Categories: ಲೇಖನ

ಸಾಹಿತ್ಯ ಪರಿಷತ್ ಚುನಾವಣೆ…..

ಸಾಹಿತ್ಯ ಪರಿಷತ್ ಚುನಾವಣೆ…..

ನನ್ನ ಮತ……..?

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು.
ಭ್ರಷ್ಟರ ವಿರುದ್ಧ ಪ್ರಾಮಾಣಿಕರು,
ಸ್ವಾಭಿಮಾನದ ವಿರುದ್ಧ ಗುಲಾಮಿತನ,
ಮುಖವಾಡದ ವಿರುದ್ಧ ಸಹಜತೆ, ರಾಯಭಾರಿಗಳ ವಿರುದ್ಧ ದಲ್ಲಾಳಿಗಳು.

ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವವರಾರು?
ಯಾರನ್ನು ಗೆಲ್ಲಿಸಬೇಕು ?
ಎಂಬ ಆಯ್ಕೆಯ ವಿವೇಚನೆಯನ್ನು ಮಾನ್ಯ ಗೌರವಾನ್ವಿತ ಪರಿಷತ್ತಿನ ಸದಸ್ಯರ ವಿವೇಚನೆಗೆ ಬಿಡುತ್ತಾ…..

ಅತ್ಯಂತ ಮಹತ್ವದ, ಕನ್ನಡ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಇರುವ ಪ್ರಮುಖ ಸಾಧನವಾದ, ಕನ್ನಡಿಗರ ನಿಜವಾದ ಧ್ವನಿಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇನ್ನೇನು ಹತ್ತಿರದಲ್ಲೇ ಇದೆ. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯ ಅಧ್ಯಕ್ಷತೆ ಚುನಾವಣೆಯ ಮೂಲಕ ನಿರ್ಧರಿಸಲ್ಪಡುತ್ತದೆ. ವಿಶ್ವದಾದ್ಯಂತ ಸುಮಾರು ನಾಲ್ಕು ಲಕ್ಷ ಐವತ್ತು ಸಾವಿರದಷ್ಟು ಸದಸ್ಯತ್ವವನ್ನು ಈ ಸಂಸ್ಥೆ ಹೊಂದಿದೆ. ಇದರಲ್ಲಿ ಬಹುತೇಕರು ಸೂಕ್ಷ್ಮ ಮನಸ್ಸಿನವರು ಎಂದೇ ಭಾವಿಸಲಾದ ಸಾಹಿತಿಗಳೇ ಆಗಿರುತ್ತಾರೆ.

ಹಾಗಿದ್ದರೆ ಸಾಹಿತಿಗಳು ಸಂವೇದನಾಶೀಲರು, ಸಮಾಜಮುಖಿ ಚಿಂತಕರು, ಬದುಕಿನ ಒಳ ಹೊರಗನ್ನು ಅರಿತವರು, ಸಾಮಾಜಿಕ ಜವಾಬ್ದಾರಿ ಹೊಂದಿರುವವರು, ಕನ್ನಡದ ಅಸ್ಮಿತೆಯನ್ನು ಕಾಪಾಡುವವರು ಎಂದು ಸಾಕ್ಷಿ ಸಮೇತ ಋಜುವಾತಾಗಬೇಕಾದರೆ ಅದಕ್ಕೆ ಆಯ್ಕೆಯಾಗುವ ಅಧ್ಯಕ್ಷರನ್ನು ಅತ್ಯುತ್ತಮ ಗುಣಮಟ್ಟದ ವ್ಯಕ್ತಿತ್ವ ಹೊಂದಿರುವವರನ್ನೇ ಮತ ಚಲಾಯಿಸಿ ಚುನಾಯಿಸಬೇಕಾಗುತ್ತದೆ. ಜಾತಿ, ಧರ್ಮ, ಭಾಷೆ, ದುಡ್ಡು, ಪ್ರಚಾರ, ಪ್ರಶಸ್ತಿ, ಸ್ವಾರ್ಥ ಇವುಗಳನ್ನು ತುಂಬಿಕೊಂಡಿದ್ದರೆ, ಎಂದಿನಂತೆ ನಮ್ಮ ಇಡೀ ದೇಶ ಮತ್ತು ರಾಜ್ಯದ ಚುನಾವಣೆಯ ರೀತಿಯಲ್ಲಿಯೇ ದುಷ್ಟರು, ಭ್ರಷ್ಟರು, ಗುಲಾಮಿ ಮನೋಭಾವದವರು, ಜೀ ಹುಜೂರ್ಗಳು, ಏಜೆಂಟ್ ಗಳು, ಡೀಲರ್ಗಳು ಆಯ್ಕೆಯಾದರೆ ಸಾಹಿತ್ಯ ಕ್ಷೇತ್ರದ, ಕನ್ನಡ ನಾಡಿನ ಮಾನ ಮರ್ಯಾದೆ ಹರಾಜಾದಂತೆ ಆಗುತ್ತದೆ. ಈಗ ನೇರವಾಗಿ ಸಾಹಿತ್ಯ ಪರಿಷತ್ತಿನ ಮಾನ್ಯ ಗೌರವಾನ್ವಿತ ಸದಸ್ಯರ ಆಂತರ್ಯಕ್ಕೆ, ಆತ್ಮಾವಲೋಕನಕ್ಕೆ ಈ ಪ್ರಶ್ನೆಯನ್ನು ಕೇಳುತ್ತಾ….

ಬಹುತೇಕ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಒಂದಿಬ್ಬರು ಅಭ್ಯರ್ಥಿಗಳ ಹೆಸರುಗಳು ಅನಧಿಕೃತವಾಗಿ ನಿರ್ಧಾರವಾಗಿದೆ. ಅವರುಗಳು ಮತ್ತು ಅವರ ಬೆಂಬಲಿಗರು ಈಗಾಗಲೇ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ನಮ್ಮ ಮುಂದೆ ಇರುವ ಆಯ್ಕೆಯಲ್ಲಿ ನೈಜ ವ್ಯಕ್ತಿತ್ವವನ್ನು ಗುರುತಿಸುವ ಹೊಣೆಗಾರಿಕೆ ಮತ್ತು ಅವರನ್ನು ಗೆಲ್ಲಿಸುವ ಜವಾಬ್ದಾರಿ, ಅವಶ್ಯಕತೆ, ಅನಿವಾರ್ಯತೆ ನಮಗಿದೆ.

ಸುಮಾರು 111 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಅಸ್ಮಿತೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದದ್ದು. ಪ್ರಾರಂಭದ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಂತ ಪ್ರಮುಖ ಕಾರ್ಯಕ್ಷೇತ್ರವಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ಸರ್ಕಾರಗಳು ಕಡ್ಡಾಯವಾಗಿ ಪಾಲಿಸುವಂತೆ ಒತ್ತಾಯ ಹೇರಲಾಗುತ್ತಿತ್ತು ಮತ್ತು ಒಂದಷ್ಟು ಯಶಸ್ವಿಯೂ ಆಗಿದೆ. ಆದರೆ ನಂತರದ ದಿನಗಳಲ್ಲಿ ಎಂದಿನಂತೆ ಇಡೀ ವ್ಯವಸ್ಥೆ ನಿಧಾನವಾಗಿ ಮೌಲ್ಯಗಳನ್ನು ಕಳೆದುಕೊಂಡು ವ್ಯಾಪಾರಿಕರಣವಾಗಿ, ಹಣ ಕೇಂದ್ರೀಕೃತ ಸಮಾಜ ನಿರ್ಮಾಣವಾಗಿರುವಾಗ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮತ್ತು ಅಧ್ಯಕ್ಷ ಸ್ಥಾನಗಳು ವ್ಯಾಪಾರೀಕರಣಗೊಂಡವು, ಭ್ರಷ್ಟಗೊಂಡವು, ರಾಜಕೀಯಕರಣಗೊಂಡವು. ಸಾಹಿತಿಗಳಲ್ಲದ, ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯದ ಮತ್ತು ಆಡಳಿತಾತ್ಮಕ ಏಜೆಂಟರುಗಳು ಇದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಪರಿಪಾಠ ಬೆಳೆದು ಬಂದಿತು. ಅದರ ಜೊತೆಗೆ ಸಾಹಿತಿಗಳೆಂಬ ಸಂವೇದನಾಶೀಲರು ಸಹ ಈ ಚುನಾವಣೆಯ ಮತ ಹಾಕುವ ಸಂದರ್ಭದಲ್ಲಿ ಮಾನಸಿಕ ಮತ್ತು ದೈಹಿಕ ಭ್ರಷ್ಟತೆಗೆ ಒಳಗಾದರು.

ಇದೆಲ್ಲಾ ಅಕ್ರಮ, ಅನೈತಿಕ, ಅಸಹಜ, ಕ್ರಮಬದ್ಧವಲ್ಲದ, ಕೆಳಮಟ್ಟದ ಚುನಾವಣಾ ಪದ್ಧತಿ ಇತಿಹಾಸವಾಗುವ, ವರ್ತಮಾನದಲ್ಲಿ ಅತ್ಯುತ್ತಮ ಪರಿವರ್ತನೆಗೆ ಕಾರಣವಾಗುವ ಸದಾವಕಾಶವೊಂದು ಈಗ ನಮ್ಮ ಮುಂದಿದೆ ಮತ್ತು ಅದಕ್ಕೆ ಅತ್ಯುತ್ತಮ ಅವಕಾಶ ಒದಗಿಸಿದೆ.

ಈಗ ನಮ್ಮೆಲ್ಲರ ಆತ್ಮಾವಲೋಕನಕ್ಕೆ ಒಂದು ಸದಾವಕಾಶ. ನಮ್ಮ ತಿಳುವಳಿಕೆಗಳು ನಡವಳಿಕೆಗಳಾಗುವ ಸನ್ನಿವೇಶ ಸೃಷ್ಟಿಯಾಗಿದೆ. ನಮ್ಮ ಮನಸ್ಸಿಗೂ, ಅದರ ಶುದ್ಧತೆಗೂ ಒಂದು ಸವಾಲು ಎದುರಾಗಿದೆ. ನಮ್ಮ ಮತದ ಪ್ರಾಮುಖ್ಯತೆ ದೃಢಪಡಬೇಕಿದೆ.

ಹಾಗಾದರೆ ಪರಿಷತ್ತಿನ ಅಧ್ಯಕ್ಷೀಯ ಅಭ್ಯರ್ಥಿಯ ವ್ಯಕ್ತಿತ್ವ ಸಾಮಾನ್ಯವಾಗಿ ಹೇಗಿರಬೇಕು. ನಾವು ಅವರಲ್ಲಿ ಯಾವ ಗುಣಗಳನ್ನು ನೋಡಿ ಮತ ಹಾಕಬೇಕು ಎಂಬುದನ್ನು ಆತ್ಮಸಾಕ್ಷಿಯ ಒಡಲೊಳಗೆ ಅಗ್ನಿಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು.

ಮೊದಲನೆಯದಾಗಿ,
ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸುವ ಅಧ್ಯಕ್ಷೀಯ ಅಭ್ಯರ್ಥಿ ಅಥವಾ ಜಿಲ್ಲಾ ಅಧ್ಯಕ್ಷರುಗಳು ಖಚಿತವಾಗಿ ಕನ್ನಡದ ನೆಲ, ಜಲ, ಭಾಷೆಗಾಗಿ ನಿರಂತರವಾಗಿ, ದೀರ್ಘಕಾಲದಿಂದ ಹೋರಾಟ ಮಾಡಿಕೊಂಡು ಬಂದಿರಬೇಕು. ಕನ್ನಡದ ವಿಷಯದಲ್ಲಿ ಸದಾಕಾಲ ಎಲ್ಲಾ ಸಂಕುಚಿತ ಮನೋಭಾವವನ್ನು ಮೀರಿ ಧೈರ್ಯವಾಗಿ, ಮುಕ್ತವಾಗಿ ತಮ್ಮ ಅಭಿಪ್ರಾಯ ನೀಡುವವರಾಗಿರಬೇಕು.

ಎರಡನೆಯದು ,
ಸಹಜವಾಗಿ ಸಾಹಿತಿ, ಲೇಖಕ, ಬರಹಗಾರ, ಪತ್ರಕರ್ತ, ಉಪನ್ಯಾಸಕ, ಪ್ರಾಧ್ಯಾಪಕ, ಹೋರಾಟಗಾರ, ಸಂಘಟಕ, ಸಮಾಜಸೇವಕ ಮುಂತಾದ ಅಕ್ಷರ ಕಲೆಯ, ಲಲಿತ ಕಲೆಗಳ, ಚಳವಳಿಗಳ ಸಾಧಕರಾಗಿರುವುದು ಮುಖ್ಯವಾಗಬೇಕು ಅಥವಾ ಕನಿಷ್ಠ ಇದಕ್ಕೆ ಹತ್ತಿರದ ಕ್ಷೇತ್ರಗಳಲ್ಲಿ ನಿರಂತರ ಮತ್ತು ದೀರ್ಘಕಾಲದ ಸಾಧನೆ ಮಾಡಿದವರನ್ನು ಸಹ ಪರಿಗಣಿಸಬಹುದು.

ಮೂರನೆಯದಾಗಿ,
ವ್ಯಾವಹಾರಿಕ ಜಗತ್ತಿನಿಂದ, ಭ್ರಷ್ಟಗೊಂಡ ಅಧಿಕಾರಶಾಹಿ ಹಿನ್ನೆಲೆಯಿಂದ, ರಾಜಕೀಯ ಕುಟುಂಬದಿಂದ, ಉದ್ಯಮಿಗಳ ವಲಯದಿಂದ, ಹೆಚ್ಚಿನ ನಂಟು ಹೊಂದಿ, ಸಂಬಂಧ ಹೊಂದಿ ಆರ್ಥಿಕವಾಗಿ ಬಲಾಢ್ಯರಾಗಿರುವವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವುದು ಅಷ್ಟೊಂದು ಉತ್ತಮ ನಡೆಯಲ್ಲ. ಇವು ಮನುಷ್ಯ ಭ್ರಷ್ಟಗೊಳ್ಳಲು ಮೂಲ ಕಾರಣವಾಗುತ್ತದೆ.

ನಾಲ್ಕನೆಯದಾಗಿ,
ಅಭ್ಯರ್ಥಿಯು ಸರಳವೂ, ಸಹಜವೂ, ವಿನಯಶೀಲರೂ, ಸ್ವಾಭಿಮಾನಿಯೂ, ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿಯವರು ಆಗಿದ್ದರೆ ಉತ್ತಮ. ಅವರು ಹಣಕಾಸಿನಲ್ಲಿ, ಅಧಿಕಾರದಲ್ಲಿ,
ಪ್ರಶಸ್ತಿಗಳಲ್ಲಿ ಬಲಾಢ್ಯರೇ ಆಗಿರಬೇಕೆಂದೇನು ಇಲ್ಲ. ಇದು ಕನ್ನಡದ ಸೇವೆಯೇ ಹೊರತು ವ್ಯಾವಹಾರಿಕ ಉದ್ಯಮವಲ್ಲ.

ಐದನೆಯದಾಗಿ,
ಇತ್ತೀಚಿನ ಭಾರತೀಯ ಸಮಾಜದಲ್ಲಿ ಸೈದ್ಧಾಂತಿಕ ಸಂಘರ್ಷ ಬಹಳವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೋ ಒಂದು ಸೈದ್ಧಾಂತಿಕತೆಯ ಅತಿರೇಕಕ್ಕೆ ಹೋದವರು ಅಥವಾ ಜಾತಿ ಸಂಘಟನೆ, ಧಾರ್ಮಿಕ ಅಂದಾಭಿಮಾನದ ಚಟುವಟಿಕೆಗಳಲ್ಲಿ ಅಥವಾ ಭ್ರಷ್ಟ ರಾಜಕಾರಣಿಗಳ ಒಡನಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು ಎಂದು ನಮಗನಿಸಿದರೆ ಅವರಿಗೆ ಮತ ಹಾಕದಿರುವುದೇ ಕ್ಷೇಮಕರ.

ಕನ್ನಡದ ನೈಜ ಹಿತಾಸಕ್ತಿಯ ದೃಷ್ಟಿಯಿಂದ, ವ್ಯಕ್ತಿತ್ವದ ಘನತೆ, ಸ್ವಾಭಿಮಾನ, ಸ್ವಚ್ಛ ನಡವಳಿಕೆಯ ಕಾರಣದಿಂದ ಒಳ್ಳೆಯವರು ಆಯ್ಕೆಯಾಗಲಿ ಎಂದು ಇದು ವೈಯಕ್ತಿಕ ಅಭಿಪ್ರಾಯವಷ್ಟೇ. ಇದಕ್ಕಿಂತ ಉತ್ತಮ ಗುಣಲಕ್ಷಣಗಳನ್ನು ತಿಳಿದವರು ಗುರುತಿಸಬಹುದು. ನಮ್ಮ ಮುಖ್ಯ ಆದ್ಯತೆ ಉತ್ತಮ ವ್ಯಕ್ತಿ ಉತ್ತಮ ಸ್ಥಾನದಲ್ಲಿ ಇರಬೇಕು. ಆ ಆಶಯಕ್ಕೆ ಪೂರಕವಾಗಿ ನಿಜವಾದ ಕನ್ನಡ ಮನಸ್ಸುಗಳು ಎಲ್ಲಾ ಉಡಾಫೆ, ಸೋಮಾರಿತನ, ಸಿನಿಕತೆ, ಸ್ವಾರ್ಥ, ಗುಂಪುಗಾರಿಕೆ, ಸಣ್ಣತನ ಎಲ್ಲವನ್ನು ಬಿಟ್ಟು ನಮ್ಮ ತಿಳುವಳಿಕೆಯನ್ನು ನಡವಳಿಕೆಯಾಗಿ ಮಾಡಿಕೊಂಡು ಕನಿಷ್ಠ ಒಂದು ಮತವನ್ನು ಉತ್ತಮ ವ್ಯಕ್ತಿಗೆ ನೀಡಿದಲ್ಲಿ ಕನ್ನಡಕ್ಕಾಗಿ ನಾವು ಮಾಡಬಹುದಾದ ಒಂದು ಸಣ್ಣ ಅಳಿಲು ಸೇವೆಯಾಗುತ್ತದೆ.

ಅದನ್ನು ಹೊರತುಪಡಿಸಿ ಭ್ರಷ್ಟರಿಗೆ, ದುಷ್ಟರಿಗೆ, ಲಾಭಕೋರರಿಗೆ, ದಲ್ಲಾಳಿಗಳಿಗೆ ಮತ ಹಾಕಿದಲ್ಲಿ ಕನ್ನಡದ ಹಿತಾಸಕ್ತಿಗೆ ದ್ರೋಹ ಬಗೆದಂತಾಗುತ್ತದೆ. ನಮ್ಮ ಎಲ್ಲಾ ಹೋರಾಟಗಳು ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ.

ಇದೀಗ ಹೋರಾಟಗಾರರೇ ಆಡಳಿತಗಾರರಾಗುವ ಒಂದು ಸುವರ್ಣ ಅವಕಾಶವಿದೆ. ಇದನ್ನು ಉಪಯೋಗಿಸಿಕೊಳ್ಳಬೇಕೆ ಹೊರತು ಮತ್ತೆ ಅನರ್ಹರನ್ನು ಚುನಾವಣೆಯಲ್ಲಿ ಆಯ್ಕೆಯಾಗುವಂತೆ ಮಾಡಿ ಮತ್ತೆ ಮತ್ತೆ ನಿರಂತರ ಹೋರಾಟ ಮಾಡಿಬೇಕಾದ ದುರ್ದೈವದ ಪರಿಸ್ಥಿತಿ ಮರುಕಳಿಸದಿರಲಿ.

ಇದು ಖಂಡಿತವಾಗಲೂ ಯಾರ ವಿರುದ್ಧದ ಅಭಿಪ್ರಾಯವೂ ಅಲ್ಲ ಅಥವಾ ಯಾರ ಪರವಾದ ಅಭಿಪ್ರಾಯವೂ ಅಲ್ಲ. ಸಾಹಿತ್ಯ ಪರಿಷತ್ತಿನ ಚುನಾವಣೆಯ ಅಭ್ಯರ್ಥಿಗಳ ವ್ಯಕ್ತಿತ್ವದ ಪ್ರಶ್ನೆ ಮಾತ್ರ. ಇದಕ್ಕೂ ಮೀರಿ ಇನ್ನಷ್ಟು ಅತ್ಯುತ್ತಮ ಸಲಹೆಗಳು ಬಂದರೆ ಅದಕ್ಕೂ ಸ್ವಾಗತ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಇಲ್ಲದೆ, ಸ್ಪರ್ಧಿಸುವ ಸಾಧ್ಯತೆ ಇರುವ ಅಭ್ಯರ್ಥಿಗಳ ಮನವೊಲಿಸಿ ಸರ್ವಾನುಮತದಿಂದ ಯಾರಾದರೊಬ್ಬರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರೆ ಅದು ಪ್ರಜಾಪ್ರಭುತ್ವದ ಕಿರೀಟಕ್ಕೊಂದು ಹೊಳೆಯುವ ಮುತ್ತಿನಂತಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಭಾಗ ನಿಜ. ಆದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳು ಮಲಿನಗೊಂಡಿರುವುದರಿಂದ ಕನಿಷ್ಠ ಸಾಹಿತ್ಯ ಕ್ಷೇತ್ರದಲ್ಲಾದರೂ ಚುನಾವಣೆ ಇಲ್ಲದ ಸರ್ವಾನುಮತದ ಆಯ್ಕೆಯು ಪ್ರಜಾಪ್ರಭುತ್ವದ ಗೆಲುವೇ ಆಗಿರುತ್ತದೆ.

ಯಾವಾಗಲೂ ಪ್ರಜಾಪ್ರಭುತ್ವದ ಗೆಲುವು ಜನಾಭಿಪ್ರಾಯ ಆಧರಿಸುತ್ತದೆ. ಆ ಜನಾಭಿಪ್ರಾಯ ಸರ್ವಾನುಮತವಾದರೆ ಇನ್ನೂ ಉತ್ತಮವಲ್ಲವೇ. ಏಕೆಂದರೆ, ಮನಸುಗಳು ಚುನಾವಣಾ ಸಂದರ್ಭದಲ್ಲಿ ಒಡೆಯುವುದು ತಪ್ಪುತ್ತದೆ. ಸಾಹಿತ್ಯ ಕ್ಷೇತ್ರ ಇನ್ನೂ ಕೆಲ ಕಾಲ ಜೀವಂತವಾಗಿರುತ್ತದೆ. ಕ್ಷುಲ್ಲಕ ರಾಜಕೀಯಕ್ಕೆ ಬಲಿ ಆಗುವುದಿಲ್ಲ.

ಈಗ ಯೋಚಿಸುವ ಸರದಿ ಸಾಹಿತ್ಯ ಪರಿಷತ್ತಿನ ಎಲ್ಲಾ ಗೌರವಾನ್ವಿತ ಸದಸ್ಯರದು.
ಧನ್ಯವಾದಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

4 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

7 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

18 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

1 day ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

1 day ago

ಪೆನ್ ಡ್ರೈವ್…….

ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…

1 day ago