ಶ್ರಾವಣದ ಹಬ್ಬಗಳಿಗೆ ಮುನ್ನವೇ ಹೂವಿನ ದರದ ಬಿಸಿ! ಇಳುವರಿ ಶೇ.30–40ರಷ್ಟು ಕುಸಿತ: ಹವಾಮಾನ ವೈಪರೀತ್ಯದ ಪರಿಣಾಮ: ಸಾಲುಸಾಲು ಹಬ್ಬಗಳಿಂದ ಬೇಡಿಕೆ ಹೆಚ್ಚಳ

 

ಬೆಂಗಳೂರು: ಹಬ್ಬಗಳ ಸೀಸನ್‌ ಆರಂಭಕ್ಕೂ ಮುನ್ನವೇ ಹೂವಿನ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಾರಂಭಿಸಿದೆ. ರಾಜ್ಯದಲ್ಲಿ ಅನಿರೀಕ್ಷಿತ ಬರ, ಬಿಸಿಲು ಹಾಗೂ ಮಳೆಯ ಏರುಪೇರಿನಿಂದ ಪುಷ್ಪ ಬೆಳೆಗಳ ಇಳುವರಿ ಕುಸಿದಿದ್ದು, ಹೂಗಳ ಗುಣಮಟ್ಟಕ್ಕೂ ಹೊಡೆತ ಬಿದ್ದಿದೆ. ಇದರ ಪರಿಣಾಮ ಆಷಾಢದಲ್ಲೇ ಹಲವು ಬಗೆಯ ಹೂವುಗಳು ದುಬಾರಿಯಾಗಿದ್ದು, ಮುಂದಿನ ಶ್ರಾವಣ ಮಾಸದಲ್ಲಿ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ 25 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ವಿವಿಧ ಬಗೆಯ ಪುಷ್ಪಗಳನ್ನು ಬೆಳೆಯಲಾಗುತ್ತಿದೆ. ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ, ಕಾಕಡ ಸೇರಿದಂತೆ ಹಲವು ಹೂವುಗಳಿಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಬೇಡಿಕೆ ಇದೆ. ಆದರೆ ಈ ಬಾರಿ ಹವಾಮಾನದ ಏರುಪೇರಿನಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ಹಬ್ಬ, ನಾಗರಪಂಚಮಿ, ಗಣೇಶ ಚತುರ್ಥಿ ಸೇರಿದಂತೆ ಸಾಲುಸಾಲು ಹಬ್ಬಗಳು ಎದುರಾಗಲಿವೆ. ಹಬ್ಬ, ಪೂಜೆ, ದೇವಸ್ಥಾನ, ಮದುವೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಹೂಗಳ ಬಳಕೆ ಹೆಚ್ಚಾಗುವುದರಿಂದ ಬೇಡಿಕೆ ಗಣನೀಯವಾಗಿ ಏರಲಿದೆ. ಈಗಾಗಲೇ ಪೂರೈಕೆಯಲ್ಲಿ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಹೂವು ಮಾರುಕಟ್ಟೆಗೆ ಬಾರದಿದ್ದರೆ ದರ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದೆ.

ಇಳುವರಿಯಲ್ಲಿ ಶೇ.30–40ರಷ್ಟು ಕುಸಿತ

ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದ ಹೂ ಬೆಳೆಗಳ ಇಳುವರಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.30ರಿಂದ 40ರಷ್ಟು ಕುಸಿದಿದೆ ಎನ್ನಲಾಗುತ್ತಿದೆ. ಕೆಲವೆಡೆ ಅತಿಯಾದ ಬಿಸಿಲು, ಮತ್ತೆ ಕೆಲವೆಡೆ ಅಕಾಲಿಕ ಮಳೆ ಹಾಗೂ ತೇವಾಂಶದ ಏರಿಳಿತದಿಂದ ಹೂವಿನ ಗಿಡಗಳ ಬೆಳವಣಿಗೆ ಹಾಗೂ ಹೂ ಬಿಡುವಿಕೆ ಮೇಲೆ ಪರಿಣಾಮ ಬೀರಿದೆ.

ಇದರ ಜತೆಗೆ ಹೂಗಳ ಹೊಳಪು, ಗಾತ್ರ ಮತ್ತು ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ. ಹವಾಮಾನದಲ್ಲಿನ ಬದಲಾವಣೆಗಳಿಂದ ಕಪ್ಪುರೋಗ, ಕ್ರಿಪ್ಸ್ ಸೇರಿದಂತೆ ವಿವಿಧ ಕೀಟ ಹಾಗೂ ರೋಗಗಳ ಬಾಧೆಯೂ ಹೆಚ್ಚಾಗಿದ್ದು, ಗುಣಮಟ್ಟದ ಹೂಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹೂಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ದರ ಏರಿಕೆಗೆ ಮತ್ತಷ್ಟು ಕಾರಣವಾಗಿದೆ.

ಆಷಾಢದಲ್ಲೇ ದರ ಏರಿಕೆ

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಹೂವಿನ ಬೇಡಿಕೆ ತುಸು ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ಹಲವು ಜಿಲ್ಲೆಗಳಲ್ಲಿ ಹೂಗಳಿಗೆ ಉತ್ತಮ ದರ ದೊರೆತಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿರುವುದು ಹಾಗೂ ಗುಣಮಟ್ಟದ ಹೂಗಳ ಕೊರತೆ ದರ ಏರಿಕೆಗೆ ಕಾರಣವಾಗಿದೆ.

ಬೆಳೆಗಾರರಿಗೆ ಉತ್ತಮ ದರ ದೊರೆಯುತ್ತಿರುವುದು ಒಂದೆಡೆಯಾದರೆ, ಗ್ರಾಹಕರಿಗೆ ಮಾತ್ರ ಹೂ ಖರೀದಿ ವೆಚ್ಚ ಹೆಚ್ಚಾಗುತ್ತಿದೆ. ಇದೀಗ ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಾಗಲಿರುವುದರಿಂದ ಮಾರುಕಟ್ಟೆ ದರದ ಮೇಲೆ ಮತ್ತಷ್ಟು ಒತ್ತಡ ಬೀಳುವ ಸಾಧ್ಯತೆ ಇದೆ.

ಹಬ್ಬಗಳ ಸಾಲು; ಹೂವಿಗೆ ಭರ್ಜರಿ ಬೇಡಿಕೆ

ಶ್ರಾವಣ ಮಾಸದಲ್ಲಿ ರಾಜ್ಯದಾದ್ಯಂತ ಹಬ್ಬಗಳ ಸಂಭ್ರಮ ಹೆಚ್ಚಾಗಲಿದೆ. ವರಮಹಾಲಕ್ಷ್ಮೀ ಹಬ್ಬ, ನಾಗರಪಂಚಮಿ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳಲ್ಲಿ ಮನೆ ಅಲಂಕಾರ, ಪೂಜೆ, ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೂವು ಅನಿವಾರ್ಯವಾಗಿದೆ.
ವಿಶೇಷವಾಗಿ ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ, ಕಾಕಡ ಸೇರಿದಂತೆ ವಿವಿಧ ಹೂಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಹಬ್ಬದ ದಿನಗಳಲ್ಲಿ ಹೂಗಳ ಬಳಕೆ ಸಾಮಾನ್ಯ ದಿನಗಳಿಗಿಂತ ಹಲವು ಪಟ್ಟು ಹೆಚ್ಚಾಗುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರ ಹೆಚ್ಚಾದರೆ ದರ ಮತ್ತಷ್ಟು ಏರಿಕೆಯಾಗಬಹುದು.

ಬೆಳೆಗಾರರಿಗೆ ದರ; ಗ್ರಾಹಕರಿಗೆ ಹೊರೆ

ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಸಿದಿರುವ ಸಂದರ್ಭದಲ್ಲಿ ಉತ್ತಮ ದರ ಸಿಗುತ್ತಿರುವುದು ಬೆಳೆಗಾರರಿಗೆ ಕೊಂಚ ನೆಮ್ಮದಿ ನೀಡಿದೆ. ಆದರೆ ಬೆಳೆ ಬೆಳೆಸಲು ಬಳಸುವ ಗೊಬ್ಬರ, ಔಷಧ, ಕಾರ್ಮಿಕರ ಕೂಲಿ, ನೀರಾವರಿ ಸೇರಿದಂತೆ ಉತ್ಪಾದನಾ ವೆಚ್ಚವೂ ಹೆಚ್ಚಾಗಿರುವುದರಿಂದ ಪ್ರಸ್ತುತ ದರದಿಂದ ನಿರೀಕ್ಷಿತ ಲಾಭ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಅಳಲಮತ್ತೊಂದೆಡೆ ಹಬ್ಬದ ಸೀಸನ್‌ನಲ್ಲಿ ಹೂ ಖರೀದಿಸುವ ಗ್ರಾಹಕರಿಗೆ ದರ ಏರಿಕೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ವೈಪರೀತ್ಯದಿಂದ ಆರಂಭವಾದ ಪರಿಣಾಮ ಇದೀಗ ಹೂ ಮಾರುಕಟ್ಟೆಯ ಮೇಲೆ ನೇರವಾಗಿ ಗೋಚರಿಸುತ್ತಿದ್ದು, ಶ್ರಾವಣದಲ್ಲಿ ಇದರ ಬಿಸಿ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದಹೂವಿನ ಬೆಲೆ ಈಗ ಹೆಚ್ಚಾಗಿದೆ. ಆದರೆ ವ್ಯಾಪಾರ ಮಾತ್ರ ಕಡಿಮೆಯಿದ್ದು, ಹಾಕಿರುವ ಬಂಡವಾಳವೂ ವಾಪಸ್ ಬರುತ್ತಿಲ್ಲ. ಶ್ರಾವಣ ಮಾಸ ಆರಂಭವಾದರೆ ಸ್ವಲ್ಪ ವ್ಯಾಪಾರ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ನಿರಂತರ ಮಳೆಯಿಂದ ಹೂವಿನ ಗುಣಮಟ್ಟವೂ ಕುಸಿದಿದ್ದು, ಕಳೆಗುಂದಿವೆ. ಹೀಗಾಗಿ ಗ್ರಾಹಕರು ಹೂ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೈತರಿಗೂ, ನಮ್ಮಂತಹ ಹೂ ಮಾರಾಟಗಾರರಿಗೂ ನಷ್ಟ ಉಂಟಾಗುತ್ತಿದೆ ಎಂದು ಹೂ ಮಾರಾಟಗಾರ ನಾಗರಾಜು ಹೇಳಿದ್ದಾರೆ.

ಇತ್ತೀಚೆಗೆ ನೀರಿನ ಅಭಾವದಿಂದ ಹೂವಿನ ಉತ್ಪಾದನೆ ಕಡಿಮೆಯಾಗಿತ್ತು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಶ್ರಾವಣ ಮಾಸದಲ್ಲಿ ಹೂವಿನ ಕೊರತೆಯಾಗುವ ಸಾಧ್ಯತೆ ಇಲ್ಲ. ಆದರೆ, ಸೂಕ್ತ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಸೊರಗು ರೋಗ ಕಾಣಿಸಿಕೊಳ್ಳುತ್ತಿದೆ. ರೈತರು ಬೆಳೆ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹೂವಿನ ಕೊರತೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ಉತ್ಪಾದನೆ ಲಭ್ಯವಾಗಲಿದೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ  ಡಾ. ಹನುಮಂತರಾಯ ಬಿ ಜಿ ತಿಳಿಸಿದ್ದಾರೆ.

ಬಿಸಿಲು, ಮಳೆ ಸೇರಿದಂತೆ ಹವಮಾನದಲ್ಲಿನ ನಿರಂತರ ಬದಲಾವಣೆಯಿಂದ ಹೂಗಳಿಗೆ ಹಾನಿಯಾಗಿದೆ. ಇಳುವರಿ ಕೂಡ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ದರವಿದ್ದರೂ ಹೂಗಳ ಕೊರತೆಯಿದೆ ಎಂದು ಹೂ ಬೆಳೆಗಾರರು ರವಿಕುಮಾರ್ ಹೇಳಿದ್ದಾರೆ.

 

ಹೂ ಮಾರುಕಟ್ಟೆ ಬೆಲೆ

ಹೂವಿನ ಹೆಸರು                ‌ ‌‌‌        ಬೆಲೆ (₹/ಕೆ.ಜಿ.)

ದುಂಡು ಮಲ್ಲಿಗೆ                         ₹400–500

ಸೂಜಿ ಮಲ್ಲಿಗೆ                            ₹200–250

ಸೇವಂತಿಗೆ                                 ₹60-150

ಕಾಕಡ.                                      ₹200–250

ಗೆನ್ನೇರು                                     ₹400

ಕನಕಾಂಬರ                              ₹950–1,000

ಚೆಂಡು ಹೂ                              ₹10–20

ಸುಗಂಧರಾಜ                           ₹120–130

ಗುಲಾಬಿ (ರೋಜಾ ಹೂ)           ₹190–200

Leave a Reply

Your email address will not be published. Required fields are marked *

error: Content is protected !!