Categories: ಲೇಖನ

ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು…..

ಕಾಶ್ಮೀರ ಮತ್ತು ಕನ್ಯಾಕುಮಾರಿ……

ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು…..

ಕನ್ಯಾಕುಮಾರಿ,
ಧ್ಯಾನ,
ಸ್ವಾಮಿ ವಿವೇಕಾನಂದ,
ಕಾಶ್ಮೀರ,
ಹಿಮರಾಶಿಯ ಸೌಂದರ್ಯ,
ಆಧುನಿಕತೆಯ ಒಳ ಹೊಡೆತಗಳು…..

” ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ ” ಉಪಾಸನೆ ಸಿನಿಮಾದ ಹಾಡಿದು……

ಕನ್ಯಾಕುಮಾರಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಇಷ್ಟವಾದ ಸ್ಥಳವಿದು. ದಕ್ಷಿಣದ ತುತ್ತ ತುದಿಯ ಈ ಸ್ಥಳದಲ್ಲಿ ಆಗಿನ ಕಾಲಕ್ಕೇ ವಿವೇಕಾನಂದರು ಸಮುದ್ರದಲ್ಲಿದ್ದ ಶಿಲೆಯ ಮೇಲೆ ಈಜಿನ ಮೂಲಕ ತಲುಪಿ ಧ್ಯಾನಾಸ್ಥರಾಗುತ್ತಿದ್ದರು. ಈಗಲೂ ಅದನ್ನು ವಿವೇಕಾನಂದ ರಾಕ್ ಎಂದೇ ಕರೆಯಲಾಗುತ್ತದೆ.
ಈಗ ಅಲ್ಲಿಗೆ ಹೋಗಿ ಬರಲು ಸಣ್ಣ ದೋಣಿಗಳ ವ್ಯವಸ್ಥೆ ಇದೆ ಮತ್ತು ಅಲ್ಲಿ ಧ್ಯಾನ ಮಂದಿರ ನಿರ್ಮಿಸಿ ಸುಸಜ್ಜಿತವಾಗಿ ಇಡಲಾಗಿದೆ…….

ಧ್ಯಾನ, …..
ನಿಜಕ್ಕೂ ಜ್ಞಾನದ ನಂತರ ಧ್ಯಾನವೆಂಬುದು ದೇಹ ಮನಸ್ಸುಗಳ ನಿಯಂತ್ರಣದ ಅತ್ಯುತ್ತಮ ಮಾರ್ಗ. ಅದರಲ್ಲೂ ಬುದ್ಧ ಪ್ರಜ್ಞೆಯ ಧ್ಯಾನ ಅತ್ಯಂತ ಉತ್ಕೃಷ್ಟ ಮತ್ತು ಧ್ಯಾನದ ಅಂತಿಮ ಹಂತ ಎಂದೇ ಕರೆಯಬಹುದು. ಅದು ಸಾಮಾನ್ಯವಾಗಿ ಎಲ್ಲರೂ ಮಾಡುವ ಯೋಗಾಭ್ಯಾಸದ ಧ್ಯಾನವಾಗಲಿ ಅಥವಾ ಸಮಯ ಸಿಕ್ಕಾಗ ಮೌನದಿಂದ ಧ್ಯಾನಾಸಕ್ತರಾಗುವುದಾಗಲಿ ಅಥವಾ ಪ್ರತಿನಿತ್ಯ ದೈವಭಕ್ತಿಯ ಓಂ ಧ್ಯಾನವಾಗಲಿ, ಅದು ಧ್ಯಾನದ ಪ್ರಾರಂಭಿಕ ಅಂತ ಮಾತ್ರ. ನಿಜವಾದ ಧ್ಯಾನ ದೀರ್ಘಕಾಲ, ಅನೇಕ ವರ್ಷಗಳ ನಿರಂತರ ಪ್ರಯತ್ನ ಮತ್ತು ಸುಧೀರ್ಘ ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅದರಲ್ಲೂ ಪ್ರಶಾಂತ ಸ್ಥಳದಲ್ಲಿ ಸಮುದ್ರದ ನಡವಿನಂಚಿನಲ್ಲಿ ಏಕಾಂಗಿಯಾಗಿ ಧ್ಯಾನ ಮಾಡುವುದು ನಿಜಕ್ಕೂ ದೇಹ ಮನಸ್ಸು ಪುನಶ್ಚೇತನಗೊಳ್ಳುವುದಕ್ಕೆ ಖಂಡಿತವಾಗಲೂ ಸಹಕಾರಿಯಾಗುತ್ತದೆ. ಆಗ ಮಾತ್ರ ಧ್ಯಾನದ ನಿಜವಾದ ಫಲಿತಾಂಶ ಪಡೆಯಬಹುದು. ಅದು ಸಾಧ್ಯವಿಲ್ಲದವರು ಕನಿಷ್ಠ ಮನೆಯಲ್ಲಾದರೂ ಸಮಯ ಸಿಕ್ಕಾಗ ಎಷ್ಟು ಸಾಧ್ಯವೋ ಅಷ್ಟು ದೀರ್ಘಕಾಲ ನಿರಂತರವಾಗಿ ಧ್ಯಾನಾಸಕ್ತರಾಗುವುದು ನಮ್ಮ ಬದುಕಿನ ಗುಣಮಟ್ಟವನ್ನು ಖಂಡಿತ ಹೆಚ್ಚಿಸುತ್ತದೆ. ಧ್ಯಾನವನ್ನೇ ಕುರಿತು ಈಗಾಗಲೇ ಕೆಲವು ಬಾರಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ…….

ಇನ್ನೂ ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರನ್ನು ಕುರಿತು ಹೆಚ್ಚಿಗೆ ಹೇಳುವುದೇನು ಇಲ್ಲ. ಈಗಾಗಲೇ ಎಲ್ಲರಿಗೂ ಸಾಕಷ್ಟು ತಿಳಿದಿದೆ. ಅವರೊಬ್ಬ ಧೀಮಂತ ಸನ್ಯಾಸಿ. ಈ ನೆಲದ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ವಾತಾವರಣವನ್ನು ತುಂಬಾ ಚೆನ್ನಾಗಿ ಗ್ರಹಿಸಿದ್ದರು. ಈ ಧರ್ಮದ ಅಸಮಾನತೆ, ಶೋಷಣೆಗಳನ್ನು ಸಹ ಅದೇ ಧ್ವನಿಯಲ್ಲಿ ಖಂಡಿಸುತ್ತಿದ್ದರು. ಈ ಕ್ಷಣದವರೆಗೂ ಭಾರತದ ಇತಿಹಾಸದಲ್ಲಿ ಯುವಕರ ಐಕಾನ್ ಆಗಿ, ಅನೇಕ ಸಮಾಜ ಸೇವಾ ಸಂಸ್ಥೆಗಳ ಶೀರ್ಷಿಕೆಯಾಗಿ, ಶಿಕ್ಷಣ ಸಂಸ್ಥೆಗಳ ಸ್ಪೂರ್ತಿಯಾಗಿ, ಬೆಳಗಿನ ಶುಭ ಸಂದೇಶಗಳ ರಾಯಭಾರಿಯಾಗಿ ಸ್ವಾಮಿ ವಿವೇಕಾನಂದರು ಸದಾ ಮುಂಚೂಣಿಯಲ್ಲಿದ್ದಾರೆ. ಅವರು ಧ್ಯಾನಾಸಕ್ತರಾದ ಕನ್ಯಾಕುಮಾರಿಯ ಆ ಬಂಡೆಗಲ್ಲು ಇಂದು ಪ್ರಖ್ಯಾತ ಪ್ರವಾಸಿ ಸ್ಥಳವಾಗಿ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಮತ್ತೊಮ್ಮೆ ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ……..

ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ……

ಕೆಲವು ಯೂರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ಒಂದೆರಡು ದೇಶಗಳು, ಭಾರತದ ಅನೇಕ ರಾಜ್ಯಗಳು, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಏಷ್ಯಾ ಮುಂತಾದ ವಿಶ್ವದ ಭೂ ಪ್ರದೇಶಗಳ ಇಂದಿನ ಜನಜೀವನದ ಬಗ್ಗೆ ಒಂದಷ್ಟು ಸಣ್ಣ ಮಾಹಿತಿ ಸಂಗ್ರಹಿಸಿದ್ದೇನೆ. ಕೆಲವು ವಿದೇಶಿ ಗೆಳೆಯರ ಜೊತೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಆಗಾಗ ಚರ್ಚಿಸುತ್ತಿರುತ್ತೇನೆ. ಇತ್ತಿಚೆಗೆ ಭಾರತ ದೇಶದ ಉತ್ತರದ ತುತ್ತ ತುದಿ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಪ್ರವಾಸ ಮಾಡಿದ್ದೇನೆ.

ಸುಮಾರು ಅರ್ಧ ಶತಮಾನಗಳ ಕಾಲ ಈ ನೆಲದಲ್ಲಿ ಬದುಕಿರುವ ನಾನು ಸೂಕ್ಷ್ಮವಾಗಿ ನನ್ನ ಅರಿವಿನ ಮಿತಿಯಲ್ಲಿ ವಿಮರ್ಶೆಗೊಳಪಡಿಸಿದಾಗ….

ಮುಖ್ಯವಾಗಿ ಸಮೂಹ ಸಂಪರ್ಕ ಕ್ರಾಂತಿಯ ಫಲವಾಗಿ ಇಡೀ ವಿಶ್ವದ ಸಾಮಾನ್ಯ ಜನರ ಆಹಾರ, ಉಡುಗೆ, ತೊಡುಗೆ, ರಸ್ತೆಗಳು, ಕಟ್ಟಡಗಳು, ವಾಹನಗಳು, ಪರಿಸರ ಮಾಲಿನ್ಯ, ನಗರೀಕರಣದ ತ್ಯಾಜ್ಯ, ಮನಸ್ಥಿತಿಗಳು ಜೊತೆಗೆ ಮತ್ತೊಂದಿಷ್ಟು ಸಮಾನ ವಿಷಯಗಳು ಎಲ್ಲವೂ ಬಹುತೇಕ ಒಂದೇ ರೀತಿಯ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ತಮ್ಮ ಮೂಲ ಸ್ವರೂಪದ ಬದಲಾವಣೆಯ ದಿಕ್ಕು ಏಕೀಭವನ ಹೊಂದುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇಡೀ ವಿಶ್ವದ ಸ್ಥಳೀಯ ಆಹಾರ ಪದ್ದತಿಗಳು ಭಿನ್ನವಾಗಿದ್ದರು, ಈಗಲೂ ಪ್ರಮುಖ ಆಹಾರ ಅದೇ ಆಗಿದ್ದರು, ಪಾಶ್ಚಾತ್ಯ ದೇಶಗಳ ಪೀಜಾ ಬರ್ಗರ್, ಚೀನಾ ಶೈಲಿಯ ಊಟ ಮುಂತಾದ ಕೆಲವು ವಿಶಿಷ್ಟ ಖಾದ್ಯಗಳು ಕಾಂಟಿನೆಂಟಲ್ ಪುಡ್ ಹೆಸರಿನಲ್ಲಿ ನಗರ ಪಟ್ಟಣಗಳನ್ನು ದಾಟಿ ಚಿಕ್ಕ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಕೆ ಎಫ್ ಸಿ, ಮ್ಯಾಕ್ ಡೊನಾಲ್ಡ್, ನೂಡಲ್ಸ್, ಬ್ರೆಡ್ ಆಮ್ಲೆಟ್, ಕೆಲವು ಐಸ್ ಕ್ರೀಮ್ ಗಳು ಇನ್ನೂ ಅನೇಕ ಪದಾರ್ಥಗಳ ಬ್ರಾಂಡೆಡ್ ಅಂಗಡಿಗಳು ಎಲ್ಲಾ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಕಾಣಿಸಿಕೊಂಡು ಎಲ್ಲಾ ಊರು ಪ್ರದೇಶಗಲ್ಲಿ ಮಾರುಕಟ್ಟೆ ಮಾಲುಗಳು ಒಂದೇ ರೀತಿಯಲ್ಲಿ ಕಾಣತೊಡಗಿದೆ.

ಆಫ್ರಿಕಾದ ಒಂದು ಸಣ್ಣ ಪ್ರದೇಶವೇ ಇರಲಿ, ಭಾರತದ ಕೊಡಗಿನ ಸಣ್ಣ ಗ್ರಾಮವೇ ಇರಲಿ, ನ್ಯೂಜಿಲೆಂಡಿನ ಹಿಮಾಚ್ಛಾದಿತ ಪ್ರದೇಶವೇ ಇರಲಿ, ಚೀನಾದ ಅತಿ ಹಿಂದುಳಿದ ಪ್ರದೇಶವೇ ಇರಲಿ, ನ್ಯೂಯಾರ್ಕ್, ಲಂಡನ್, ಸಿಡ್ನಿ, ಸಿಯೋಲ್, ಬ್ಯೂನಸ್ ಐರಿಸ್ ಹೀಗೆ ಯಾವುದೇ ಪ್ರದೇಶದ ಎಲ್ಲಾ ಮಧ್ಯಮ ವರ್ಗದ ಜನರ ವೇಷಭೂಷಣಗಳಲ್ಲಿ ಅಂತಹ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಜೀನ್ಸ್, ಶಾರ್ಟ್ಸ್, ಶೂಸ್, ಟೀಶರ್ಟ್ಸ್, ಕಲರ್ಸ್, ಲೆಗ್ಗಿನ್ಸ್ ಮುಂತಾದ ಎಲ್ಲಾ ರೀತಿಯ ಡಿಸೈನುಗಳು ಎಲ್ಲೆಲ್ಲೂ ಒಂದೇ ರೀತಿ ಕಾಣುತ್ತದೆ.

ರಸ್ತೆ, ಕಟ್ಟಡ, ಮಾರುಕಟ್ಟೆಗಳ ವಿನ್ಯಾಸ, ವಸ್ತುಗಳ ಜೋಡಣೆ, ನಾಮ ಫಲಕಗಳು ಇತರ ಅನೇಕ ಸ್ವರೂಪಗಳು ಇಡೀ ವಿಶ್ವದಲ್ಲೇ ಒಂದೇ ರೀತಿಯಲ್ಲಿ ಕಾಣುತ್ತದೆ. ಗುಣಮಟ್ಟದಲ್ಲಿ ಮಾತ್ರ ಒಂದಷ್ಟು ವ್ಯತ್ಯಾಸ ಇರುತ್ತದೆ.

ಯೂರೋಪ್, ಆಸ್ಟ್ರೇಲಿಯಾ, ಅಮೆರಿಕ, ಜಪಾನ್, ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪುರ, ಟರ್ಕಿ, ರಷ್ಯಾ ಮುಂತಾದ ದೇಶಗಳಲ್ಲಿ ಶ್ರೀಮಂತಿಕೆ ಮತ್ತು ಜನಸಂಖ್ಯೆಯ ಕಡಿಮೆ ಒತ್ತಡದ ಕಾರಣದಿಂದ ಒಂದಷ್ಟು ಕೊಳಚೆ ಪ್ರದೇಶಗಳು ಕಡಿಮೆ ಇದ್ದು ಸುಂದರ ಮೇಲ್ಮೈ ವಾತಾವರಣ ಇರಬಹುದು. ಉಳಿದೆಲ್ಲಾ ದೇಶಗಳು ಜನಸಂಖ್ಯೆಯ ಒತ್ತಡ ಮತ್ತು ಅದರಿಂದಾಗಿ ಹರಡುತ್ತಿರುವ ತ್ಯಾಜ್ಯ ನಿಯಂತ್ರಿಸಲಾಗದೆ ತುಂಬಾ ಹದಗೆಟ್ಟ ಪರಿಸ್ಥಿತಿ ಕಾಣುತ್ತಿದ್ದೇವೆ. ಪ್ಲ್ಯಾಸ್ಟಿಕ್ ಕಸ ಎಲ್ಲಾ ಪ್ರದೇಶಗಳಲ್ಲಿ ಒಂದೇ ರೀತಿಯಲ್ಲಿ ಕಾಣುತ್ತಿದೆ.

ಪ್ರವಾಸೋದ್ಯಮ ಮತ್ತು ವಸತಿ ಪ್ರದೇಶಗಳು ಸಹ ಒಂದೇ ರೀತಿ ಇರುತ್ತದೆ. ಅಪಾರ್ಟ್ಮೆಂಟ್ ಸಂಸ್ಕೃತಿ, ರಿಯಲ್ ಎಸ್ಟೇಟ್ ಉದ್ಯಮ ಎಲ್ಲಾ ಸರ್ವವ್ಯಾಪಿಯಾಗಿ ಯಾವ ಪ್ರದೇಶವನ್ನು ಬಿಟ್ಟಿಲ್ಲ.

ಇದನ್ನು ಈಗ ಪ್ರಸ್ತಾಪಿಸಲು ಕಾರಣ ಬೆಂಗಳೂರು, ದೆಹಲಿ, ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರದವರೆಗೂ ಹೋಟೆಲ್, ಡಾಬ, ಮೆಡಿಕಲ್ ಸ್ಟೋರ್, ಮೆಡಿಕಲ್ ಲ್ಯಾಬ್, ಬಟ್ಟೆ ಅಂಗಡಿ, ಆಟೋ, ಕಾರು, ರೈಲು, ಜನರ ವೇಷಭೂಷಣ ಎಲ್ಲವೂ ಒಂದೇ ರೀತಿಯಲ್ಲಿ ಕಂಡುಬರುತ್ತಿದೆ. ನಾವು ಅತ್ಯಂತ ಸುಂದರ ಎಂದು ಭಾವಿಸಲಾದ ಜಮ್ಮು ಕಾಶ್ಮೀರವೂ ಸಹ ತನ್ನ ತನವನ್ನು ಕಳೆದುಕೊಳ್ಳುತ್ತಿದೆ.

ಅತಿಯಾದ ಮಾರುಕಟ್ಟೆ ಪ್ರದೇಶಗಳು, ವಾಹನಗಳು, ವಿವಿಧ ಬ್ರಾಂಡಿನ ಬಟ್ಟೆ ಹೋಟೆಲುಗಳು, ಪ್ರವಾಸೋದ್ಯಮ ಏಜೆಂಟರಗಳ ದೊಡ್ಡ ವ್ಯವಹಾರ ಎಲ್ಲವೂ ಪ್ರಸಿದ್ಧ ಯಾತ್ರಾಸ್ಥಳಗಳ ಮಾದರಿಯಲ್ಲೇ ನಡೆಯುತ್ತಿದೆ. ರಾಜಸ್ಥಾನ – ಮೈಸೂರು – ಪೂರ್ವದ ರಾಜ್ಯಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುತ್ತದೆ. ಹೋಮ್ ಸ್ಟೇ – ಸರ್ವೀಸ್ ಅಪಾರ್ಟ್ಮೆಂಟ್ ಗಳು ಒಂದೇ ರೀತಿಯ ಬೆಲೆ ಮತ್ತು ಸೇವೆ ನೀಡುತ್ತವೆ.

ಈ ರೀತಿಯ ಅಭಿವೃದ್ಧಿಯ ಮಾದರಿಗಳು ಮೂಲ ಸಂಸ್ಕೃತಿಯನ್ನು ಆಪೋಷನ ತೆಗೆದುಕೊಳ್ಳುವ ಕ್ರಿಯೆಯನ್ನು ವಿಶ್ವದಾದ್ಯಂತ ಗಮನಿಸಬಹುದು. ‌ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರಿಯೆ ತುಂಬಾ ನಿಧಾನಗತಿಯಲ್ಲಿದ್ದರೆ ಭಾರತದಲ್ಲಿ ಅತ್ಯಂತ ವೇಗವಾಗಿ ಆಗುತ್ತಿದೆ. ವೈವಿಧ್ಯತೆಯ ಮನೋ ಭೂಮಿಕೆ ಮರೆಯಾಗುತ್ತಿದೆ.

ಭೂಲೋಕದ ಸ್ವರ್ಗ ಎಂದು ಬಣ್ಣಿಸಲಾಗುವ ಕಾಶ್ಮೀರ ಕಣಿವೆಯಲ್ಲಿ ಸುತ್ತಾಡುವಾಗ ಪ್ರಾಕೃತಿಕ ಸೌಂದರ್ಯ ಹೆಚ್ಚು ಕಡಿಮೆ ಮೂಲ‌ ಸ್ವರೂಪವನ್ನು ಉಳಿಸಿಕೊಂಡಿದೆ. ಆದರೆ ಮನುಷ್ಯ ಸಮಾಜ ಮತ್ತು ಕೃತಕ ಕಟ್ಟಡಗಳು ಇತರೆ ಪ್ರದೇಶಗಳಿಗಿಂತ ಭಿನ್ನವಾಗಿಲ್ಲ.

ಇಲ್ಲಿನ ಜನರು, ಸೈನಿಕರು, ಮಕ್ಕಳು, ಹೆಂಗಸರು ಹೀಗೆ ಎಲ್ಲರನ್ನೂ ಅವರ ಮನಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಾಗಿದ್ದೇನೆ. ಮಳೆ ಚಳಿ ಗಾಳಿಯ ಸಂಪೂರ್ಣ ಶೀತವಲಯದ ವಾತಾವರಣದಲ್ಲಿ, ನೆಟ್ ವರ್ಕ್ ಸಮಸ್ಯೆಯ ಮಧ್ಯೆ ಬದುಕಿನ ಸವಿಯನ್ನು ಗೆಳೆಯರೊಂದಿಗೆ ಸವಿಯುತ್ತಾ, ಇಲ್ಲಿನ ಭದ್ರತಾ ವ್ಯವಸ್ಥೆಯನ್ನು ನೋಡಿ ಒಳಗೆ ಮೂಡುವ ಸಣ್ಣ ಭಯವನ್ನು ಹಾಸ್ಯವಾಗಿ ಕಲ್ಪಿಸಿಕೊಂಡು ಹೊಟ್ಟೆ ತುಂಬಾ ನಗುತ್ತಾ ಪ್ರವಾಸ ಮಾಡಿದ್ದೇನೆ. ನನ್ನ ಬದುಕಿನ ‌ಪಯಣವೇ ಜನರ ಜೀವನಮಟ್ಟ ಸುಧಾರಣೆಯ ಮನಸ್ಸುಗಳ ಅಂತರಂಗದ ಚಳವಳಿ. ಅದರಲ್ಲಿ ಈ ಪ್ರವಾಸವು ಒಂದು ಭಾಗ ಮಾತ್ರ. ಜೊತೆಗೆ ನಿಮ್ಮೊಂದಿಗೆ ಸಂಪರ್ಕ ನಿರಂತರ………

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ ಎಚ್.ಕೆ

Ramesh Babu

Journalist

Recent Posts

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ, ಮತ್ತೊಂದು ಮಗುವಿಗೆ ಗಂಭೀರ ಗಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಸಮೀಪ ಶುಕ್ರವಾರ ಸಂಜೆ ಸುಮಾರು 6:15ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

19 hours ago

ಬಂಗಾರದ ಕಿವಿ ಓಲೆಗಳಿಗಾಗಿ 80 ವರ್ಷದ ವೃದ್ಧೆಯ ಭೀಕರ ಕೊಲೆ

ಚಿಕ್ಕಬಳ್ಳಾಪುರ: ಬಂಗಾರದ ಕಿವಿ ಓಲೆಗಳಿಗಾಗಿ 80 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ, ಕಿವಿಗಳನ್ನು ಕತ್ತರಿಸಿ ಆಭರಣ ಕಳವು ಮಾಡಿರುವ ಅಮಾನುಷ…

21 hours ago

ಹೊರ ರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ಗಾಂಜಾ ಮಾರಾಟ: ಇಬ್ಬರ ಬಂಧನ, 3.61 ಕೆಜಿ ಗಾಂಜಾ ವಶ

ದೇವನಹಳ್ಳಿ: ಹೊರ ರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿ, ಅವರಿಂದ 3…

22 hours ago

ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2026-27ನೇ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿರುವ ಪ್ರತಿ ಕೈಮಗ್ಗ, ವಿದ್ಯುತ್…

22 hours ago

ಗಂಧದ ಮರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ: ₹30 ಲಕ್ಷಕ್ಕೂ ಅಧಿಕ ಮೌಲ್ಯದ 254 ಕೆಜಿ ತೂಕದ ಗಂಧದ ತುಂಡುಗಳ ವಶ

ದೊಡ್ಡಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಗಂಧದ ಮರ ಕಳ್ಳತನ ಪ್ರಕರಣವನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

1 day ago

ಅಂತಾರಾಜ್ಯ ಮನೆಗಳ್ಳರ ಬಂಧನ: ₹11.42 ಲಕ್ಷ ಮೌಲ್ಯದ ಕಳವು ಮಾಲು ವಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಬಿಹಾರ ಮೂಲದ…

1 day ago