ಕೃಷಿಯಲ್ಲೂ ಲಾಭವಿದೆ ಎಂಬ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಹೊಸಪಾಳ್ಯ

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಲಾಭ-ನಷ್ಟ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಸದಾ ನಷ್ಟದ ಬಗ್ಗೆಯೇ ಮಾತನಾಡುವ ಬದಲು ಕೃಷಿಯಲ್ಲೂ ಲಾಭವಿದೆ ಎಂಬ ಸಕಾರಾತ್ಮಕ ಚಿಂತನೆಯೊಂದಿಗೆ ರೈತರು ಮುನ್ನಡೆಯಬೇಕು ಎಂದು ಗ್ರಾಮೀಣ ಹಾಗೂ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಹೇಳಿದರು.

ತಾಲ್ಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನತೋಟದಲ್ಲಿ ಶನಿವಾರ ರೈತ ನಾಯಕ ದಿವಂಗತ ಡಾ. ಎನ್. ವೆಂಕಟರೆಡ್ಡಿ ಅವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲೂ ಇದೆ ಖುಷಿ’ ವಿಷಯದ ಕುರಿತು ಅವರು ಮಾತನಾಡಿದರು.

ಇತರೆ ಉದ್ಯಮಗಳಿಗೆ ಹೋಲಿಸಿದರೆ ಕೃಷಿಯಲ್ಲಿ ಮೂರು ಪಟ್ಟು ಆದಾಯ ಗಳಿಸುವುದು ಸಾಧ್ಯವಾಗದಿರಬಹುದು. ಆದರೆ ಕೃಷಿಯ ಮೂಲಕ ಒಂದು ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ. ಇದಕ್ಕೆ ಸೂಕ್ತ ಪೂರ್ವಸಿದ್ಧತೆ ಅಗತ್ಯ. ಹವಾಮಾನ ಬದಲಾವಣೆಯ ನೇರ ಪರಿಣಾಮಕ್ಕೆ ಮೊದಲು ತುತ್ತಾಗುತ್ತಿರುವುದು ಕೃಷಿಕರು. ಆದ್ದರಿಂದ ರೈತರು ಮೊದಲು ತಮ್ಮ ಕುಟುಂಬಕ್ಕೆ ಅಗತ್ಯವಿರುವ ಸೊಪ್ಪು, ತರಕಾರಿ ಹಾಗೂ ಧಾನ್ಯಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ನಂತರ ವಾಣಿಜ್ಯ ಬೆಳೆಗಳತ್ತ ಗಮನಹರಿಸಬೇಕು. ಇದರಿಂದ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಕೃಷಿಯಲ್ಲಿ ಹಿರಿಯರು ಅನುಸರಿಸುತ್ತಿದ್ದ ಪದ್ಧತಿಗಳು, ಆಚರಣೆಗಳು, ಋತುಮಾನಕ್ಕೆ ಅನುಗುಣವಾದ ಆಹಾರ ಪದ್ಧತಿ, ಬೆಳೆಗಳು, ಬಿತ್ತನೆ ಬೀಜಗಳ ಸಂರಕ್ಷಣೆ ಹಾಗೂ ಜನಪದ ಹಾಡುಗಳ ಮಹತ್ವದ ಕುರಿತು ರೈತರೊಂದಿಗೆ ಮಾಹಿತಿ ಹಂಚಿಕೊಂಡರು.

### ಸಂಘಟನೆಗಳು ಹೊಸ ಹಾದಿಯಲ್ಲಿ ಸಾಗಲಿ

‘ಸಂಘಟನೆಗಳಿಗೆ ಬೇಕಿದೆ ಹೊಸ ಹಾದಿ’ ವಿಷಯದ ಕುರಿತು ಮಾತನಾಡಿದ ಐಟಿ ಉದ್ಯೋಗಿ ಜಿ. ರಾಜಶೇಖರ್, ಕೃಷಿ ಭೂಮಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಈಗ ಮೊಬೈಲ್‌ನಲ್ಲೇ ಪಡೆಯಬಹುದು. ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯೂ ಇ-ಕಚೇರಿ ವ್ಯವಸ್ಥೆಯ ಮೂಲಕ ನಡೆಯುತ್ತಿದೆ. ಆದರೂ ಸೂಕ್ತ ಮಾಹಿತಿ ಇಲ್ಲದ ಕಾರಣ ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಹೇಳಿದರು.

ರೈತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಇಲಾಖೆಗಳ ಯೋಜನೆಗಳು ಮತ್ತು ಅವುಗಳ ಕಾರ್ಯವಿಧಾನಗಳನ್ನು ಅರಿತುಕೊಳ್ಳಬೇಕು. ಇದರಿಂದ ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಬಹುದು. ಸಂಘಟನೆಗಳು ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗದೆ, ಹೊಸ ವಿಚಾರಗಳನ್ನು ತಿಳಿದುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಸಂಘಟನೆಗಳು ಬೆಳವಣಿಗೆ ಹೊಂದಲು ಸಾಧ್ಯ ಎಂದರು.

### ಹೋರಾಟಗಳಿಗೆ ಅಧ್ಯಯನ, ಹೊಸ ತಂತ್ರಗಳು ಅಗತ್ಯ

ಪತ್ರಕರ್ತ ನಟರಾಜ ನಾಗಸಂದ್ರ ಮಾತನಾಡಿ, ಸಂಘಟನೆಗಳನ್ನು ಮುನ್ನಡೆಸುವ ಹಾಗೂ ಹೋರಾಟಗಳ ನೇತೃತ್ವ ವಹಿಸುವವರು ಕನಿಷ್ಠ ಮಟ್ಟದಲ್ಲಾದರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು. ಇಲ್ಲವಾದರೆ ಹೋರಾಟಗಳು ಕೆಲವೇ ವ್ಯಕ್ತಿಗಳ ಮೇಲೆ ಅಥವಾ ಇತರರ ನೆರವಿನ ಮೇಲೆ ಅವಲಂಬಿತವಾಗುತ್ತವೆ. ಇದರಿಂದ ಹೋರಾಟದ ಮುಂಚೂಣಿಯಲ್ಲಿರುವವರು ಆರ್ಥಿಕ ಒತ್ತಡಕ್ಕೆ ಒಳಗಾಗಿ ತಮ್ಮ ಉದ್ದೇಶಗಳಿಂದ ದೂರವಾಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.

ಸಂಘಟನೆಯನ್ನು ನಂಬಿ ಬರುವವರಿಗೆ ಸರ್ಕಾರಿ ಕಚೇರಿಗಳು ಅಥವಾ ಪೊಲೀಸ್ ಠಾಣೆಗಳಲ್ಲಿ ಸಮಸ್ಯೆಗಳು ಎದುರಾದಾಗ ಮುಖಂಡರು ಸ್ಪಂದಿಸಬೇಕು. ನ್ಯಾಯಯುತ ಕೆಲಸಗಳನ್ನು ಮಾಡಿಸಿಕೊಡಲು ಮುಂದಾಗಬೇಕು. ಇಲ್ಲವಾದರೆ ಸಂಘಟನೆಯನ್ನು ದೀರ್ಘಕಾಲ ಮುನ್ನಡೆಸುವುದು ಹಾಗೂ ಜನರ ವಿಶ್ವಾಸ ಗಳಿಸುವುದು ಕಷ್ಟವಾಗುತ್ತದೆ ಎಂದರು.

ಹೋರಾಟಗಳ ನೇತೃತ್ವ ವಹಿಸುವವರು ರಾಜ್ಯ ಹಾಗೂ ದೇಶದ ಆರ್ಥಿಕ ಬದಲಾವಣೆಗಳ ಜೊತೆಗೆ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಬಗ್ಗೆಯೂ ಆಳವಾದ ಅಧ್ಯಯನ ನಡೆಸಬೇಕು. ನಿರಂತರ ಓದು ಮತ್ತು ಅಧ್ಯಯನ ಹೋರಾಟಗಾರರಿಗೆ ಅತ್ಯಗತ್ಯ. ಹೋರಾಟದ ಸಂದರ್ಭದಲ್ಲಿ ಬಳಸುವ ಭಾಷೆ ಹಾಗೂ ಘೋಷಣೆಗಳು ತೀಕ್ಷ್ಣವಾಗಿಯೂ ಜನರನ್ನು ಆಕರ್ಷಿಸುವಂತೆಯೂ ಇರಬೇಕು ಎಂದು ಹೇಳಿದರು.

ಹಳೆಯ ಮಾದರಿಯ ಹೋರಾಟಗಳ ಜೊತೆಗೆ ಹೊಸ ಪೀಳಿಗೆಯ ಹೋರಾಟದ ವಿಧಾನಗಳನ್ನೂ ಅಳವಡಿಸಿಕೊಳ್ಳಬೇಕು. ವೇಗದ ಸಂವಹನ ವ್ಯವಸ್ಥೆ ಹಾಗೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರು ಹೋರಾಟಗಳ ಫಲಿತಾಂಶವನ್ನು ಶೀಘ್ರವಾಗಿ ನಿರೀಕ್ಷಿಸುತ್ತಾರೆ. ಇದಕ್ಕೆ ಸಂಘಟನೆಗಳು ಸಿದ್ಧವಾಗದಿದ್ದರೆ ಹೋರಾಟಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಬಹುದು. ದೇಶ ಸೇರಿದಂತೆ ಜಗತ್ತಿನ ವಿವಿಧೆಡೆ ಇತ್ತೀಚೆಗೆ ನಡೆದ ಜೆನ್‌ ಝೀ ಪ್ರತಿಭಟನೆಗಳನ್ನು ಜನಪರ ಸಂಘಟನೆಗಳು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ಹೋರಾಟಗಳನ್ನು ದಿಕ್ಕುತಪ್ಪಿಸಲು ಅನುಸರಿಸುತ್ತಿದ್ದ ಹಳೆಯ ವಿಧಾನಗಳ ಬದಲಿಗೆ, ಹೋರಾಟದ ಮುಂಚೂಣಿಯಲ್ಲಿರುವವರ ವೈಯಕ್ತಿಕ ತೇಜೋವಧೆ ಹಾಗೂ ಧಾರ್ಮಿಕ ಬಣ್ಣ ಬಳಿಯುವ ಮೂಲಕ ಹೋರಾಟದ ತೀವ್ರತೆ ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಹೋರಾಟಗಾರರು ಎಚ್ಚರಿಕೆ ವಹಿಸಬೇಕು. ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯ್ಕ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡರಾದ ಕೆ. ಸುಲೋಚನಮ್ಮ, ಮುತ್ತೇಗೌಡ ಹಾಗೂ ಡಾ. ವಿಷ್ಣುವರ್ಧನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!