ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು, ಕನ್ನಡದ ನಟ ಅನಂತನಾಗ್ ಅವರಿಗೆ ಬಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದರ್ಭದಲ್ಲಿ ಹಂಚಿಕೊಂಡ ಅಭಿಪ್ರಾಯಗಳು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು, ಅವುಗಳ ಬಗ್ಗೆ ಮೂಡಿ ಬಂದ ಭಾವನೆಗಳು ಹೀಗೆ ಕೆಲವು ಪ್ರಮುಖ ವಿಷಯಗಳ ಸಂದರ್ಭದಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀರಾ ತೀರಾ ಅತಿರೇಕದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ವಿಷಯವನ್ನು ಸಮಗ್ರವಾಗಿ, ಸಂಯಮದಿಂದ ಚಿಂತಿಸಿ, ವಿಮರ್ಶಿಸಿ ಸತ್ಯ ಮತ್ತು ವಾಸ್ತವದ ಹತ್ತಿರಕ್ಕೆ ತಲುಪಿ, ಯಾರಿಗೂ ಸೇರದ ಸ್ಥಳದಲ್ಲಿ ನಿಂತು ನಿಷ್ಪಕ್ಷಪಾತವಾಗಿ ಯೋಚಿಸುವ ಮನಸ್ಥಿತಿಯನ್ನು ಕಳೆದುಕೊಂಡಿದ್ದೇವೆ
ಏಕೆಂದರೆ ಹೊರಗಿನ ಅಭಿಪ್ರಾಯಗಳು ನಮ್ಮನ್ನು ಯಾವುದೋ ಒಂದು ಗುಂಪಿಗೆ ಸೇರಿಸಬಹುದು ಎನ್ನುವ, ನಮ್ಮ ಸ್ನೇಹಿತರು ಮತ್ತು ಹಿತೈಷಿಗಳು ನಮ್ಮನ್ನು ವಿರೋಧಿಸಬಹುದು ಎನ್ನುವ ಒತ್ತಡಕ್ಕೆ ಒಳಗಾಗಿ, ಅದು ಅಭಿಪ್ರಾಯಗಳ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮೊಳಗಿನ ಆಂತರ್ಯದ ನಿಜವಾದ ಚಿಂತನಾ ಶಕ್ತಿಯ ಅಭಿಪ್ರಾಯಗಳು ಪ್ರಕಟಗೊಳ್ಳುತ್ತಲೇ ಇಲ್ಲ.
ಒಂದೆರಡು ಪದಗಳು ಆಚೆ ಈಚೆ ಆದರೂ ನಮ್ಮನ್ನು ಒಂದು ಗುಂಪಿಗೆ ಸೇರಿಸಬಿಡಬಹುದೇನೋ ಎನ್ನುವ ಆತಂಕದಲ್ಲೇ ಅಭಿಪ್ರಾಯ ವ್ಯಕ್ತಪಡಿಸಬೇಕಾಗಿದೆ. ಹಾಗೆಂದು ನಾವು ಬ್ಯಾಲೆನ್ಸ್ ಮಾಡುವ ಅವಶ್ಯಕತೆ ಇಲ್ಲ. ತಟಸ್ಥ ನೀತಿ ಅಥವಾ ಸಮಷ್ಟಿ ಪ್ರಜ್ಞೆ ಎಂದರೆ ಸತ್ಯದ ಹುಡುಕಾಟವೇ ಹೊರತು ಯಾರಿಗೂ ನೋವಾಗದ ಸಮಚಿತ್ತದ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದೇನು ಅಲ್ಲ.
ಮೋದಿಯವರ ಸಾಮರ್ಥ್ಯ ಮತ್ತು ದೌರ್ಬಲ್ಯ, ಅನಂತನಾಗರ ಸಹಜತೆ ಮತ್ತು ಕೃತಕಥೆ, ಡಿಕೆ ಶಿವಕುಮಾರ್ ಅವರ ನಡೆಗಳ ಹಿಂದಿನ ಸ್ವಾರ್ಥ ಮತ್ತು ಸೇವೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ವಿಶಾಲ ಮನಸ್ಥಿತಿ ನಮ್ಮದಾಗಬೇಕು. ಒಂದು ವಿಷಯವನ್ನು ವಿಮರ್ಶಿಸುವ ಮಾನದಂಡಗಳ ಗುರುತಿಸುವಿಕೆ ಬಹಳ ಮುಖ್ಯವಾಗಬೇಕು. ಆ ಮಾನದಂಡಗಳೇ ನಮ್ಮ ಒಳಗಿನ ಮಾನವೀಯತೆಯ ಸಂಕೇತಗಳಾಗಬೇಕು.
ಮೋದಿ, ಅನಂತನಾಗ್, ಡಿಕೆಶಿ ನಮ್ಮಂತೆ ಮಾನವ ಸಹಜ ಜೀವಿಗಳು.ಒಂದು ಕಾಲಘಟ್ಟದಲ್ಲಿ ಎಲ್ಲರೂ ಅವಸಾನವಾಗಲೇಬೇಕು. ಆದರೆ ಈ ದೇಶ, ಈ ಸಮಾಜ, ಇಲ್ಲಿನ ಮೌಲ್ಯಗಳು ಮಾತ್ರ ಸತ್ವಯುತವಾಗಿ ಬೆಳೆಯಬೇಕು. ನಮ್ಮ ಮುಂದಿನ ಪೀಳಿಗೆಯ ಜನರ ವ್ಯಕ್ತಿತ್ವಗಳು ಸಮಗ್ರವಾಗಿ ಬೆಳವಣಿಗೆ ಹೊಂದಬೇಕು.
ಎಡಬಲಗಳ ಅತಿರೇಕಿಗಳ ನಡುವೆ………..
ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ……..
ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ ಜನರಿಗೆ ಆಳದಲ್ಲಿ ಪ್ರೀತಿಸುವ ಮನಸ್ಥಿತಿ ಕಡಿಮೆಯಾಗಿದೆ.
ಸಂಘ ಪರಿವಾರದವರು, ಹಿಂದುತ್ವ ವಾದಿಗಳು, ಮನು ವಾದಿಗಳು, ಸಂಪ್ರದಾಯವಾದಿಗಳು, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಮೂಲಭೂತ ಅಂಶಗಳ ಪ್ರತಿಪಾದಕರು ಎಂದು ಕರೆಯಲ್ಪಡುವವರಿವಿಗೆ ಮಾನವೀಯ ಸ್ಪಂದನೆ ತುಂಬಾ ಕಡಿಮೆಯಾಗಿದೆ.
ಸಾಮಾನ್ಯ ಜನರೆಂದು ಕರೆಯಲ್ಪಡುವವರಿಗೆ ನಿರ್ಲಕ್ಷ್ಯ, ಅಜ್ಞಾನ, ದುರಾಸೆ, ಸ್ವಾರ್ಥದ ಕಾರಣದಿಂದ ಬೇಜವಾಬ್ದಾರಿ ಮನೋಭಾವ ಬೆಳವಣಿಗೆ ಹೊಂದಿ ಪ್ರೀತಿ ಮತ್ತು ಮಾನವೀಯ ಸ್ಪಂದನೆ ಮಾಯವಾಗಿದೆ.
ಯುವಕ – ಯುವತಿಯರು ಎಂದು ಕರೆಯಲ್ಪಡುವ ಒಂದು ಸಮುದಾಯ ಸಮೂಹ ಸಂಪರ್ಕ ಕ್ರಾಂತಿಯ ಹೊರತಾಗಿಯೂ ಆರ್ಥಿಕ ಗುಲಾಮಿತನದ ಮನಸ್ಥಿತಿಗೆ ಶರಣಾಗಿದೆ….
ಸಾಮಾಜಿಕ ಕ್ರಾಂತಿಯ ಕನಸು ಕಾಣುವ, ಬದಲಾವಣೆಗಾಗಿ ಹೋರಾಟ ರೂಪಿಸುವ ವರ್ಗಗಳು ಅತಿಯಾದ ವಿಮರ್ಶೆ, ನಾಯಕತ್ವ ಮತ್ತು ಅಧಿಕಾರದ ಹಂಬಲ, ಅಸೂಯೆ ಮತ್ತು ತನ್ನತನದ ಸಣ್ಣತನಕ್ಕೆ ಸಿಲುಕಿ ಸಮಗ್ರ ಚಿಂತನೆಯ ಕೊರತೆಯಿಂದ ನರಳುತ್ತಾ ವಾಸ್ತವ ಗ್ರಹಿಸದೆ ಕೂಪಮಂಡೂಕಗಳ ಮನಸ್ಥಿತಿಲ್ಲಿದ್ದಾರೆ…..
ಸೈದ್ದಾಂತಿಕ ಅತಿರೇಕದ ಈ ದುಷ್ಪರಿಣಾಮಗಳ ಕಾರಣದಿಂದಾಗಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ದುಷ್ಟ ಶಕ್ತಿಗಳು ಮುಖ್ಯವಾಹಿನಿಯನ್ನು ನಿಯಂತ್ರಿಸುತ್ತಿವೆ…
ಹಿರಿಯರಿಗೆ ಕಿರಿಯರನ್ನು ಪ್ರೀತಿಸುವ, ಪ್ರೋತ್ಸಾಹಿಸುವ ಅವರು ತಪ್ಪುಗಳನ್ನು ಸ್ವೀಕರಿಸುವ, ಅವರೊಂದಿಗೆ ಪ್ರೀತಿಯಿಂದ ಒಡನಾಡುವ ಸಮಯ, ಆಸಕ್ತಿ ಮತ್ತು ಮನೋಭಾವ ಇಲ್ಲವಾಗುತ್ತಿದೆ.
ಹಾಗೆಯೇ ಕಿರಿಯರಿಗೆ ತಾಳ್ಮೆ ಮತ್ತು ವಿನಯದ ಕೊರತೆಯಿಂದ ಹಿರಿಯರೊಂದಿಗೆ ತಮ್ಮ ಅರಿವಿನ ಮಿತಿಯ ಸಂವಹನ ಸಾಧ್ಯವಾಗುತ್ತಿಲ್ಲ.
ಅರಿವೇ ಗುರು ಎಂಬುದು ಕಾಲಕ್ರಮೇಣ ಅರಿವೇ ಅಹಂ ಆಗಿ ಪರಿವರ್ತನೆ ಹೊಂದಿ ಆರ್ಥಿಕ ಸುರಕ್ಷಿತ ವಲಯದಲ್ಲಿ ಸೇರಿಕೊಳ್ಳುವ ಆತುರದಲ್ಲಿ ಅನೇಕರು ತಮ್ಮ ಶ್ರಮವನ್ನು ವ್ಯಯಿಸುತ್ತಿದ್ದಾರೆ.
ಈ ಅತಿರೇಕಿಗಳು ಮನುಷ್ಯ ಪ್ರೀತಿಗಿಂತ, ಮಾನವೀಯ ಸ್ಪಂದನೆಗಿಂತ ತಮ್ಮ ಸಿದ್ದಾಂತಗಳ ಪ್ರಚಾರ ಪ್ರದರ್ಶನಕ್ಕೇ ಮಹತ್ವ ನೀಡುತ್ತಾರೆ.
ನಾವು ಸದಾ ಜಾಗೃತವಾಗಿರಾಗಿರಬೇಕಿರುವುದು ಮತ್ತು ಹೋರಾಟ ಮಾಡಬೇಕಿರುವುದು ಶೋಷಿತರ ಪರವಾಗಿಯೇ ಹೊರತು ಯಾವುದೇ ಸಿದ್ದಾಂತ, ಧರ್ಮ, ಜಾತಿ, ಭಾಷೆ, ಲಿಂಗದ ಪರವಾಗಿಯಲ್ಲ.
ಭಾರತ ಒಂದು ಸಂಕೀರ್ಣ ಸಮಾಜವನ್ನು ಹೊಂದಿದೆ. ಶೋಷಣೆ ಎಂಬುದು ಮುಖ್ಯವಾಗಬೇಕೆ ಹೊರತು ವೈಯಕ್ತಿಕ ನಂಬಿಕೆ ಅಥವಾ ಸೈದ್ದಾಂತಿಕ ನಿಲುವುಗಳಲ್ಲ. ಸೈದ್ಧಾಂತಿಕತೆ ಎಂಬುದೇ ಶೋಷಿತರ ಪರವಾದ ನಿಲುವುಗಳು ಎಂದು ಭಾವಿಸಬಹುದು. ಏಕೆಂದರೆ ಬಲಿಷ್ಠರಿಗೆ ಯಾವುದೇ ಹೆಚ್ಚಿನ ಸಹಾಯ ಬೇಕಾಗಿರುವುದಿಲ್ಲ. ದುರ್ಬಲರು ಯಾವಾಗಲೂ ಸಹಾಯದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ವ್ಯವಸ್ಥೆ ಸಹ ಅವರನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುತ್ತದೆ.
ನಾವು ಯಾವುದೋ ಒಂದು ಸಿದ್ದಾಂತದ ಬೆಂಬಲಿಗರು ಅಥವಾ ಅದರ ಪರವಾದ ವಿಚಾರಗಳನ್ನು ಇಷ್ಟ ಪಡುವವರಾಗಿದ್ದರೆ ಇನ್ನೊಂದು ಭಿನ್ನ ನಿಲುವಿನ ಸಿದ್ದಾಂತವನ್ನು ಅನವಶ್ಯಕವಾಗಿ ವಿರೋಧಿಸುತ್ತಾ, ತನ್ನ ವಿಚಾರ ಸರಣಿಗಳ ಅನುಯಾಯಿಗಳು ಮಾಡುವ ತಪ್ಪುಗಳನ್ನು ಗುರುತಿಸಲಾರದಷ್ಟು ಮೋಹಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು.
ಬೇಕಾದರೆ ಗಮನಿಸಿ ನೋಡಿ, ಒಂದು ಧರ್ಮದ ಅಥವಾ ಪಕ್ಷದ ಜನರು ತಮ್ಮ ಪಕ್ಷದ ಅಥವಾ ಧರ್ಮದ ನೇರ ತಪ್ಪುಗಳನ್ನು ಸಹ ಗುರುತಿಸಲಾರದಷ್ಟು ಮೂರ್ಖರಾಗಿರುತ್ತಾರೆ ಮತ್ತು ಅದನ್ನು ಅಸಹ್ಯವಾಗಿ ಸಮರ್ಥಿಸುತ್ತಾರೆ.
ತೀವ್ರ ಬಲಪಂಥ ಮತ್ತು ಎಡಪಂಥದ ಜನರಲ್ಲಿ ಇದನ್ನು ಗುರುತಿಸಬಹುದು. ಆದ್ದರಿಂದಲೇ ನಮ್ಮ ಸೈದ್ದಾಂತಿಕ ನಿಲುವುಗಳು ನ್ಯಾಯದ ಪರ, ಸತ್ಯದ ಪರ, ಜನರ ಪರ, ದೇಶದ ಪರ ಇರಬೇಕು. ಇಲ್ಲದಿದ್ದರೆ ಸೈದ್ದಾಂತಿಕತೆ ನಮ್ಮನ್ನೇ ಆಪೋಷಣೆ ತೆಗೆದುಕೊಳ್ಳುತ್ತದೆ.
ಮಹಿಳಾ ಪರ ನಿಲುವುಗಳನ್ನು ತೆಗೆದುಕೊಳ್ಳವಾಗ ಅವರು ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆಯೂ ಮಾತನಾಡಬೇಕು, ಧರ್ಮದ ಪರ ಮಾತನಾಡುವಾಗ ಅದರಿಂದಾಗುವ ಅನಾಹುತಗಳ ಬಗ್ಗೆಯೂ ಜಾಗೃತೆ ವಹಿಸಬೇಕು.
ಯಾವುದೇ ಸೈದ್ದಾಂತಿಕ ನಿಲುವುಗಳ ಮೂಲ ಆಶಯಗಳು ಪ್ರಾಯೋಗಿಕವಾಗಿ ಮತ್ತು ವಾಸ್ತವದ ನೆಲೆಯಲ್ಲಿ ಜಾರಿಯಾಗುವಾಗ ಅದು ಅಪಾಯಕಾರಿಯಾಗಬಹುದು. ಆಗ ಅದನ್ನು ಗುರುತಿಸಿ ಖಂಡಿಸುವ ನೇರ ಮತ್ತು ದಿಟ್ಟ ಸ್ವಭಾವ ನಮ್ಮದಾಗಿರಬೇಕು. ಗುಲಾಮಿತನ, ಭಕ್ತಗಣದ ರೀತಿ ಎಲ್ಲವೂ ಸರಿ ಎಂದು ಮೂಢರಾಗಬಾರದು.
ನಮ್ಮ ಧ್ವನಿ ಸಿದ್ದಾಂತಗಳ ಆಚೆ ಶೋಷಿತರ ಪರವಾಗಿರಲಿ, ನೋಂದವರ ಪರವಾಗಿರಲಿ, ಅವರು ಯಾವುದೇ ಜಾತಿ ಧರ್ಮ ಪಕ್ಷಗಳವರಾಗಿರಲಿ ಎಂದು ಆಶಿಸುತ್ತಾ,…..
ಜೊತೆಗೆ ಇದೇ ನಿಲುವುಗಳು ಅವಕಾಶವಾದಿತನವಾಗಿ, ಎಡಬಿಡಂಗಿಯಾಗಿ ರೂಪಾಂತರವಾಗದಂತೆ ಎಚ್ಚರಿಕೆಯೂ ಇರಲಿ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಿಕೊಳ್ಳುವ ಡೋಂಗಿ ಸೈದ್ಧಾಂತಿಕವಾದಿಯೂ ಆಗದಿರಲಿ ಎಂದು ನೆನಪಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಟೋಲ್ ಸಮೀಪದ ಚಿಕ್ಕಲಯ್ಯನಪಾಳ್ಯ ಬಳಿ ನಿಂತಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ…
ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದ ಆಂತರಿಕ ವ್ಯವಸ್ಥೆ ಕುಸಿಯುವುದು. ನಿಶ್ಚಿತ…
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…
ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…
ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…