Categories: ಲೇಖನ

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖಂಡಿತವಾಗಲೂ ಮುಂದಿನ ದಿನಗಳು ನಮ್ಮ ಬುಡಕ್ಕೆ ಈ ಸಮಸ್ಯೆ ಬರಬಹುದು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಗಲಭೆಗಳು ಸಾಮಾನ್ಯವಾಗುತ್ತಿದೆ. ಅದರ ಅರ್ಥ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿದೆ. ಇದಕ್ಕೆ ಆ ಕ್ಷಣದ ಆ ಘಟನೆಯಾ ಮೇಲೆ ಚರ್ಚೆ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬರುವುದು ತೀರ ಬಾಲಿಶವಾದದ್ದು. ವ್ಯವಸ್ಥೆ ಮತ್ತು ಅದು ಸಾಗುತ್ತಿರುವ ದಿಕ್ಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ನಮ್ಮನ್ನು ಕಾಪಾಡಬೇಕಾಗಿದ್ದ ದೇವರು, ನಮ್ಮನ್ನು ರಕ್ಷಿಸಿ ಕ್ರಮಬದ್ಧ ಜೀವನಶೈಲಿ ರೂಪಿಸಬೇಕಾಗಿದ್ದ ಧರ್ಮಗಳು ಇಂದು ನಮ್ಮನ್ನು ವಿಭಜಿಸಿರುವುದು ಮಾತ್ರವಲ್ಲದೆ ದೇವರು ಧರ್ಮವನ್ನು ಉಳಿಸಬೇಕಾದ ಪರಿಸ್ಥಿತಿ ಶ್ರೀ ಸಾಮಾನ್ಯನಿಗೆ ಹೊರಿಸಿ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಮೇಲ್ವರ್ಗದವರು ತಾವು ಸುಖವಾಗಿದ್ದಾರೆ. ಇದು ವಿಚಿತ್ರವಲ್ಲವೇ. ಬೇಕಾದರೆ ಗಮನಿಸಿ…….

ಸ್ವಲ್ಪ ಖಾರವಾದರೂ ವಾಸ್ತವ ಇದೇ ಅಲ್ಲವೇ…..

ಒಂದು ಕಡೆ ಮದ್ದೂರಿನ ತರಕಾರಿ ಕಮಲಮ್ಮನ ಮಗ, ಗಣೇಶ ಉತ್ಸವದಲ್ಲಿ ಭಾಗವಹಿಸಿ, ಅಂದು ನಡೆದ ಗಲಭೆಯಲ್ಲಿ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರಿಂದ ಇಂದು ಜೈಲಿನಲ್ಲಿದ್ದಾನೆ. ಆತನ ಜಾಮೀನಿಗಾಗಿ ಕಮಲಮ್ಮನವರು ತುಂಬಾ ನೋವಿನಿಂದ, ಕಷ್ಟದಿಂದ ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಗೋಳಾಡುತ್ತಿದ್ದಾರೆ……

ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ಈಗ ಎಂ ಎಲ್ ಸಿ ಯಾಗಿ ಮುಂದೆ ತನ್ನ ತಂದೆಯ ನಂತರ ರಾಜ್ಯದಲ್ಲಿ ಮಂತ್ರಿಯಾಗಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ…..

ಒಂದು ಕಡೆ ಭದ್ರಾವತಿಯ ಹಣ್ಣಿನ ಅಂಗಡಿಯ ಇಬ್ರಾಹಿಂ ಅವರ ಮಗ ನಿನ್ನೆ ನಡೆದ ಗಣೇಶ ಉತ್ಸವದ ಗಲಾಟೆಯ ಸಂದರ್ಭದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಈಗ ಜೈಲು ಸೇರಿದ್ದಾನೆ. ಅವನ ಬಿಡುಗಡೆಗಾಗಿ ಅವರ ತಂದೆ ಇಬ್ರಾಹಿಂ ಕಣ್ಣೀರು ಸುರಿಸುತ್ತಾ ಓಡಾಡುತ್ತಿದ್ದಾರೆ…….

ಮತ್ತೊಂದು ಕಡೆ ಕರ್ನಾಟಕ ಸರ್ಕಾರದ ಮಂತ್ರಿಗಳು ಹಾಗೂ ಮುಸ್ಲಿಂ ಸಮುದಾಯದ ನಾಯಕರು ಆದ ಜಮೀರ್ ಅಹ್ಮದ್ ಅವರ ಪುತ್ರ ಹಿಂದೆ ಒಂದು ಸಿನಿಮಾದಲ್ಲಿ ಅಭಿನಯ ಮಾಡಿ ಈಗ ನಾಯಕನಾಗಿ ಮತ್ತೊಂದು ದೊಡ್ಡ ಬಜೆಟ್ಟಿನ ಸಿನಿಮಾ ಮಾಡಲು ಸಿದ್ಧತೆಯಲ್ಲಿ ತೊಡಗಿ ಅದಕ್ಕಾಗಿ ತುಂಬಾ ಶ್ರಮವಹಿಸುತ್ತಿದ್ದಾರೆ…….

ಒಂದು ಕಡೆ ಶಿವಮೊಗ್ಗಾದ ರೈತರಾದ ಕೃಷ್ಣಪ್ಪರನವರ ಮಗ ಅದೇ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸಿ ಆರೋಪಿಯಾಗಿ ಜೈಲು ಸೇರಿದ್ದಾನೆ. ಕೃಷ್ಣಪ್ಪನವರು ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಅವರ ಬಂಧುಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ……

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮುಂದೆ ತಮ್ಮ ಪಕ್ಷವನ್ನು ರಾಜ್ಯಾದ್ಯಂತ ಬೆಳೆಸುವ ನಿಟ್ಟಿನಲ್ಲಿ ಅದರ ಅಧ್ಯಕ್ಷರಾಗಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ….

ಒಂದು ಕಡೆ ದಾವಣಗೆರೆಯ ಬಟ್ಟೆ ಅಂಗಡಿ ಖಲೀಲ್ ಸಾಬರ ಮಗ ಮತ್ತೆ ಅದೇ ಗಣೇಶೋತ್ಸವದ ಗಲಾಟೆಯ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ. ಖಲೀಲ್ ಸಾಬರು ಇದ್ದ ಒಂದಷ್ಟು ಹಣ ಕೂಡಿಸಿ ಸಾಲ ಮಾಡಿ ಮಗನನ್ನು ಬಿಡಿಸಿಕೊಳ್ಳಲು ವಕೀಲರ ಮನೆ ಬಾಗಿಲು ಸುತ್ತುತ್ತಿದ್ದಾರೆ…..

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಮುಂದೆ ಪಕ್ಷವನ್ನು ಅಧಿಕಾರಕ್ಕೆ ತಂದು ತಾವೇ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಸಾಕಷ್ಟು ಶ್ರಮ ಪಡುತ್ತಿದ್ದಾರೆ……

ಒಂದು ಕಡೆ ನಾಗಮಂಗಲದ ಎಂಬಿಎ ಓದಿದ್ದ ಕೆಂಚೇಗೌಡರ ಮಗ ಈ ಗಲಭೆಯಲ್ಲಿ ಆರೋಪಿಯಾಗಿ ಜೈಲಿಗೆ ಸೇರಿದ್ದಾನೆ. ಅವನನ್ನು ವಿದೇಶದಲ್ಲಿ ಓದಿಸಬೇಕೆಂದು ಕನಸುಕಂಡಿದ್ದ ಕೆಂಚೇಗೌಡರು ಅವನ ಮುಂದಿನ ಭವಿಷ್ಯ, ಪಾಸ್ ಪೋರ್ಟ್, ವೀಸಾಗೆ ಈ ಬಂಧನ ಎಷ್ಟರಮಟ್ಟಿಗೆ ತೊಂದರೆ ಕೊಡಬಹುದು ಎಂಬ ಚಿಂತೆಯಲ್ಲಿ ಕೊರಗುತ್ತಿದ್ದಾರೆ……

ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಗಳು ಒಂದು ಬೃಹತ್ ಉದ್ದಿಮೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ, ಅದನ್ನು ಇನ್ನೂ ದೇಶ ವಿದೇಶಗಳಲ್ಲಿ ಬೆಳೆಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ…..

ಈ ಎಲ್ಲಾ ಹೆಸರುಗಳು ಕೇವಲ ಸಾಂಕೇತಿಕ. ನಿಮ್ಮ ಮನಸ್ಸಿನಲ್ಲಿ ಸುಳಿದಾಡುವ ಯಾವುದೇ ರಾಜಕಾರಣಿ ಅಥವಾ ಪತ್ರಕರ್ತರು ಅಥವಾ ಧಾರ್ಮಿಕ ಮುಖಂಡರು ಅಥವಾ ದೊಡ್ಡ ಹುದ್ದೆಯ ಅಧಿಕಾರಿಗಳು ಅಥವಾ ಸಿನಿಮಾ ನಟರು ಅಥವಾ ವಿಜ್ಞಾನಿಗಳು ಅಥವಾ ಸಾಹಿತಿಗಳು ಅಥವಾ ಯಾರೇ ಆಗಿರಲಿ ದೊಡ್ಡವರ ಮಕ್ಕಳು ಎಂದಿಗೂ ಕಲ್ಲು ಎಸೆಯುವುದಿಲ್ಲ. ಮಚ್ಚು ಹಿಡಿದು ಹೊಡೆದಾಡುವುದಿಲ್ಲ. ಈ ರೀತಿಯ ಉತ್ಸವಗಳ ಗಲಭೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಬಡವರು, ಮಧ್ಯಮ ವರ್ಗದವರು ಹುಚ್ಚು ಹಿಡಿದವರಂತೆ, ಅಜ್ಞಾನದಿಂದ, ತಮ್ಮ ಧರ್ಮಗಳ, ದೇವರುಗಳ ರಕ್ಷಣೆ ಮಾಡುತ್ತೇವೆ ಎನ್ನುವ ಭ್ರಮೆಗೆ ಒಳಗಾಗಿ ಜೈಲು ಪಾಲಾಗುತ್ತಿರುವುದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ……

ಅಷ್ಟು ದೊಡ್ಡ ದೊಡ್ಡ ಮಾತನಾಡುವ ಎರಡೂ ಕಡೆಯ ಧರ್ಮ ರಕ್ಷಕರು ತಮ್ಮ ಮಕ್ಕಳನ್ನು ಹೊಡೆದಾಟಗಳಿಗೆ ಕಳುಹಿಸಲಿ ನೋಡೋಣ. ಅನೇಕ ಮೇಲ್ವರ್ಗದ ಜನ ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಿ ಅಲ್ಲಿಯೇ ವಾಸಿಸುವಂತೆ ಮಾಡಿ ಈಗ ಇಲ್ಲಿ ಧರ್ಮ ರಕ್ಷಣೆಗೆ ಬಡ ಮತ್ತು ಮಧ್ಯಮ ವರ್ಗದ ಜನರನ್ನ ಉಪಯೋಗಿಸಿಕೊಂಡು ರೊಚ್ಚಿಗೆಬ್ಬಿಸಿ ಅವರನ್ನು ಜೈಲು ಪಾಲು ಮಾಡುತ್ತಿದ್ದಾರೆ……

ಈಗ ಯೋಚಿಸುವ ಸರದಿ ನಮ್ಮದು. ಇದೆಲ್ಲವೂ ಬೇಕೆ. ಒಮ್ಮೆ ಆರೋಪಿಯಾಗಿ ಕೋರ್ಟ್ ಕಟಕಟೆ ಹತ್ತಿ ಅಲ್ಲಿಂದ ಜೈಲು ಸೇರಿದ ಮೇಲೆ ನಮ್ಮ ಜೀವನದಲ್ಲಿ ಆ ದಾಖಲೆ ಶಾಶ್ವತವಾಗಿ ಉಳಿದುಬಿಡುತ್ತದೆ. ಯಾವುದೇ ಪಾಸ್ ಪೋರ್ಟ್, ವೀಸಾ ಅಥವಾ ಸರ್ಕಾರಿ ನೌಕರಿ ಪಡೆಯಬೇಕೆಂದಾಗ ಈ ಒಂದು ವಿಷಯ ಸದಾ ಅಡ್ಡಿಪಡಿಸುತ್ತದೆ. ಆಗ ಯಾವ ದೇವರು, ಧರ್ಮವು, ರಾಜಕೀಯ ನಾಯಕರು, ಧಾರ್ಮಿಕ ನಾಯಕರು ನಮ್ಮ ರಕ್ಷಣೆಗೆ ಬರುವುದಿಲ್ಲ. ಇದನ್ನು ಗಂಭೀರವಾಗಿ ಯೋಚಿಸಿ…..

ಧರ್ಮ ರಕ್ಷಣೆ ಮಾಡಲು, ಹೊಡೆದಾಡಲು ಸಿ ಟಿ ರವಿ, ಸಂತೋಷ್ ಲಾಡ್, ಆರ್. ಅಶೋಕ್, ಪ್ರತಾಪ್ ಸಿಂಹ, ದಿನೇಶ್ ಗುಂಡೂರಾವ್ ಮುಂತಾದ ಯಾರು ಬರುವುದಿಲ್ಲ. ಈಶ್ವರ್ ಕಂಡ್ರೆ ಅವರ ಮಗ, ಸತೀಶ್ ಜಾರಕಿಹೊಳಿ ಅವರ ಮಗಳು, ಮೈಸೂರಿನ ಮಹಾರಾಜ, ಯಡಿಯೂರಪ್ಪನವರ ಇನ್ನೊಬ್ಬ ಮಗ, ಕುಮಾರಸ್ವಾಮಿಯವರ ಪತ್ನಿ ಇಂತಹವರೇ ಎಂಎಲ್ಎ ಎಂಪಿಗಳಾಗುತ್ತಾರೆ. ಇವರು ಬಂದು ಹೊಡೆದಾಡಲಿ ನೋಡೋಣ…..

ದಯವಿಟ್ಟು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಿ. ರಾಜಕಾರಣಿಗಳೇ ಗಲಭೆ ಮಾಡಿಕೊಳ್ಳಲಿ. ನಾವು ನಮ್ಮ ನಮ್ಮ ಹಂತದಲ್ಲಿ ಪ್ರೀತಿ, ಸೌಹಾರ್ದತೆ, ಸಮನ್ವಯ ಮಾಡಿಕೊಂಡು ಬಾಂಧವ್ಯ ಬೆಸೆದು ನೆಮ್ಮದಿಯಾಗಿರೋಣ. ಪ್ರತಿ ಗಣೇಶ ಹಬ್ಬದಲ್ಲೋ ಅಥವಾ ಈದ್ ಮಿಲಾದ್, ರಂಜಾನ್ ಬಕ್ರೀದ್ ಸಂದರ್ಭದಲ್ಲಿ ಈ ರೀತಿ ಒಬ್ಬರಿಗೊಬ್ಬರು ಹೊಡೆದಾಟ ಮಾಡಿಕೊಂಡು ಬಡವರೇ ಜೈಲು ಪಾಲಾಗುವ ಈ ವ್ಯವಸ್ಥೆಯನ್ನು ಇನ್ನು ಮುಂದಾದರು ತಡೆಯೋಣ…..

ಅಧಿಕಾರ ಅನುಭವಿಸುವವರು, ಧರ್ಮದ, ಜಾತಿಯ ಹೆಸರೇಳಿ ಉನ್ನತ ಸ್ಥಾನ ಪಡೆಯುವವರು ಬೇಕಾದರೆ ಹೊಡೆದಾಡಿಕೊಳ್ಳಲಿ. ನಮಗ್ಯಾಕೆ ಆ ಚಿಂತೆ……

ಕೇವಲ ಬಡವರ ಮಕ್ಕಳು ಮಾತ್ರ ಗಣೇಶೋತ್ಸವದಲ್ಲಿ ಡೊಳ್ಳು ಡೋಲು ತಮಟೆ ಹೊಡೆಯುತ್ತಾ, ಡಿಜೆ ಶಬ್ಧಕ್ಕೆ ಕುಣಿಯುತ್ತಾ, ತಾವೇ ಧರ್ಮರಕ್ಷಕರಂತೆ ಆಡುತ್ತಾರೆ. ಯಾವುದೇ ಹಿರಿಯ ಅಧಿಕಾರಿಗಳ, ರಾಜಕಾರಣಿಗಳ, ಉದ್ಯಮಿಗಳ ಮಕ್ಕಳು ಅಲ್ಲಿಗೆ ಬರುವುದೇ ಇಲ್ಲ. ಇದನ್ನು ಸಹ ಗಂಭೀರವಾಗಿ ಯೋಚಿಸಿ……

ದೇಶಕ್ಕೆ ಸ್ವಾತಂತ್ರ್ಯ ಸಿಗಲು, ಜನ ಒಗ್ಗೂಡಲು ತನ್ನದೇ ಕೊಡುಗೆ ನೀಡಿದ ಈ ಉತ್ಸವಗಳು ದೇಶದ ವಿಭಜನೆಗೆ ಕಾರಣವಾಗದಿರಲಿ ಎಂದು ಎಚ್ಚರಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

14 hours ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

1 day ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

2 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago