ಸೋನಂ ವಾಂಗ್ ಚುಕ್……
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ ಅಮೂಲ್ಯ…
ಇದನ್ನು ಅರ್ಥ ಮಾಡಿಕೊಳ್ಳಲು ಭಾರತದ ರಾಜಕೀಯ, ಧಾರ್ಮಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ವಿಶ್ವಕ್ಕೆ ಭಾರತದ ಕೊಡುಗೆ ಮಹಾತ್ಮ ಗಾಂಧಿಯಾದರೆ, ಭಾರತಕ್ಕೆ ಮಹಾತ್ಮಾ ಗಾಂಧಿಯವರ ಕೊಡುಗೆ ಉಪವಾಸ ಸತ್ಯಾಗ್ರಹ….
ನಾಗರಿಕ ಸಮಾಜ ಸದಾ ಸಂಘರ್ಷಗಳಿಂದಲೇ ನಡೆದುಕೊಂಡು ಬರುತ್ತಿರುತ್ತದೆ. ಅಂತಹ ಸಂಘರ್ಷಗಳನ್ನು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಎದುರಿಸಲು ಅನೇಕ ಮಾರ್ಗಗಳಿವೆ. ಅದರಲ್ಲಿ ಕೆಲವು ಹಿಂಸಾತ್ಮಕ ಮತ್ತೆ ಕೆಲವು ಅಹಿಂಸಾತ್ಮಕ ಅಸ್ತ್ರಗಳು ಚಾಲ್ತಿಯಲ್ಲಿವೆ…..
ಹಿಂಸಾತ್ಮಕ ಮಾರ್ಗಗಳ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಅಹಿಂಸಾತ್ಮಕ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಅತ್ಯಂತ ಹೆಚ್ಚು ಯಶಸ್ವಿಯಾಗಿರುವುದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಪ್ರಯೋಗಿಸಿದ ಉಪವಾಸ ಸತ್ಯಾಗ್ರಹ. ಇದು ಅತ್ಯಂತ ಪ್ರಬಲ ಅಸ್ತ್ರವಾಗಿ ಈಗಲೂ ಉಳಿದುಕೊಂಡಿದೆ.
ಉಪವಾಸ ಸತ್ಯಾಗ್ರಹದಿಂದ ಉತ್ತಮ ಫಲಿತಾಂಶಗಳು ಮೂಡಿಬಂದಿದೆ ಎಂದೇನೂ ಇಲ್ಲ. ಆದರೆ ಅದು ಯಾರಿಗೂ ತೊಂದರೆ ಕೊಡದೆ, ಕಾನೂನಾತ್ಮಕವಾಗಿ, ಮಾನವೀಯವಾಗಿ ಮತ್ತು ಮಾನಸಿಕವಾಗಿ ಎದುರಾಳಿಯನ್ನು ಕುಗ್ಗಿಸುವ ಅತ್ಯಂತ ಪ್ರಬಲ ಅಸ್ತ್ರವಾಗಿದೆ.
ಸ್ವಾತಂತ್ರ್ಯ ನಂತರ ಈ ರೀತಿ ಅನೇಕ ಉಪವಾಸ ಸತ್ಯಾಗ್ರಹಗಳು ನಡೆದಿದೆ. ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಾಯಿಸಿ ಆಂಧ್ರಪ್ರದೇಶದ ಪೊಟ್ಟಿ ಶ್ರೀರಾಮುಲು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಸತ್ಯಾಗ್ರಹದ ಸಮಯದಲ್ಲೇ ನಿಧನ ಹೊಂದಿದರು. ಅನೇಕ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಉಪವಾಸ ಸತ್ಯಾಗ್ರಹವನ್ನು ಬೇರೆ ಬೇರೆಯವರು ಮಾಡಿದ್ದಾರೆ. ಶರ್ಮಿಳಾ ಇರೋಮ್ ಎಂಬ ಮಣಿಪುರದ ಉಕ್ಕಿನ ಮಹಿಳೆ ಅಲ್ಲಿನ ಸೈನ್ಯಕ್ಕೆ ನೀಡಿದ ವಿಶೇಷ ಅಧಿಕಾರವನ್ನು ತೆರವುಗೊಳಿಸಲು ಅಂದರೆ ಪೂರ್ವ ರಾಜ್ಯಗಳ ಕೆಲವು ಪ್ರತ್ಯೇಕವಾದಿಗಳ ಭಯೋತ್ಪಾದನೆ ನಿಯಂತ್ರಿಸಲು ಸರ್ಕಾರ ಅಲ್ಲಿ ಯಾವುದೇ ಮುನ್ಸೂಚನೆ ನೀಡದೆ, ಯಾವುದೇ ಕಾರಣವನ್ನೂ ನೀಡದೆ ಯಾರನ್ನು ಬೇಕಾದರೂ ಬಂಧಿಸುವ, ಶಿಕ್ಷಿಸುವ ವಿಶೇಷ ಅಧಿಕಾರ ಹೊಂದಿತ್ತು. ಅದನ್ನು ಹಿಂಪಡೆಯಲು ಸುಮಾರು 16 ವರ್ಷ ಸತತವಾಗಿ ಉಪವಾಸ ಸತ್ಯಾಗ್ರಹ ಮಾಡಿದರು. ಹಾಗೆಯೇ ಭ್ರಷ್ಟಾಚಾರದ ವಿರುದ್ಧ ಅಣ್ಣ ಹಜಾರೆಯವರು ಇಡೀ ರಾಷ್ಟ್ರಾದ್ಯಂತ ಉಪವಾಸ ಸತ್ಯಾಗ್ರಹಕ್ಕೆ ಕರೆಕೊಟ್ಟು ತಾವೇ ಸ್ವತಃ ದೆಹಲಿಯ ರಾಮಲೀಲ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿ ಪ್ರಖ್ಯಾತರಾದರು.
ಇದೀಗ ಲಡಾಖಿನ ಇಂಜಿನಿಯರ್, ಶಿಕ್ಷಣ ತಜ್ಞ, ಪರಿಸರವಾದಿ ರಾಮನ್ ಮ್ಯಾಗ್ಸೆಸ್ ಪ್ರಶಸ್ತಿ ವಿಜೇತ ಸೋನಂ ವಾಂಗ್ ಚುಕ್ ಅವರು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆದ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಭಾರತೀಯ ಜಿರಳೆ ಪಕ್ಷದ ಪರವಾಗಿ ಹೋರಾಟಕ್ಕೆ ನಿಂತು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈಗಾಗಲೇ 18 ದಿನ ಕಳೆದಿದೆ. ಅವರ ಆರೋಗ್ಯ ತೀವ್ರವಾಗಿ ಕುಸಿಯುತ್ತಿದೆ. ಅವರ ಜೀವಕ್ಕೆ ಅಪಾಯವಿದೆ.
ಮೇಲೆ ಹೇಳಿದ ಉಪವಾಸದ ಇತಿಹಾಸ ಮತ್ತು ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಳುವ ಪಕ್ಷಗಳು ಉಪವಾಸವನ್ನು ತೀರಾ ಗಂಭೀರವಾಗೇನು ಪರಿಗಣಿಸುವುದಿಲ್ಲ. ಏಕೆಂದರೆ ಈಗಿನ ಸರ್ಕಾರಗಳು ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ಉಪವಾಸ ಮಾಡುವವರ ಜನಪ್ರಿಯತೆ, ಅವರ ಅಹಿಂಸಾ ನಡವಳಿಕೆ ಇವುಗಳನ್ನು ಅವರು ಅಳತೆ ಗೋಲಾಗಿ ಪರಿಗಣಿಸುತ್ತಾರೆ. ಆ ವ್ಯಕ್ತಿಯ ನೈತಿಕತೆಯನ್ನೇ ಅನುಮಾನಿಸುವಂತೆ, ಅವಮಾನಿಸುವಂತೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಅನೇಕ ರೀತಿಯ ಆರೋಪಗಳನ್ನು ಹೊರಿಸುತ್ತಾರೆ. ಅವರನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಾರೆ.
ಜೊತೆಗೆ ಒಂದು ವೇಳೆ ಉಪವಾಸ ನಿರತ ವ್ಯಕ್ತಿ ಸಾವನ್ನಪ್ಪಿದರೆ ಕೆಲವು ದಿನ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗಬಹುದೇ ಹೊರತು ನಂತರದ ದಿನಗಳಲ್ಲಿ ಶತ್ರು ತನ್ನಿಂದ ತಾನೇ ಮರೆಯಾದಂತೆ ಆಡಳಿತಗಾರರಿಗೆ ಅದು ಪರೋಕ್ಷ ಲಾಭವೇ ಆಗುತ್ತದೆ ಅಥವಾ ವ್ಯಕ್ತಿ ನಿತ್ರಾಣಗೊಂಡಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ನಾಯಕತ್ವವನ್ನೇ ಕುಗ್ಗಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು ಸಹ ನೈತಿಕತೆಯ ಜವಾಬ್ದಾರಿಯನ್ನೇ, ಪ್ರಾಮಾಣಿಕತೆಯನ್ನೇ ಮರೆತಿದ್ದಾರೆ. ಅವರಿಗೆ ಆಡಳಿತಗಾರರ ಮರ್ಜಿಯೇ ಮುಖ್ಯವಾಗಿದೆ..
ಇಂತಹ ಸಂದರ್ಭದಲ್ಲಿ ಕನಿಷ್ಠ ದೇಶದ ರಾಜಧಾನಿಯಲ್ಲಿರುವ ಆಡಳಿತದ ಮುಖ್ಯಸ್ಥರು ಉಪವಾಸ ಕೈಗೊಂಡಿರುವುದರ ಉದ್ದೇಶ, ಅದಕ್ಕೆ ಸರ್ಕಾರದ ಕಡೆಯಿಂದ ಅವರು ನಿರೀಕ್ಷಿಸುತ್ತಿರುವ ಜವಾಬ್ದಾರಿ ಕುರಿತು ಕೂಡಲೇ ಅವರೊಂದಿಗೆ ಮಾತುಕತೆ ನಡೆಸಬೇಕು. ಅವರ ಮನವೊಲಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅದಕ್ಕೆ ಜವಾಬ್ದಾರಿಯುತ ಮಂತ್ರಿಗಳ ರಾಜೀನಾಮೆ ಸ್ವೀಕರಿಸುವ ಪರಿಸ್ಥಿತಿ ಉದ್ಭವವಾದರೆ ಸೋನಂ ವಾಂಗ್ ಚುಕ್ ಅವರ ಜೀವಕ್ಕಿಂತ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೊಡ್ಡದೇನು ಅಲ್ಲ.
ಇಲ್ಲಿ ನೆನಪಿಸಿಕೊಳ್ಳಬೇಕಾದ ಮತ್ತೊಂದು ವಿಷಯವೆಂದರೆ, ಪೂನಾದ ಯರವಾಡ ಜೈಲಿನಲ್ಲಿ ಮಹಾತ್ಮ ಗಾಂಧಿಯವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆಗಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿ, ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಗ, ಬಾಬಾ ಸಾಹೇಬರು ಅಂತಿಮವಾಗಿ ಎಲ್ಲಾ ಒತ್ತಡಗಳನ್ನು ಮೀರಿ ಮಹಾತ್ಮ ಗಾಂಧಿಯವರ ಜೀವಕ್ಕೆ ಅಪಾಯವಾಗಬಹುದು ಎನ್ನುವ ಮಾನವೀಯ ದೃಷ್ಟಿಯಿಂದ ತಮಗೆ ಆ ಒಪ್ಪಂದದಲ್ಲಿ ಒಂದಷ್ಟು ಹಿನ್ನಡೆಯಾದರೂ ಸಹ ಮಹಾತ್ಮ ಗಾಂಧಿಯವರ ಜೀವ ಉಳಿಸಲು ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಮತ್ತು ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಸಹ. ಗಾಂಧಿಯವರೇ ನಿಮ್ಮ ಜೀವ ಉಳಿಸಲು ನನ್ನ ಜನರ ಹಿತಾಸಕ್ತಿಯನ್ನು ಬಲಿಗೊಟ್ಟು ಅವರಿಗೆ ಅನ್ಯಾಯ ಮಾಡುತ್ತಿದ್ದೇನೆ. ಆದರೂ ನಿಮ್ಮ ಜೀವ ಮುಖ್ಯವಾಗಿರುವುದರಿಂದ ನೀವು ಉಪವಾಸ ಸತ್ಯಾಗ್ರಹ ನಿಲ್ಲಿಸಿ ಎಂದು ಆಗ್ರಹಿಸುತ್ತಾರೆ.
ಆ ಕಾಲಘಟ್ಟದಲ್ಲೇ, ಸ್ವಾತಂತ್ರ್ಯ ಪೂರ್ವದಲ್ಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅಂಥಹವರು ಈ ರೀತಿಯ ನಿರ್ಧಾರ ಕೈಗೊಂಡಿರುವಾಗ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತತ್ತಕ್ಷಣವೇ ಒಂದು ನಿಯೋಗ ಕಳುಹಿಸಿ ಸಾಧ್ಯವಾದಷ್ಟು ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಪ್ರಯತ್ನಿಸಬೇಕು. ತೀರಾ ಹಠ ಮಾಡಿದರೆ ತಾತ್ಕಾಲಿಕವಾಗಿಯಾದರೂ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕು ಅಥವಾ ಅವರ ಖಾತೆಯನ್ನಾದರೂ ಬದಲಾಯಿಸಬೇಕು ಅಥವಾ ಸ್ವತಃ ಪ್ರಧಾನಿಗಳು ಕ್ಷಮೆಯಾಚಿಸಿ ಅವರು ಉಪವಾಸ ನಿಲ್ಲುವಂತೆ ಮಾಡಬೇಕು.
ಈ ರೀತಿ ಯಾವುದಾದರೂ ಒಂದು ವಿಧಾನವನ್ನು ಅನುಸರಿಸಿದರೆ ಒಬ್ಬ ಹೋರಾಟಗಾರನ ಜೀವ, ಮಾನವಿಯ ಮೌಲ್ಯಗಳು, ಪ್ರಧಾನಿ ಅವರ ಘನತೆ ಉಳಿಯುತ್ತದೆ. ಆದ್ದರಿಂದ ದಯವಿಟ್ಟು ತೀರಾ ಹಠ ಮಾಡದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಹೃದಯಪೂರ್ವಕ ಮನವಿ ಮಾಡಿಕೊಳ್ಳುತ್ತಾ…
ಸೋನಂ ವಾಂಗ್ ಚುಕ್ ಅವರೇ, ಜೀವನ ಇರುವುದು ಒಂದೇ. ನಮ್ಮೆಲ್ಲರ ಹೋರಾಟ ಬದುಕಲೇ ಹೊರತು ಸಾಯಲು ಅಲ್ಲ. ಆದ್ದರಿಂದ ಒಂದು ವೇಳೆ ನಿಮ್ಮ ಬೇಡಿಕೆ ಈಡೇರದಿದ್ದರೂ ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಅಮರಣಾಂತ ಉಪವಾಸ ನಿಲ್ಲಿಸಿ. ಆಹಾರ ಸೇವಿಸುತ್ತಾ ಆರೋಗ್ಯವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮುಂದುವರಿಸೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…
ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್‌ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…
ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…
ಎಲ್-ನಿನೋ ಪರಿಣಾಮದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ, ತಾಪಮಾನದ ಏರಿಕೆ ಹಾಗೂ ಒಣ ಹವಾಮಾನ ಹೆಚ್ಚಾಗುವ ಸಾಧ್ಯತೆ ಇರುವ…
ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಫರ್ಹಾನಾ ಅವರ ವಿರುದ್ಧ ರೋಗಿಗಳೊಂದಿಗೆ ಸೂಕ್ತವಾಗಿ ವರ್ತಿಸುತ್ತಿಲ್ಲ…