
ಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೈಜೋಡಿಸಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎನ್ಕೋರ್ಡ್ (NCORD – ರಾಷ್ಟ್ರೀಯ ಮಾದಕವಸ್ತು ಸಮನ್ವಯ ಪೋರ್ಟಲ್) ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ
(ಡ್ರಗ್ಸ್) ಹಾವಳಿಯನ್ನು ನಿರ್ಮೂಲನೆ ಮಾಡಲು ವಿವಿಧೆಡೆ ಮೆಡಿಕಲ್ ಕಾಲೇಜು, ನರ್ಸಿಂಗ್, ಫಾರ್ಮಸಿ ಮುಂತಾದ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳು ಉಳಿದುಕೊಳ್ಳುವ ಪಿಜಿ ಹಾಗೂ ಖಾಸಗಿ ಹಾಸ್ಟೆಲ್ಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಪ್ರದೇಶಗಳಲ್ಲಿ ಆಗಿಂದಾಗ್ಗೆ ಪರಿಶೀಲನೆ ನಡೆಸಿ, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಬ್ಯಾಗ್ ಪರಿಶೀಲನೆ, ಮಕ್ಕಳ ನಡವಳಿಕೆಯಲ್ಲಿ ಸಹ ನಿಗಾ ವಹಿಸಬೇಕು. ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಎಂ.ವಿ. ಮಾತನಾಡಿ, ಮಾದಕ ವಸ್ತುಗಳ ಜಾಲ ಕೇವಲ ಶಾಲಾ-ಕಾಲೇಜುಗಳಿಗೆ ಸೀಮಿತವಾಗಿಲ್ಲ, ಕೈಗಾರಿಕಾ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಖಾಲಿ ನಿವೇಶನ, ಕೃಷಿ ಭೂಮಿ, ಮನೆಯ ತಾರಸಿಯಲ್ಲಿ ಸಹ ಬೆಳೆಯುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು. ಗಾಂಜಾ ಕುರಿತ ಮಾಹಿತಿ ಕಂಡುಬಂದಲ್ಲಿ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.
ಎನ್ಡಿಪಿಸ್ ಕಾಯ್ದೆ ಅಡಿ ಆಗಸ್ಟ್ 31 ರಿಂದ ಸೆ.23 ವರೆಗೆ 20 ಕೇಸ್ ದಾಖಲಿಸಲಾಗಿದ್ದು 22 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 15 ಕೆಜಿ 14 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಡಿವೈಎಸ್ಪಿ ಪಾಂಡುರಂಗ, ಅಧಿಕಾರಿಗಳು ಉಪಸ್ಥಿತರಿದ್ದರು