Categories: ಲೇಖನ

ಮೂರನೇ ಮ‌ಹಾಯುದ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ……?

ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗೆ ಅದಕ್ಕೆ ತಾಳೆಯಾಗುತ್ತದೆ ಜೊತೆಗೆ ಕೆಲವು ಸನ್ನಿವೇಶಗಳು ಸಂಪೂರ್ಣ ಭಿನ್ನವೂ ಆಗಿದೆ…….

ಎರಡೂ ಮಹಾ ಯುದ್ಧಗಳ ಕೇಂದ್ರ ಬಿಂದು ಯೂರೋಪ್ ಖಂಡವೇ ಆದರೂ ಜೊತೆಗೆ ಎರಡೂ ಮಹಾ ಯುದ್ಧಗಳ ಕೊನೆಯ ಹಂತದಲ್ಲಿ ಅಮೆರಿಕ ಪ್ರವೇಶ ಮಾಡಿರುವುದು, ತದನಂತರ ಅನಾಹುತಗಳಾದ ಮೇಲೆ ಯುದ್ಧ ಕೆಲವು ಒಪ್ಪಂದಗಳೊಂದಿಗೆ ಮುಕ್ತಾಯವಾಗಿದೆ……

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿಯೇ ಅಮೆರಿಕ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಿ, ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ವಿಶ್ವ ನಾಯಕತ್ವದ ಸ್ಥಾನವನ್ನು ನಿಭಾಯಿಸಿದೆ ಮತ್ತು ಉಳಿಸಿಕೊಂಡಿದೆ. ಅದಕ್ಕಾಗಿ ಎಲ್ಲಾ ರೀತಿಯ ತಂತ್ರ, ಕುತಂತ್ರ, ಚಾಣಕ್ಯ ನೀತಿ, ಸಾಮರ್ಥ್ಯ, ಬುದ್ದಿವಂತಿಕೆ, ಧೈರ್ಯ ಬಳಸಿದೆ…..

ಆದರೆ ಈ ಬಾರಿ ಅಮೆರಿಕ ಪ್ರಾರಂಭಿಕ ಹಂತದಲ್ಲಿಯೇ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಯುದ್ಧ ಪ್ರವೇಶಿಸಿದೆ. ಏನಾಗಬಹುದು ಮುಂದೆ ಎಂಬ ಕುತೂಹಲಕ್ಕೆ, ಏನಿಲ್ಲ ಯುದ್ಧ ಇನ್ನೊಂದಿಷ್ಟು ತೀವ್ರತೆ ಪಡೆದು, ಇನ್ನೊಂದಷ್ಟು ಜೀವ ಹಾನಿಗಳಾಗಿ, ಇನ್ನೊಂದಷ್ಟು ಭೂಮಿ, ಪರಿಸರ, ಆರ್ಥಿಕತೆ ನಾಶವಾದ ನಂತರ ಎಲ್ಲರೂ ಸೇರಿ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ ಅಷ್ಟೇ ಎನ್ನುವ ಸಾಮಾನ್ಯ ಉತ್ತರ ಹೇಳಬಹುದು…….

ಕನಿಷ್ಠ ಎರಡು ಮಹಾಯುದ್ಧಗಳ ಅನುಭವದ ಆಧಾರದ ಮೇಲೆ ಮುಂದೆ ಎಲ್ಲಾ ಅನಾಹುತಗಳಾದ ನಂತರ ಒಪ್ಪಂದ ಮಾಡಿಕೊಂಡು ಯುದ್ಧ ಕೊನೆಗೊಳಿಸುವುದಕ್ಕಿಂತ
ಈಗಲೇ ಆ ಅನುಭವದ ಆಧಾರದ ಮೇಲೆ ಯುದ್ಧ ನಿಲುಗಡೆ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ ಎಂಬ ದೂರದ ಆಸೆ ಪುಟ್ಟ ಮಗುವಿನ ರೀತಿ ಮನದಲ್ಲಿ ಮೂಡುತ್ತದೆ…..

ವಿಶ್ವದ ಯಾರಾದರೂ ಮಹಾನ್ ವ್ಯಕ್ತಿಗಳು ಒಂದೆಡೆ ಕುಳಿತು ಕೆಲವು ಸಂಧಾನ ಸೂತ್ರಗಳನ್ನು ಹಣೆಯಬಹುದಲ್ಲವೇ. ಹೇಗಿದ್ದರೂ ಅದಕ್ಕೆ ವಿಶ್ವ ಸಂಸ್ಥೆ ಎಂಬ ವೇದಿಕೆಯೂ ಇದೆ. ಎಲ್ಲಾ ನಾಶದ ಬಳಿಕ ಅನಿವಾರ್ಯವಾಗಿ ಒಪ್ಪಂದ ಮಾಡಿಕೊಂಡರೆ ಹೋದ ಜೀವಗಳು ಮರಳಿ ಬರುತ್ತವೆಯೇ. ಈ ವಿಷಯ ವಿಚಿತ್ರವೆನಿಸುತ್ತದೆ. ಇದು ಮನುಷ್ಯನ ನೈತಿಕತೆಯ ಬಗ್ಗೆಯೇ ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕಿದೆ…..

ಅಮೆರಿಕಾದಲ್ಲಿ ಅಷ್ಟೇನೂ ನೈತಿಕ ಪ್ರಜ್ಞೆ ಹೊಂದಿರದ, ಮಾನಸಿಕವಾಗಿ ಸೀಮಿತದಲ್ಲಿಲ್ಲದ, ತಿಕ್ಕಲು ಸ್ವಭಾವದ, ಆಕ್ರಮಣಕಾರಿ ಮನೋಭಾವದ, ಅಮೆರಿಕಾದ ಘನತೆಯನ್ನು, ಮಾನವೀಯ ಮೌಲ್ಯಗಳನ್ನು ಕಡಿಮೆ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಅಧ್ಯಕ್ಷ ಸ್ಥಾನದಲ್ಲಿ ಇರುವುದರಿಂದ ಯುದ್ಧ ನಿಲ್ಲುವ ಉತ್ತಮ ಫಲಿತಾಂಶವನ್ನು ಅಥವಾ ಪ್ರಬುದ್ಧ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮೊದಲೇ ಯುದ್ಧದ ಶಸ್ತ್ರಾಸ್ತ್ರಗಳ ಮಾರಾಟದ ವಿಷಯದಲ್ಲಿ ಅಮೆರಿಕಾ ನಂಬಿಕೆಗೆ ಅರ್ಥವಾಗಿಲ್ಲ, ತನ್ನ ಸ್ವ ಹಿತಾಸಕ್ತಿಗಾಗಿ ಅನೇಕ ಭಯೋತ್ಪಾದಕ ಗುಂಪುಗಳನ್ನು ಬೆಳೆಸಿದೆ…..

ಅಂತಹ ದೇಶದ ನಾಯಕತ್ವವನ್ನು ಈ ರೀತಿಯ ಅಪ್ರಬುದ್ಧರೊಬ್ಬರು ಮುನ್ನಡೆಸುತ್ತಿರುವುದರಿಂದ ಇನ್ನು ಮುಂದಿನ ಮೂರು ನಾಲ್ಕು ವರ್ಷಗಳು ಜಾಗತಿಕ ವಿದ್ಯಮಾನಗಳು ಹೀಗೆ ಹುಚ್ಚುಚ್ಚಾಗಿಯೇ ಸಾಗಬಹುದು……

ಹಾಗೆಯೇ ಇಸ್ರೇಲ್ ಎಂಬ ದೇಶದ ತಂತ್ರಜ್ಞಾನ, ಚಾಕಚಕ್ಯತೆ, ಶ್ರಮ ಸಂಸ್ಕೃತಿ, ಆಧುನಿಕತೆ, ದೂರ ದೃಷ್ಟಿ, ಬೇಹುಗಾರಿಕೆ ಮುಂತಾದ ಎಲ್ಲದರ ನಡುವೆಯೂ ಅದು ತುಂಬಾ ತುಂಬಾ ತನ್ನೊಳಗೆ ಧೈರ್ಯದ ಜೊತೆಗೆ ಕ್ರೌರ್ಯವನ್ನು ಅಡಗಿಸಿಕೊಂಡಿದೆ. ಅದರ ಅತಿರೇಕದ ಪ್ರತಿನಿಧಿಯಾಗಿ ಬೆಂಜಮಿನ್ ನೆತನ್ಯಾಹು ಪ್ರಧಾನಿಯ ಪುಟ್ಟ ವಹಿಸಿದ್ದಾರೆ. ಇದು ಯುದ್ಧಗಳು ಮತ್ತಷ್ಟು ತೀವ್ರವಾಗಲು ಕಾರಣವಾಗಿದೆ……

ಹಾಗೆಯೇ ಇನ್ನೊಂದು ಕಡೆ ಇರಾನ್ ಎಂಬ ಮತಾಂಧ ಶಕ್ತಿ ಖಮೇನಿ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಪ್ರಗತಿಪರವಲ್ಲದ, ವಿನಾಶಕಾರಿ, ಮತಾಂಧ ಭಂಡತನವನ್ನು ಪ್ರದರ್ಶಿಸುತ್ತಿದೆ. ಅದು ಕೂಡ ಮಾನವ ಶಾಂತಿಗೆ ವಿರುದ್ಧವಾಗಿದೆ…..

ಇನ್ನು ಬಲಿಷ್ಠ ರಷ್ಯಾ, ಚೀನಾ, ಭಾರತ ತಮ್ಮ ಸ್ವಂತದ ಆರ್ಥಿಕ ಹಿತಾಸಕ್ತಿಗಳನ್ನೇ ಗಮನದಲ್ಲಿಟ್ಟುಕೊಂಡು ಹೊಂಚು ಹಾಕಿ ಕುಳಿತಿವೆ. ಯೂರೋಪ್ ಯೂನಿಯನ್ ಬಹುತೇಕ ಅಮೆರಿಕಾದ ಬಾಲಂಗೋಚಿ…..

ಈ ನಿಟ್ಟಿನಲ್ಲಿ ಯೋಚಿಸಿದಾಗ ನಿಜಕ್ಕೂ ಮೂರನೆಯ ಮಹಾಯುದ್ಧದ ಸಾಧ್ಯತೆಗಳು ಕಾಣುತ್ತಿದೆ. ಇಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದ ಮುಂದಿನ ನಡೆಗಳು ಸ್ವಲ್ಪ ಮಟ್ಟಿಗೆ ಕುತೂಹಲಕಾರಿಯಾಗಿದೆ. ಯುದ್ಧ, ಜಗಳ, ಸಂಘರ್ಷಗಳಲ್ಲಿ ಸತ್ಯವೇ ಗೆಲ್ಲುತ್ತದೆ, ವಾಸ್ತವವೇ ವಿಜಯಿಯಾಗುತ್ತದೆ ಎಂಬ ನಂಬಿಕೆ ಏನೂ ಇಲ್ಲ. ಸುಳ್ಳುಗಳು, ಕುತಂತ್ರಗಳು, ಗಾಳಿ ಮಾತುಗಳು, ಭಯ ಇವೇ ಹೆಚ್ಚು ಮೇಲುಗೈ ಸಾಧಿಸುತ್ತವೆ. ಇಂತಹ ಸಂದರ್ಭದಲ್ಲಿ ನಾಯಕರುಗಳಲ್ಲಿ ಮಾನಸಿಕ ಗೊಂದಲ, ದ್ವಂದ್ವಗಳು ಮನೆ ಮಾಡುತ್ತವೆ. ಆ ಒತ್ತಡದಲ್ಲಿ ಬಹುತೇಕ ತಪ್ಪು ನಿರ್ಧಾರಗಳೇ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ….

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನಿಂದ ಜಾಗತಿಕ ವಿದ್ಯಮಾನಗಳನ್ನು ನೋಡಿದರೆ, ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ವಿರುದ್ಧವಾಗಿ ನಾವೇ ಶ್ರೇಷ್ಠ, ನಾವೇ ಮುಖ್ಯ, ನಮ್ಮ ದೇಶವೇ ಮೊದಲು ಎನ್ನುವ ಸಂಕುಚಿತ ವ್ಯಾಪಾರಿ ಮನೋಭಾವದ ನಾಯಕರುಗಳು ಮುನ್ನಲೆಗೆ ಬಂದ ಪರಿಣಾಮವಾಗಿ, ಅದರ ಮುಂದುವರಿದ ಭಾಗವಾಗಿ ದುಷ್ಪರಿಣಾಮದ ರೂಪದಲ್ಲಿ ಈ ಕ್ಷಣದ ಘಟನೆಗಳು ನಡೆಯುತ್ತಿದೆ. ಅಲ್ಲದೆ ಬಹುಶಃ ಭೂ ಸೈನ್ಯಕ್ಕಿಂತ ವಾಯು ಪಡೆ ಮತ್ತು ನೌಕಾದಳಗಳು ಹೆಚ್ಚು ಬಲಿಷ್ಠವಾದ ಮತ್ತು ಪ್ರಭಾವಶಾಲಿಯಾದ ಹಾಗೂ ತಂತ್ರಜ್ಞಾನ ಹೆಚ್ಚು ಹೆಚ್ಚು ವಿನಾಶಕಾರಿಯಾದ ಕಾರಣ ಯುಧ್ಧೋತ್ಸಾಹಗಳು ಅದೇ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ….

ಈ ಎಲ್ಲವನ್ನು ನೋಡುತ್ತಿದ್ದರೆ ವಿಶ್ವದಲ್ಲಿ ಯಾರ ಮೇಲೆ ಯಾರಿಗೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಾಗೆಯೇ ಅತ್ಯಂತ ಬಲಿಷ್ಠ ನಾಯಕತ್ವ ಹೊಂದಿದ್ದ ಅಮೆರಿಕ ಕೂಡ ಚಂಚಲ ಮನಸ್ಸಿನ ವ್ಯಕ್ತಿಯ ಕೈಗೆ ಹೋಗಿರುವುದರಿಂದ ವಿಶ್ವ ಬಹುತೇಕ ವಿನಾಶದ ಅಂಚಿಗೆ ತಲುಪುತ್ತಿದೆ……

ಐದು ವರ್ಷಗಳ ಹಿಂದಿನ ಕೋವಿಡ್ ಸಮಯದಲ್ಲಿಯೇ ವಿಶ್ವ ಇನ್ನೇನು ತೀರಾ ಅಧೋಗತಿಗೆ ಇಳಿಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಒಂದಷ್ಟು ಅನಾಹುತದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಆದರೆ ಈಗ ಈ ನಾಯಕರುಗಳು ವಿಶ್ವವನ್ನು, ಈ ಭೂಮಂಡಲವನ್ನು ತುಂಬಾ ಬಿಕ್ಕಟ್ಟಿಗೆ, ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ…..

ಸಾಮಾಜಿಕ ಜಾಲತಾಣಗಳು, ಸಮೂಹ ಸಂಪರ್ಕ ಮಾಧ್ಯಮಗಳು ಪ್ರಬಲವಾಗಿರುವ ಇಂತಹ ಸಂದರ್ಭದಲ್ಲಿ, ಜಾಲತಾಣಗಳ ಮುಖ್ಯಸ್ಥರು, ಜಾಲತಾಣಗಳಲ್ಲಿ ಜನಪ್ರಿಯತೆ ಹೊಂದಿರುವವರು, ಸುದ್ದಿ ಮಾಧ್ಯಮಗಳು ಎಲ್ಲವೂ ಸೇರಿ ವಿಶ್ವ ನಾಯಕರ ಮೇಲೆ ಶಾಂತಿಯ ಒತ್ತಡವನ್ನು ತರದಿದ್ದರೆ ನಮ್ಮ ಯಾರಿಗೂ ಉಳಿಗಾಲವಿಲ್ಲ ಎನಿಸುತ್ತದೆ ಅಥವಾ ವಿಶ್ವದಲ್ಲಿ ಮತ್ತೊಂದು ಪ್ರಬಲ ನಾಯಕತ್ವ ಉಗಮವಾಗಲು ಈ ಪರಿಸ್ಥಿತಿ ಕಾರಣವಾದರೂ ಆಗಬಹುದು…..

ಎಲ್ಲಾ ನಾಶದ ನಂತರ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಈಗಲೇ ಮಾಡಿಕೊಳ್ಳುವುದು ಉತ್ತಮ ಎಂಬ ಆಸೆ. ಆದರೆ ಮನುಷ್ಯ ತನ್ನ ಮೇಲೆ ತಾನೇ ನಿಯಂತ್ರಣ ಕಳೆದುಕೊಂಡಾಗ ಆಗುವ ದುಷ್ಪರಿಣಾಮ ಈಗ ಇಡೀ ವಿಶ್ವವೇ ಎದುರಿಸುತ್ತಿದೆ. ಆದಷ್ಟು ಬೇಗ ವಿಶ್ವ, ಶಾಂತಿಯ ಕಡೆ ಮುಖ ಮಾಡಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…

19 hours ago

ಬರದ ಬವಣೆಗೆ ಸಿಲುಕಿದ ದೊಡ್ಡಬಳ್ಳಾಪುರ: ಬರಪೀಡಿತ ಪಟ್ಟಿಗೆ ಸೇರ್ಪಡೆ

ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…

21 hours ago

50 ಲಕ್ಷ ಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!

ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…

22 hours ago

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು-ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ. ಒಂದೆಡೆ ಮೇಕೆದಾಟು ಯೋಜನೆ…

1 day ago

ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ ಪತ್ನಿ ಶವವಾಗಿ ಪತ್ತೆ: ಸಾವಿನ ಹಿಂದೆ ಕೊಲೆ ಶಂಕೆ; ಪತಿಯ ಚಲನವಲನಗಳ ಕುರಿತು ಪೊಲೀಸರಿಂದ ತನಿಖೆ

ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಗೌರಿಬಿದನೂರು ತಾಲೂಕಿನ…

1 day ago

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಡಿ.ಜಿ. ನೇಮಕ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…

1 day ago