
ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್ಗಳು ಹಾಗೂ 5 ಜೆಸಿಬಿಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲವು ವಾಹನಗಳಿಗೆ ನಂಬರ್ ಪ್ಲೇಟ್ಗಳಿಲ್ಲದೆ, ಚಾಲಕರ ಬಳಿ ಅಗತ್ಯ ದಾಖಲೆಗಳೂ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆರಂಭದಲ್ಲಿ ರೈತರು ತಮ್ಮ ತೋಟಗಳಿಗೆ ಅಗತ್ಯವಿರುವ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಮಣ್ಣು ದಂಧೆಕೋರರು ಇದೀಗ ಮಣ್ಣನ್ನು ಮಾರಾಟ ಮಾಡುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆರೆಯ ಪ್ರದೇಶದಲ್ಲಿ ನಾಲ್ಕೈದು ಅಡಿ ಆಳದವರೆಗೆ ಮಣ್ಣು ತೆಗೆಯಲಾಗಿದ್ದು, ಇದರಿಂದ ಕೆರೆಯ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.

ಹೊಂಗೆ ಮರಗಳ ಬುಡಕ್ಕೂ ಜೆಸಿಬಿ ಕಂಟಕ!
ಮಣ್ಣು ತೆಗೆಯುವ ಸಂದರ್ಭದಲ್ಲಿ ಹೊಂಗೆ ಮರಗಳ ಬುಡದವರೆಗೂ ಜೆಸಿಬಿಗಳನ್ನು ಬಳಸಲಾಗುತ್ತಿದ್ದು, ಮರಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ. ಅಲ್ಲದೆ, ಜೆಸಿಬಿ ಹಾಗೂ ಟ್ರ್ಯಾಕ್ಟರ್ಗಳ ನಿರಂತರ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಯ ಪ್ರದೇಶದಲ್ಲಿ ಮಣ್ಣು ತೆಗೆಯುವುದರಿಂದ ದನಕರುಗಳ ಮೇವಿಗೆ, ಓಡಾಟಕ್ಕೂ ತೊಂದರೆಯಾಗುತ್ತಿದೆ. ಗ್ರಾಮಸ್ಥರು ಹಾಗೂ ಜಾನುವಾರುಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಮಣ್ಣು ತೆಗೆಯಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ತಡೆ
ಮಧುರೆ ಕೆರೆಯಲ್ಲಿ ನಡೆಯುತ್ತಿದೆ ಎನ್ನಲಾದ ಮಣ್ಣು ತೆಗೆಯುವ ಕಾರ್ಯಕ್ಕೆ ಇಂದು ಕೋಡಿಪಾಳ್ಯ ಹಾಗೂ ಚೆನ್ನದೇವಿ ಅಗ್ರಹಾರ ಗ್ರಾಮದ ನಿವಾಸಿಗಳು ತಡೆಹಿಡಿದಿದ್ದಾರೆ. ಕೆರೆಯ ಮಣ್ಣನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ, ಮಣ್ಣು ತೆಗೆಯಲು ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆಲವು ವಾಹನಗಳಿಗೆ ನಂಬರ್ ಪ್ಲೇಟ್ಗಳಿಲ್ಲದಿರುವುದು ಹಾಗೂ ಚಾಲಕರ ಬಳಿ ಅಗತ್ಯ ದಾಖಲೆಗಳಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ವಾಹನಗಳ ದಾಖಲೆ, ಮಣ್ಣು ಸಾಗಾಟದ ಅನುಮತಿ ಮತ್ತು ಕೆರೆಯ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ಕೆರೆಯ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.