Categories: ಲೇಖನ

ಇರುವುದೊಂದೇ ಬದುಕು, ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ…….

ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ…..

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು,
ಯಾರು ಸ್ನೇಹದಿ ಬರುವರೋ ಅವರೇ ನನ್ನೋರು………..

ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು……..

ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ ಒಂದು ಕಡೆ ಶಾಶ್ವತವಾಗಿ ನೆಲೆನಿಂತ. ಅದು ಎಷ್ಟರಮಟ್ಟಿಗೆ ಎಂದರೆ ಆತನ ಹುಟ್ಟು, ಬದುಕು, ಸಾವು ಎಲ್ಲವೂ ಒಂದೇ ಪ್ರದೇಶದಲ್ಲಿ ನಡೆಯುತ್ತಿತ್ತು. ಆ ಸ್ಥಳದಿಂದ ಆತ ದೂರ ಸರಿಯುತ್ತಿದ್ದುದು ತೀರಾ ಅಪರೂಪ. ಭಾವನಾತ್ಮಕವಾಗಿ ಆತ ಆ ಪ್ರದೇಶದ ಬಗ್ಗೆ ತುಂಬಾ ಅಭಿಮಾನ ಹೊಂದಿರುತ್ತಿದ್ದ…….

ಯಾವಾಗ ಜನಸಂಖ್ಯೆ ಹೆಚ್ಚಾಗಿ ಬದುಕಿನ ಅನಿವಾರ್ಯತೆಗಾಗಿ ಕೈಗಾರಿಕೀಕರಣ ಮತ್ತು ಅದರಿಂದಾಗಿ ಸೃಷ್ಟಿಯಾದ ನಗರೀಕರಣ ಪ್ರಾರಂಭವಾಯಿತೋ ಆಗ ಮತ್ತೆ ವಲಸೆ ಪ್ರಾರಂಭವಾಗಿ ಆ ಪ್ರದೇಶದ ಭಾವನಾತ್ಮಕ ಸಂಬಂಧ ಸಡಿಲವಾಗತೊಡಗಿತು…….

ತಾತ ಮುತ್ತಾತಂದಿರು ಹುಟ್ಟಿ ಬೆಳೆದ ಊರಿನಿಂದ ಮಕ್ಕಳು, ಮಕ್ಕಳು ಇದ್ದ ಸ್ಥಳದಿಂದ ಮೊಮ್ಮಕ್ಕಳು, ಅಲ್ಲಿಂದ ಮರಿ ಮಕ್ಕಳು ಬೇರೆ ಬೇರೆ ವಾಸ ಸ್ಥಾನಗಳನ್ನು ಹುಡುಕಿಕೊಂಡು ಹೊರಟರು. ನಮ್ಮ ಪೂರ್ವಿಕರ ನಿಜವಾದ ಪ್ರದೇಶಗಳು ಪತ್ತೆ ಹಚ್ಚುವುದೇ ಕಷ್ಟವಾಯಿತು. ಎಲ್ಲೋ ಅಪರೂಪದಲ್ಲಿ ನೂರು ಇನ್ನೂರು ವರ್ಷಗಳಷ್ಟು ದೀರ್ಘಕಾಲ ಒಂದೇ ಸ್ಥಳದಲ್ಲಿ ವಾಸವಾಗಿರುವ ಕೆಲವು ಕುಟುಂಬಗಳು ಉದಾಹರಣೆಗೆ ಸಿಗಬಹುದು……..

ಇಂತಹ ಸಂದರ್ಭ ಮತ್ತು ಸನ್ನಿವೇಶದಲ್ಲಿ ಮೇಲಿನ ಸಿನಿಮಾ ಹಾಡು ನೆನಪಾಗುತ್ತದೆ. ಒಂದು ಊರಿನಲ್ಲಿ, ಒಂದೇ ಮನೆಯಲ್ಲಿ ಹತ್ತು ಇಪ್ಪತ್ತು ವರ್ಷ ವಾಸಿಸುವುದೇ ಒಂದು ದೊಡ್ಡ ಸಾಧನೆಯಾಗಿದೆ. ಸ್ವಂತ ಮನೆಯವರು ಆಯ್ಕೆಗಳಿಲ್ಲದೆ ಸ್ವಲ್ಪ ದೀರ್ಘಕಾಲ ಒಂದೇ ಮನೆಯಲ್ಲಿ ಉಳಿಯಬಹುದು. ಬಾಡಿಗೆ ಮನೆಯವರಿಗೆ, ವರ್ಗಾವಣೆ ಇರುವ ಉದ್ಯೋಗ ವ್ಯವಹಾರ ಮಾಡುವವರಿಗೆ, ಹೊಸ ಅವಕಾಶಗಳ ಹುಡುಕಾಟದವರಿಗೆ ಐದು ಹತ್ತು ವರ್ಷಗಳೇ ದೊಡ್ಡ ಸಮಯವಾಗಿರುತ್ತದೆ……..

ನಮ್ಮ ಮೂಲ ಬೇರುಗಳು ಸಡಿಲವಾದಂತೆ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತದೆ.
ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಇದಕ್ಕಿಂತ ಅಪಾಯಕಾರಿಯಾದ ಮನುಷ್ಯ ಸಂಬಂಧಗಳು ಸಡಿಲವಾಗತೊಡಗಿರುವುದು. ಪ್ರತ್ಯೇಕ ವಾಸಸ್ಥಳಗಳು ಮನುಷ್ಯರ ನಡುವಿನ ಗಾಢ ಸಂಬಂಧಗಳನ್ನು ಸಹ ಪ್ರತ್ಯೇಕಿಸಿದೆ. ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿ, ಅವು ಏಕ ಕೊಣೆಯ ಚಿಕ್ಕ ಮನೆಗಳಾಗಿ ಕೊನೆಗೆ ಹಾಸ್ಟೆಲ್ ಮತ್ತು ಪಿ.ಜಿ. ಕೇಂದ್ರಗಳಾಗಿ ರೂಪಾಂತರ ಹೊಂದುತ್ತಿವೆ. ಅಪಾರ್ಟ್ ಮೆಂಟ್ ಸಮುಚ್ಚಯಗಳಲ್ಲಿ ಪ್ರತ್ಯೇಕ ಊರಿನ ಗುಣಲಕ್ಷಣಗಳನ್ನು ಕಾಣುತ್ತಿದ್ದೇವೆ……..

ಬದಲಾವಣೆ ಜಗದ ನಿಯಮ. ಅದನ್ನು ಸ್ವೀಕರಿಸಬೇಕು ನಿಜ. ಆದರೆ ಯಾವ ದಿಕ್ಕಿನತ್ತ ಈ ಬದಲಾವಣೆ ಸಾಗುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ ? ಸರಿ ಸುಮಾರು 60/80 ವರ್ಷಗಳ ಬದುಕಿನ ಬಹಳಷ್ಟು ಸಮಯವನ್ನು ನಮ್ಮ ನಿಯಂತ್ರಣವಿಲ್ಲದೆ, ಊಟ, ವಸತಿ, ವಾಹನಗಳಿಗಾಗಿ ನಮ್ಮ ಇಚ್ಚೆಗೆ ವಿರುದ್ಧವಾಗಿ ಜೀವನದ ಗುಣಮಟ್ಟ ಮತ್ತು ನೆಮ್ಮದಿಯ ಗುಣಮಟ್ಟ ಎರಡನ್ನೂ ಬಲಿಕೊಟ್ಟು ಜೀವಿಸುವುದು ನಮ್ಮ ಹುಟ್ಟನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಸಾರ್ಥಕ ಜೀವನ ಅಂದರೆ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ. ಊಟ ವಸತಿಗಾಗಿ ಬದುಕೇ, ಗಂಡ ಹೆಂಡತಿ ಮಕ್ಕಳಿಗಾಗಿ ಬದುಕೇ, ನಮ್ಮ ಆಸಕ್ತಿಯ ಚಟುವಟಿಕೆಗಳಿಗಾಗಿ ಬದುಕೇ, ಏನಾದರೂ ಸಾಧಿಸುವುದು ಬದುಕೇ ಎಂಬ ಆಲೋಚನೆಗಳ ನಡುವೆ ಬದುಕುವುದೇ ಸಾಧನೆಯಾಗುವ ಹಂತಕ್ಕೆ ನಮ್ಮಲ್ಲಿ ಬಹುತೇಕರು ಬಂದು ತಲುಪಿದ್ದಾರೆ……….

ಪರಿಸ್ಥಿತಿ ಹೀಗೇ ಮುಂದುವರಿದರೆ ಮುಖ್ಯವಾಗಿ ಯುವ ಸಮುದಾಯ ಯಂತ್ರ ಮಾನವರಾಗುವ ನಿರ್ಭಾವುಕ ಸ್ಥಿತಿ ತಲುಪಬಹುದು. ಮನೆ, ವಾಹನ, ಶಿಕ್ಷಣ, ಆರೋಗ್ಯ ಇವುಗಳಿಗಾಗಿ ಇರುವ ಹಣಕಾಸಿನ ಬ್ಯಾಂಕಿಂಗ್ ಇಎಂಐ ವ್ಯವಸ್ಥೆ ಅನೇಕ ನಗರ ಪ್ರದೇಶದ ಜನರ ಇಡೀ ಬದುಕನ್ನು ನಿಯಂತ್ರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಾಲದ ಸುತ್ತಲೇ ಜೀವನವನ್ನು ಕಟ್ಟಿಹಾಕಿ ಮಾನವ ಸಂಪನ್ಮೂಲಗಳನ್ನು ತಮ್ಮ ಹಿತಾಸಕ್ತಿಯ ಬಳಕೆಗಾಗಿ ದುಡಿಸಿಕೊಳ್ಳುತ್ತಿರುವ ವರ್ಗದ ಬಗ್ಗೆ ನಾವು ಜಾಗೃತವಾಗಬೇಕಿದೆ. ಕೆಲವೇ ಕೆಲವು ಜನರ ಸುಖಕ್ಕಾಗಿ ಇಡೀ ಸಮೂಹ ದುಡಿಯುವುದು ನಿಜಕ್ಕೂ ದುರಂತ. ಹೋಗಲಿ ಆ ದುಡಿತದಿಂದ ನೆಮ್ಮದಿಯಾದರೂ ಸಿಗುತ್ತಿದೆಯೇ ?…….

ಎಲ್ಲರ ಮೇಲೆ ಅಪನಂಬಿಕೆ, ಆತ್ಮಹತ್ಯೆ, ಅಪರಾಧ, ಅಪಘಾತ, ಅನಾರೋಗ್ಯ ಹೆಚ್ಚಳ, ಇದೇ ಒತ್ತಡದ ಕಾರಣದಿಂದ ಹಣದ ಮಹತ್ವ ಹೆಚ್ಚಾಗಿ ಮಾನವಿಯ ಮೌಲ್ಯಗಳ ಕುಸಿತ. ನೆಮ್ಮದಿಗಾಗಿ ಹುಡುಕಾಟ. ಈಗ ನಮ್ಮ ಬದುಕಿನ ದಿಕ್ಕುಗಳನ್ನು ಈ ಎಲ್ಲಾ ಹಿಂದಿನ ಅನುಭವಗಳ ಆಧಾರದಲ್ಲಿ ಮತ್ತೊಂದು ದಿಕ್ಕಿನತ್ತ ಸಾಗಿಸುವ ಪ್ರಯತ್ನ ಮಾಡಬೇಕಿದೆ. ಬದುಕಿನ ಅತ್ಯಮೂಲ್ಯ ಸಮಯವನ್ನು ಒಂದು ಆಹ್ಲಾದಕರ, ಹೆಚ್ಚು ನಗುವಿನಿಂದ ಕೂಡಿದ, ನಮ್ಮ ಆಸಕ್ತಿಯ ವಿಷಯಗಳಲ್ಲಿ ತೊಡಗಿಸಿಕೊಳ್ಳುವ, ಹೆಚ್ಚು ಒತ್ತಡವಿಲ್ಲದ, ಇಎಂಐ ಗಳಲ್ಲಿ ಬಂಧಿಯಾಗದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕಿದೆ……..

ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ. ಅದು ಜೂಜಾಟವಾಗುತ್ತದೆ. ಆಗ ಕೆಲವೇ ಕೆಲವು ಜನ ಆ ಜೂಜಾಟದಲ್ಲಿ ಲಾಭ ಮಾಡಿ ಉಳಿದವರು ದಿವಾಳಿಯಾಗುತ್ತಾರೆ. ಹಣದ ದಿವಾಳಿತನವೇ ಬದುಕಿನ ದಿವಾಳಿತನವಾಗುತ್ತದೆ. ನಮಗರಿವಿಲ್ಲದೆ ನಾವು ನಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು ಬೇರೆಯವರ ದಾಳವಾಗುತ್ತಿದ್ದೇವೆ. ಜೀತದಾಳುಗಳಾಗುವ ಮುನ್ನ ದಯವಿಟ್ಟು ಎಚ್ಚೆತ್ತುಕೊಳ್ಳಿ…….

ಇರುವುದೊಂದೇ ಬದುಕು. ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ………

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

13 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

15 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

18 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

20 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

22 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

2 days ago