ್ವಜನಿಕರು ಬೆಂಬಲ ಕೊಡುತ್ತಾರೆ ಎಂದು ಭಾವಿಸುತ್ತೇನೆ.

ಇಲ್ಲಿಯವರೆಗೂ ದೊಡ್ಡ ದೊಡ್ಡ ಸಾಧಕರು, ಸಮಾಜದ ಗಣ್ಯ ವ್ಯಕ್ತಿಗಳು, ಸಾಹಿತಿಗಳು, ದೊಡ್ಡ ಪ್ರಶಸ್ತಿ ಪುರಸ್ಕೃತರು ದಸರಾ ಉದ್ಘಾಟಿಸಿದ್ದಾರೆ. ಈ ಸಮಾಜ ಕೇವಲ ದೊಡ್ಡ ದೊಡ್ಡ ವ್ಯಕ್ತಿ, ಗೌರವಗಳಿಗೆ ಮಾತ್ರ ಸೀಮಿತವಲ್ಲ. ಅದರಲ್ಲಿ ಸಮಾಜದ ಕಟ್ಟ ಕಡೆಯ ಜನರು ಕೂಡ ಮಹತ್ವವನ್ನು ಪಡೆಯಬೇಕು, ಭಾಗವಹಿಸಬೇಕು ಮತ್ತು ಅವರು ಸಹ ಈ ಸಮಾಜದ ಆಧಾರ ಸ್ತಂಭಗಳಲ್ಲಿ ಒಬ್ಬರು. ಅವರು ನಮಗೆ ಅನಿವಾರ್ಯ. ಅಂತಹವರಿಗೆ ಬೆಂಬಲಿಸುವ, ಪ್ರೋತ್ಸಾಹ ಕೊಡುವ ಕೆಲಸ ನಾವು ಮಾಡಬೇಕಾಗುತ್ತದೆ. ಅವರಿಗೆ ಉತ್ತಮ ಸೌಕರ್ಯ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಸಹ.

ಪೌರಕಾರ್ಮಿಕರಲ್ಲಿ ಬಹುತೇಕ ಯಾರೂ ಸಹ ಸ್ವ ಇಚ್ಛೆಯಿಂದ ಆ ಕೆಲಸಕ್ಕೆ ಬಂದಿರುವುದಿಲ್ಲ. ಅವರೆಲ್ಲರೂ ಬದುಕಿನ ಅನಿವಾರ್ಯತೆಗಾಗಿ ಆ ಉದ್ಯೋಗ ಮಾಡುತ್ತಿರುತ್ತಾರೆ. ಅದರ ಅರ್ಥ ಅವರನ್ನು ನಾವು ಕೀಳಾಗಿ ಕಾಣುವುದಲ್ಲ.

ಜೊತೆಗೆ ಅವರ ಇನ್ನೂ ಒಂದು ಬೇಡಿಕೆ ಇದೆ. ಕಳೆದ ಸರ್ಕಾರದಲ್ಲಿ ಬೆಂಗಳೂರಿನ ದಿನಗೂಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ ಸರ್ಕಾರಿ ನೌಕರರ ಹಂತಕ್ಕೆ ತೆಗೆದುಕೊಂಡು ಹೋಗಿ ಅವರನ್ನು ಸಂಬಳ ಹೆಚ್ಚು ಮಾಡಲಾಗಿದೆ. ಇನ್ನೂ 600 ಜನಕ್ಕೆ ಖಾಯಂ ಕೆಲಸ ಆಗಬೇಕಿದೆ. ಪೌರಕಾರ್ಮಿಕರ ಈ ಕ್ಷಣದ ಇಡೀ ರಾಜ್ಯದ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ. ಮಾನ್ಯ ಶಿವಣ್ಣನವರು ಸಹ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಲ್ಲದೆ, ಸಚಿವ ಸಂಪುಟ ವಿಸ್ತರಣೆಯ ನಂತರ ಅದಕ್ಕೆ ಸಂಬಂಧಿಸಿದ ಮಂತ್ರಿಗಳ ಬಳಿಯೂ ಮಾತನಾಡುವುದಾಗಿಯೂ, ಜೊತೆಗೆ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ಎತ್ತಿ ಚರ್ಚೆಗೆ ಒಳಪಡಿಸುವುದಾಗಿಯೂ ಹೇಳಿದ್ದಾರೆ ಸರ್ಕಾರ ಮತ್ತು ಸಮಾಜದ ಅವಶ್ಯಕತೆ ಇರುವುದು ಇಂತಹ ಕಟ್ಟಕಡೆಯ ವ್ಯಕ್ತಿಗಳಿಗೆ ಎಂಬುದನ್ನು ನಾವೆಲ್ಲರೂ ಮನಗಾಬೇಕು. ವಿದ್ಯಾವಂತರು, ಬುದ್ಧಿವಂತರು, ಹಣವಂತರು ಹೇಗೋ ಈ ವ್ಯವಸ್ಥೆಯಲ್ಲಿ ಬದುಕುತ್ತಾರೆ. ನಿಜಕ್ಕೂ ಬದುಕಲು ಶ್ರಮಪಡುವವರು, ಕಷ್ಟನಷ್ಟ ಅನುಭವಿಸುವವರು ಪೌರಕಾರ್ಮಿಕರು. ಸಮಾಜದ ಕಟ್ಟ ಕಡೆಯ ಜನರು ಬಗ್ಗೆ ನಮಗೆಲ್ಲ ಒಂದಷ್ಟು ಸಹಾನುಭೂತಿ ಇರಲಿ ಎಂಬ ಆಶಯ ನಮ್ಮೆಲ್ಲರದಾಗಿರಬೇಕು.

ಏಕೆಂದರೆ,
ಪೌರ ಕಾರ್ಮಿಕರ ಇನ್ನೊಂದು ಹೆಸರೇ ಆರೋಗ್ಯ ರಕ್ಷಕರು. ರೋಗ ಬಂದ ನಂತರ ನಮ್ಮ ಪಾಲಿನ ರಕ್ಷಕರು ವೈದ್ಯರು. ಆದರೆ ರೋಗ ಬರದಂತೆ ತಡೆಯುವ ಎಲ್ಲಾ ಪ್ರಯತ್ನ ಮಾಡುವವರು ಈ ಪೌರ ಕಾರ್ಮಿಕರು.

ಪೌರ ಕಾರ್ಮಿಕ ವೃತ್ತಿಯ ಮುಖ್ಯ ಉದ್ದೇಶವೇ ಜನರಿಗೆ ಬೇಡವಾದ, ಜನರಿಂದ ತಿರಸ್ಕರಿಸಲಾದ, ಅದನ್ನು ಎಲ್ಲಿಯೂ ಸಂಗ್ರಹಿಸಲಾರದ ಅತ್ಯಂತ ಕೊಳಕ, ಅಸಹ್ಯ ದುರ್ವಾಸನೆಯ ವಸ್ತುಗಳನ್ನು ತಾವು ಸಂಗ್ರಹಿಸಿ ವಿಲೇವಾರಿ ಮಾಡುವುದು.

ನೆನಪಿರಲಿ, ಇದು‌ ಶ್ರೀಮಂತ ಅಥವಾ ಗೌರವಾನ್ವಿತ ಅಥವಾ ಆಸಕ್ತಿದಾಯಕ ಅಥವಾ ಸಾಧನೆಗೆ ಅವಕಾಶವಿರುವ ವೃತ್ತಿಯಲ್ಲ. ಬಹುಶಃ ಬದುಕಲು ಪರ್ಯಾಯ ಮಾರ್ಗವಿಲ್ಲದ ಅತಿ ಅನಿವಾರ್ಯ ಹೊಟ್ಟೆಪಾಡಿನ ಕೆಲಸ.

ಕೆಲವೊಮ್ಮೆ ಆ ದುರ್ನಾತ ನೆನಪಾದಲ್ಲಿ ಊಟ ಮಾಡುವುದು ಕಷ್ಟ. ಅದಕ್ಕಾಗಿಯೇ ‌ಈ ವೃತ್ತಿಯಲ್ಲಿ ಇರುವವರು ಹೆಣ್ಣು ಗಂಡು ಭೇದವಿಲ್ಲದೆ ಸಾಕಷ್ಟು ಜನ ಸಂಪೂರ್ಣ ಮದ್ಯಪಾನದ ದಾಸರಾಗಿರುತ್ತಾರೆ. ಬಹುಶಃ ಆ ಅಸಹ್ಯ ಮತ್ತು ನೋವನ್ನು ಮರೆಯಲು ಅವರೇ ಕಂಡುಕೊಂಡಿರುವ ಒಂದು ಮಾರ್ಗ ಇರಬಹುದು. ಅದೇ ಕಾರಣದಿಂದ ಅವರು ಬಹುಬೇಗ ರೋಗಗಳಿಗೆ ತುತ್ತಾಗಿ ಅಕಾಲ ಮೃತ್ಯುವಿಗೆ ಒಳಗಾಗುತ್ತಾರೆ.

ಕೋವಿಡ್ ಸಮಯದಲ್ಲಿ ಸಹ ಇವರು ನಿರಂತರವಾಗಿ ತಮ್ಮ ಕೆಲಸ ಮಾಡಿದ್ದಾರೆ ಮತ್ತು ಸಾಕಷ್ಟು ಜನ ಜೀವ ತೆತ್ತಿದ್ದಾರೆ.

ಎಲ್ಲಾ ಕೆಲಸಗಳು ಪವಿತ್ರವೇ ಎಂಬುದು ಆತ್ಮ ವಂಚನೆಯ ಮಾತಾಗಬಹುದು. ಏಕೆಂದರೆ ಪೌರ ಕಾರ್ಮಿಕ ವೃತ್ತಿಯು ಕಡು ಬಡವರ ಅನಿವಾರ್ಯ ಆಯ್ಕೆಯೇ ಹೊರತು ಅದು ಇಷ್ಟ ಪಟ್ಟು ಮಾಡುವ ಕೆಲಸವಲ್ಲ. ಆದರೆ ಕೆಲಸಕ್ಕೆ ಸೇರಿದ ನಂತರ ಪರಿಶ್ರಮ ಪಡಲೇಬೇಕು. ಹಣಕ್ಕಾಗಿ ಮತ್ತು ಅದನ್ನು ನಿರ್ವಹಿಸುವ ಮೇಲ್ವಿಚಾರಕರ ಒತ್ತಡದಿಂದಾಗಿ.

ನಮ್ಮ ಮನೋಭಾವ ಸಹ ಈ ವಿಷಯದಲ್ಲಿ ಸ್ವಲ್ಪ ವಿಚಿತ್ರವಾಗಿಯೇ ಇದೆ. ಕಸ ಗುಡಿಸುವವರು ಇದ್ದಾರೆ ಎಂಬ ಕಾರಣದಿಂದಾಗಿಯೇ ಹೆಚ್ಚು ಕಸವನ್ನು ಎಲ್ಲೆಂದರಲ್ಲಿ ಬೇಜವಾಬ್ದಾರಿಯಿಂದ ಬಿಸಾಡುತ್ತೇವೆ. ಕಾರಣ ಅವರಿಗೆ ಸ್ವಚ್ಛ ಗೊಳಿಸಲು ಸಂಬಳ ಕೊಡಲಾಗುತ್ತದೆ ಎಂದು.

ಇದು ಎಷ್ಟು ತಪ್ಪು ಗೊತ್ತಾ. ಸ್ವಲ್ಪ ಊಹಿಸಿಕೊಳ್ಳಿ. ನಾವು ಅಥವಾ ನಮ್ಮ ಹತ್ತಿರದವರು ಅಥವಾ ನಮ್ಮ ಪ್ರೀತಿ ಪಾತ್ರರು ಬಡತನದ ಕಾರಣಕ್ಕಾಗಿ ಇನ್ನೊಬ್ಬರ ಮಲ ಮೂತ್ರಗಳನ್ನು ಮತ್ತು ಅತ್ಯಂತ ಕೊಳೆತ ವಸ್ತುಗಳನ್ನು ಶುಚಿ ಮಾಡುತ್ತಾರೆ ಎಂದರೆ ನಮಗೆ ಆಗಬಹುದಾದ ನೋವು ಮತ್ತು ಅವಮಾನ.

ಸುಲಭವಾಗಿ ಹೇಳಬಹುದು, ಅವರಿಗೆ ಎಲ್ಲಾ ರೀತಿಯ ಆಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು. ಆದರೆ ಅದು ಬಹುತೇಕ ಕಾಗದದಲ್ಲಿ ಮಾತ್ರ. ವಾಸ್ತವ ಪರಿಸ್ಥಿತಿ ಬೇರೆಯದೇ ಆಗಿರುತ್ತದೆ. ಸುರಕ್ಷತೆ ಒದಗಿಸಿದರು ಆ ಕೆಲಸ ಅತ್ಯಂತ ಮಾನಸಿಕ ಹಿಂಸಾತ್ಮಕ ಎಂದು ನನ್ನ ವೈಯಕ್ತಿಕ ಅಭಿಪ್ರಾಯ.

ಇರಲಿ, ಈಗ ಇತರರನ್ನು ದೂಷಿಸುವುದು ಒಂದು ಕಡೆಯಾದರೆ ನಮ್ಮ ಸ್ವತಃ ಜವಾಬ್ದಾರಿ ಏನು ಎಂಬುದನ್ನು ಯೋಚಿಸಿ ಸ್ವಲ್ಪ ಮಟ್ಟಿಗೆ ಕಾರ್ಯರೂಪಕ್ಕೆ ತರೋಣ.

ಮೊಟ್ಟಮೊದಲನೆಯದಾಗಿ,
ಬೇರೆ ಎಲ್ಲಾ ವೃತ್ತಿ ನಿರತ ವ್ಯಕ್ತಿಗಳಂತೆ ಅಂದರೆ ಶಿಕ್ಷಕರು, ವೈದ್ಯರು, ಪೋಲೀಸರು, ಶಾಸಕರು, ಸಿನಿಮಾ ನಟರು, ಸ್ವಾಮೀಜಿಗಳು, ಸಾಹಿತಿಗಳು, ಸಮಾಜ ಸೇವಕರು, ಸೈನಿಕರು ಮುಂತಾದ ಎಲ್ಲರಂತೆ ಇವರಿಗೂ ಗೌರವ ನೀಡಿ ಬಹುವಚನದಲ್ಲಿ ಬನ್ನಿ ಹೋಗಿ ಎಂದು ಮಾತನಾಡಿಸೋಣ. ಇದು ಯಾವುದೇ ಶ್ರಮವಿಲ್ಲದ ಅತ್ಯಂತ ಸರಳ ಮಾನವೀಯ ಪ್ರತಿಕ್ರಿಯೆ.

ಎರಡನೆಯದಾಗಿ,
ಅವರ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂದರೆ ನಾವುಗಳು ಎಷ್ಟು ಸಾಧ್ಯವೋ ಅಷ್ಟು ಕಸ ಉತ್ಪಾದನೆ ಕಡಿಮೆ ಮಾಡುವುದು ಮತ್ತು ಅದನ್ನು ಕ್ರಮಬದ್ಧ ಗೊಳಿಸಲು ನಮ್ಮ ನಿಯಂತ್ರಣದ ಸಂಬಂಧಪಟ್ಟವರಲ್ಲಿ ಮನವಿ ಮಾಡೋಣ ಮತ್ತು ಜಾಗೃತ ಗೊಳಿಸೋಣ. ಕನಿಷ್ಠ ಇಷ್ಟಾದರೂ ನಾವು ಪ್ರಯತ್ನಿಸೋಣ.

ಮೂರನೆಯದಾಗಿ, ಅವರಿಗೆ ಸ್ವಲ್ಪ ಹಣದ ರೂಪದ ಟಿಪ್ಸ್ ಕೊಡುವುದೇ ಒಂದು ‌ಸಾಧನೆ ಎಂಬ ಅಹಂಕಾರ ಬಿಟ್ಟು ಅದು ನಮ್ಮ ಗೌರವಪೂರ್ವಕ ಕಾಣಿಕೆ. ಇವರು ಅದಕ್ಕಿಂತ ಹೆಚ್ಚು ಅರ್ಹರು ಎಂಬ ವಿನಮ್ರತೆ ಇರಲಿ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದಲ್ಲಿ ಆತ್ಮಸಾಕ್ಷಿಯಾಗಿ ಸ್ವಲ್ಪ ಸಹಾಯ ಅಥವಾ ಮಾರ್ಗದರ್ಶನ ಮಾಡೋಣ.

ಇದನ್ನು ಕೇವಲ ಓದಿ ನಿರ್ಲಕ್ಷಿಸದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಆರಂಭಿಸಿದರೆ ಸಾಮಾಜಿಕ ಬದಲಾವಣೆ ಹೆಚ್ಚು ನಾಗರಿಕವಾಗುತ್ತಾ ಸಾಗುತ್ತದೆ. ಸಣ್ಣ ಸಣ್ಣ ಬದಲಾವಣೆಗಳೇ ಮುಂದೆ ನಮ್ಮನ್ನು ಹೆಚ್ಚು ಆರೋಗ್ಯ ಪೂರ್ಣವಾಗಿ ಇರುವಂತೆ ಮಾಡುತ್ತದೆ.

ಕೊನೆಯದಾಗಿ ಈ ಬಾರಿಯ ದಸರಾ ಪೌರಕಾರ್ಮಿಕರಿಂದ ಉದ್ಘಾಟನೆಯಾಗಲಿ, ಇಡೀ ರಾಜ್ಯದ ಎಲ್ಲಾ ದಿನಗೂಲಿ ಪೌರಕಾರ್ಮಿಕರ ಕೆಲಸ ಖಾಯಂ ಆಗಲಿ, ಮಾನ್ಯ ಮುಖ್ಯಮಂತ್ರಿಗಳು ಆದಷ್ಟು ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

4 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

4 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

6 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

10 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

16 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago