Categories: ಲೇಖನ

ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ…..

ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ……..

ಯಾವನೋ ಹುಚ್ಚ 2047 ರ ವೇಳೆಗೆ ಭಾರತವನ್ನು ಇಸ್ಲಾಂ ದೇಶ ಮಾಡುವುದಾಗಿ ಹೇಳುತ್ತಾನೆ, ಇನ್ಯಾರೋ ಮತಿಗೇಡಿ ಅಫ್ಘಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶ್, ನೇಪಾಳ, ಶ್ರೀಲಂಕಾ, ಭೂತಾನ್ ಮುಂತಾದ ದೇಶಗಳನ್ನು ಒಟ್ಟಿಗೆ ಸೇರಿಸಿ ಅಖಂಡ ಭಾರತವನ್ನು ಮತ್ತೆ ಸೃಷ್ಟಿ ಮಾಡುತ್ತೇವೆ ಎಂದು ಹೇಳುತ್ತಾನೆ, ಮತ್ಯಾರೋ ತಲೆ ಕೆಟ್ಟವ  ಈ ದೇಶವನ್ನು ಸನಾತನ ಧರ್ಮದ ಆಧಾರದ ಮೇಲೆ ಸಂಪೂರ್ಣ ಹಿಂದು ರಾಷ್ಟ್ರವನ್ನು ಮಾಡುವುದಾಗಿ ಹೇಳುತ್ತಾನೆ, ಮಗದೊಬ್ಬ ಅವಿವೇಕಿ ಒಂದು ಗಂಟೆ ಪೊಲೀಸರನ್ನು ಹಿಂದಕ್ಕೆ ಪಡೆಯಿರಿ ಮುಸ್ಲಿಮರು ತಮ್ಮ ಶಕ್ತಿ ಏನು ಎಂದು ಹಿಂದುಗಳಿಗೆ ತೋರಿಸುತ್ತೇವೆ ಎಂದು ಹೇಳುತ್ತಾನೆ,…..

ಹೀಗೆ ಮಾತನಾಡಲು ಈ ದೇಶ ಹುಚ್ಚರ ಸಂತೆಯಲ್ಲ. ನಿಮ್ಮ ಸ್ವಂತ ಆಸ್ತಿಯೂ ಅಲ್ಲ. ಇದೊಂದು ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ. 75 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಿಮ್ಮ ಚುನಾವಣೆಯ ತೆವಲಿಗಾಗಿ ಏನೇನು ಬಾಯಿಗೆ ಬಂದಂತೆ ಮಾತನಾಡಬಾರದು. ಸಂವಿಧಾನದ ಮೂಲದಲ್ಲಿಯೇ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಸದಾ ಅವಕಾಶವಿದೆ. ಅದು ನಿರಂತರವಾಗಿ ನಡೆಯುತ್ತಲು ಇದೆ. ಆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಜನಪ್ರತಿನಿಧಿ ಒಬ್ಬರು ಹೇಳುವುದು ಕೇವಲ ದೇಶದ್ರೋಹ ಮಾತ್ರವಲ್ಲ ಈ ಮಣ್ಣಿಗೆ ಇಲ್ಲಿನ ಮೌಲ್ಯಗಳ ಬೆನ್ನಿಗೆ ಚೂರಿ ಹಾಕಿದಂತೆ….

ಯಾವ ಸಂವಿಧಾನ ಒಂದಷ್ಟು ಅನುಷ್ಠಾನದ ಲೋಪಗಳ ಹೊರತಾಗಿಯೂ ಅತ್ಯಂತ ಯಶಸ್ವಿ ದೇಶವಾ,ಗಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಅದರಲ್ಲೂ ಆ ಜನಸಂಖ್ಯೆ ಅತ್ಯಂತ ವೈವಿಧ್ಯಮಯವಾಗಿದ್ದರು, ಹೇಗೋ ಏನೋ ನಾವೆಲ್ಲ ಒಂದಷ್ಟು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಸಂಪೂರ್ಣ ತೃಪ್ತಿ ಇಲ್ಲದಿದ್ದರೂ ಸಾಮಾನ್ಯ ಜನರಲ್ಲಿ ಒಂದಷ್ಟು ಸಮಾಧಾನವಂತು ಖಂಡಿತ ಇದೆ. ಹೌದು ಸಾಕಷ್ಟು ಬದಲಾವಣೆಯ ಅವಶ್ಯಕತೆಯೂ ಇದೆ, ಆದರೆ ಅದು ನೀವು ಹೇಳುವ ಸಂವಿಧಾನದ ಬದಲಾವಣೆ ಅಲ್ಲ‌. ಅದು ನಮ್ಮ ವ್ಯಕ್ತಿತ್ವಗಳ, ನಮ್ಮ ನಾಗರೀಕ ವರ್ತನೆಯ ಬದಲಾವಣೆ. ಭ್ರಷ್ಟಾಚಾರ ರಹಿತ, ಜಾತಿ ರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗುವ ಹೆಜ್ಜೆಗಳನ್ನು ಇಡಬೇಕಾಗಿರುವುದು ನಿಜ. ಅದನ್ನು ಈ ಸಂವಿಧಾನದ ಅಡಿಯಲ್ಲಿಯೇ ಖಂಡಿತ ಮಾಡಬಹುದು. ಸಮಸ್ಯೆ ಇರುವುದು ಸಂವಿಧಾನದ ನಿಯಮಗಳಲ್ಲ, ಈ ಸಮಾಜದ ಅಧಿಕಾರ ಹೊಂದಿರುವ ಜನರ ಅಪ್ರಾಮಾಣಿಕತೆಯಿಂದಾಗಿ ಒಂದಷ್ಟು ಸಮಸ್ಯೆಗಳು ತಲೆದೋರಿದೆ……

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗ ಹೆಚ್ಚು ಕ್ರಿಯಾತ್ಮಕವಾಗಿ, ಮೌಲ್ಯಯುತವಾಗಿ, ಸಂವಿಧಾನ ನಿಷ್ಠವಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ಇನ್ನು ಹೆಚ್ಚು ಅಭಿವೃದ್ಧಿ ಸಾಧಿಸಿ ಜನರ ಜೀವನಮಟ್ಟ ಸುಧಾರಿಸಲು ಸಾಧ್ಯ. ನೀವು ಅಥವಾ ನಿಮ್ಮಂಥ ಎಲ್ಲಾ ಧರ್ಮಗಳ ಮತಾಂಧರು ಹೀಗೆ ತಮ್ಮ ಇಷ್ಟದಂತೆ ಹೇಳಿಕೆಗಳನ್ನು ನೀಡಿದರೆ ಅದರ ಪರಿಣಾಮ ನಿಮ್ಮಂತದೇ ಜನರು ಪ್ರಚೋದನೆಗೆ ಒಳಗಾಗಿ ಹಿಂಸೆಗೆ ಇಳಿಯುತ್ತಾರೆ…..

ಮುಸ್ಲಿಮರೇ ಇರಲಿ, ಕ್ರಿಶ್ಚಿಯನ್ನರೇ ಇರಲಿ, ಸಿಖ್ಖರೇ ಇರಲಿ, ಹಿಂದುಗಳೇ ಇರಲಿ ಮೊದಲು ಗೌರವಿಸ ಬೇಕಾಗಿರುವುದು ಈ ದೇಶದ ಸಂವಿಧಾನವನ್ನು. ಕಾರಣ ಸಂವಿಧಾನದ  ಪೀಠಿಕೆಯಲ್ಲಿಯೇ  ಹೇಳಿರುವುದು “ವಿ ದ ಪೀಪಲ್ ಆಫ್ ಇಂಡಿಯಾ” ಅಂದರೆ “ಭಾರತೀಯರಾದ ನಾವು ಎಂದು” ಅದರ ಅರ್ಥ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಆದ ನಾನು ಎಂದಲ್ಲ. ಇದಕ್ಕಿಂತ ರಾಷ್ಟ್ರಭಕ್ತಿ  ಯಾವುದಿದೆ ಹೇಳಿ……

ವೇದಿಕೆ ಸಿಕ್ಕಿದೆ, ಜನ ಕೇಳುತ್ತಿದ್ದಾರೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಕಾರಣದಿಂದ ಒಬ್ಬ ರೌಡಿಯಂತೆ ಮಾತನಾಡುವುದು ಶೋಭೆ ತರುವುದಿಲ್ಲ. ಒಂದು ವೇಳೆ ಹಾಗೆ ಇತರ ಯಾರೇ ಮಾತನಾಡಿದರು ಸಹ ಅದನ್ನು ಖಂಡಿಸಿ ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕೆ ವಿನಹ ಅದಕ್ಕೆ ವಿರುದ್ಧವಾಗಿ, ಅವರಂತೆ ನಾವು ಮಾತನಾಡುವುದು ಎಷ್ಟು ಸರಿ ?…..

ನಿಮಗೆ ಮೂಲಭೂತವಾಗಿ ಸಂವಿಧಾನ ಎಂದರೆ ಏನು ಎಂಬುದರ ಅರಿವಿದೆಯೇ ? ಸಂವಿಧಾನ ಎಲ್ಲಿಂದಲೋ ಯಾರಿಂದಲೂ ಹೇರಲ್ಪಟ್ಟ ನಿಯಮಗಳಲ್ಲ. ಸಂವಿಧಾನ ಈ ನೆಲದ, ಎಲ್ಲಾ ಮಾನವೀಯ ಮೌಲ್ಯಗಳ, ಪ್ರಾಕೃತಿಕ ಮೌಲ್ಯಗಳ, ಧಾರ್ಮಿಕ ಮೌಲ್ಯಗಳ, ಸಂಪ್ರದಾಯಿಕ ಪರಂಪರೆಯ, ವೈಚಾರಿಕ ಪ್ರಜ್ಞೆಯ ಸಮ್ಮಿಲನದ ನೀತಿ ನಿರೂಪಣೆಗಳು. ಅದನ್ನು ಇಲ್ಲಿನ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡೇ ರಚಿಸಲಾಗಿದೆ. ಅದನ್ನು ಕಾಪಾಡುವುದು ಹೇಗೆ ಎಂಬ ಚಿಂತನೆ ನಮ್ಮದಾಗಬೇಕೆ ಹೊರತು ಹುಚ್ಚುಚ್ಚಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಿನಿಮಾ ಹೀರೋನಂತೆ ಕಪಟ ನಾಟಕವಾಡುವುದು ಒಳ್ಳೆಯ ಲಕ್ಷಣವಲ್ಲ…..

ನಿಮ್ಮ ಮಾತುಗಳು ಇತರ ಸಮುದಾಯಗಳಿಗೆ ಮತ್ತಷ್ಟು ಪ್ರಚೋದನೆ ಆಗುತ್ತದೆ. ಇದು ಯಾವುದೋ ಧರ್ಮದ ದೇಶವಲ್ಲ, ಯಾವುದೋ ಜಾತಿಯ ದೇಶವಲ್ಲ, ಯಾವುದೋ ಪಕ್ಷದ ದೇಶವಲ್ಲ. ಇದು ಜನಸಾಮಾನ್ಯರ, ಭಾರತೀಯರ ದೇಶ…..

ಯಾಕೆ ಸುಮ್ಮನೆ ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುವಿರಿ. ಅದಕ್ಕೆ ಬದಲಾಗಿ ಮನುಷ್ಯ ಪ್ರಜ್ಞೆಯನ್ನು, ವೈಚಾರಿಕ ಪ್ರಜ್ಞೆಯನ್ನು, ಜನರಲ್ಲಿ ಜಾಗೃತಗೊಳಿಸಿ, ಒಂದು ವೇಳೆ ನಿಮ್ಮ ದೃಷ್ಟಿಯಲ್ಲಿ ಹಿಂದೆ ನೀವೇ ಹೇಳಿರುವಂತೆ ಮುಸ್ಲಿಮರಲ್ಲಿ ಮತಾಂದತೆ ಇದೆ, ಹಿಂಸೆ ಇದೆ ದೇಶ ವಿರೋಧಿ ಮನೋಭಾವವಿದೆ ಎಂಬುದು ನಿಮ್ಮ ಅನಿಸಿಕೆಯಾದರೆ ಅದನ್ನು ಪರಿವರ್ತಿಸಲು ಪ್ರಯತ್ನಿಸಿ. ಅದು ಈ ದೇಶದ ರಕ್ಷಣೆಗೆ ನೀವು ಕೊಡಬಹುದಾದ ಕೊಡುಗೆ. ಅದು ಬಿಟ್ಟು ಆ ಸಮುದಾಯವನ್ನೇ ನಾಶ ಮಾಡುವ ದ್ವೇಷ ಕಾರುವ ನೀವೇ ಈ ದೇಶದ ಮತ್ತೊಂದು ವಿಭಜನೆಗೆ ಕಾರಣರಾಗುತ್ತೀರಿ ಎಂಬುದನ್ನು ಮರೆಯದಿರಿ……

ಸನ್ಮಾನ್ಯ ಅನಂತ್ ಕುಮಾರ್ ಹೆಗಡೆಯವರೇ, ಈಗೇನೋ ಕೆಲವರು ನಿಮ್ಮನ್ನು ಹಿಂದುತ್ವದ, ಸನಾತನ ಧರ್ಮದ ನಾಯಕ ಎಂಬುದಾಗಿ ಕರೆಯಬಹುದು, ಮೆಚ್ಚಬಹುದು. ಆದರೆ ದೀರ್ಘಕಾಲದಲ್ಲಿ ಅದರ ದುಷ್ಪರಿಣಾಮ ಬಹಳ ಗಂಭೀರವಾಗಿ ದೇಶದ ಮೇಲೆ ಆಗುತ್ತದೆ ನೆನಪಿರಲಿ. ನಿಮಗೆ ಇರುವ ಧೈರ್ಯವನ್ನು ಈ ದೇಶದ ಒಳಿತಿಗಾಗಿ ಉಪಯೋಗಿಸಿ…..

ಕೇಸರೀಕರಣ, ಇಸ್ಲಾಂಮೀಕರಣ ಮುಂತಾದ ಹುಚ್ಚುಗಳನ್ನು ಬಿಟ್ಟು ಸಂವಿಧಾನೀಕರಣ, ಮಾನವೀಕರಣ, ಭಾರತೀಕರಣ ಮಾಡುವ ಬಗ್ಗೆ ಯೋಚಿಸಿ. ಮಾಧ್ಯಮಗಳೇ ನೀವು ಸಹ ಹುಚ್ಚು ಹೇಳಿಕೆಗಳಿಗೆ ಮಹತ್ವ ನೀಡದೆ ವಿವೇಚನೆ ಪ್ರದರ್ಶಿಸಿ. ಇಲ್ಲದಿದ್ದರೆ ಇದೇ ಅನಂತ್ ಕುಮಾರ್ ನಿನ್ನೆಯ ಭಾಷಣದಲ್ಲಿ ನಿಮ್ಮನ್ನು ಸಹ ಬೊಗಳುವ ನಾಯಿಗಳು ಎನ್ನುವ ಅತಿರೇಕದ ಮಾತನ್ನಾಡಿದ್ದಾರೆ. ಆ ಹುಚ್ಚು ಮತ್ತಷ್ಟು ಕೆರಳಲು ನೀವೇ ಕಾರಣ ಎಂಬುದನ್ನು ಮರೆಯದಿರಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 hour ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

3 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

3 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

3 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

8 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

9 hours ago