
ದೊಡ್ಡಬಳ್ಳಾಪುರ: ನಗರದ ಸೈಕಲ್ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗೋಡೌನ್‌ನಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲಾದ ಘಟನೆ ನಗರದ ಹಳೇ ಬಸ್ ನಿಲ್ದಾಣ ಸಮೀಪದ ಚೌಕದ ರಸ್ತೆಯಲ್ಲಿ ನಡೆದಿದೆ.
ತಳ ಮಹಡಿಯಲ್ಲಿ ಸೈಕಲ್ ಗೋಡೌನ್ ಇದ್ದು, ಅದರ ಮೇಲಿನ ಮಹಡಿಯಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಗೋಡೌನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇಲ್ಮಹಡಿಯಲ್ಲಿದ್ದ ಬ್ಯಾಂಕ್ ಸಿಬ್ಬಂದಿ ಆತಂಕಕ್ಕೊಳಗಾದರು. ಬೆಂಕಿ ಮೇಲ್ಮಹಡಿಗೂ ವ್ಯಾಪಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ನಾಲ್ಕು ನೀರಿನ ಟ್ಯಾಂಕ್‌ಗಳ ನೀರು ಖಾಲಿಯಾದರೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗಿದೆ. ಇದರಿಂದ ಗೋಡೌನ್ ಸುತ್ತಮುತ್ತಲಿನ ಅಂಗಡಿಗಳು ಹಾಗೂ ಮನೆಗಳಿಗೂ ಬೆಂಕಿ ಹಬ್ಬುವ ಆತಂಕ ಎದುರಾಗಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಗರ ಠಾಣೆ ಇನ್ಸ್‌ಪೆಕ್ಟರ್ ಮುತ್ತುರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಘಟನೆಯಿಂದ ಗೋಡೌನ್‌ನಲ್ಲಿದ್ದ ಸೈಕಲ್‌ಗಳಿಗೆ ಭಾರೀ ಹಾನಿಯಾಗಿದ್ದು, ಒಟ್ಟಾರೆ ನಷ್ಟದ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.