ಬೆಳಗಾವಿ: 4.21 ಲಕ್ಷ ರೂ.ಮೌಲ್ಯದ ಅನಧಿಕೃತ ಜೈವಿಕ ಉತ್ತೇಜಕಗಳ ಜಪ್ತಿ

ನೋಂದಣಿ ಪರವಾನಗಿಯಿಲ್ಲದ ಹಾಗೂ ಅನಧಿಕೃತ ಜೈವಿಕ ಉತ್ತೇಜಕಗಳನ್ನು (Biostimulation products) ದಾಸ್ತಾನು ಇರಿಸಿಕೊಂಡಿದ್ದ ಮಳಿಗೆಯ ಮೇಲೆ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ ಮಾಲು ಜಪ್ತಿ ಮಾಡಿದ್ದಾರೆ.

ಬೆಳಗಾವಿಯ ಪವನ್ ಅಗ್ರೋ ಏಜೆನ್ಸೀಸ್ ಎಂಬ ಚಿಲ್ಲರೆ ರಸಗೊಬ್ಬರ ಹಾಗೂ ಕೃಷಿ ಪರಿಕರ ಮಾರಾಟ ಮಳಿಗೆಯಲ್ಲಿ ಅನಧಿಕೃತ ಜೈವಿಕ ಕೀಟನಾಶಕಗಳನ್ನು ದಾಸ್ತಾನು ಇರಿಸಲಾಗಿತ್ತು.

ಎಫ್‌ಸಿಒಯ(ಸಾರ ಗೊಬ್ಬರ ನಿಯಂತ್ರಣ ಆದೇಶ) ಸೆಕ್ಷನ್ 7,8 ಹಾಗೂ 20(ಸಿ) ಉಲ್ಲಂಘಿಸಿ ಮಾರಾಟ ಮಾಡಲು ಮುಂದಾಗಿದ್ದ ಮಳಿಗೆಯಿಂದ ಅಂದಾಜು 4.21 ಲಕ್ಷ ರೂ. ಮೌಲ್ಯದ  140 ಲೀ. ಜೈವಿಕ ಉತ್ತೇಜಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ (ಜಾಗೃತ ದಳ) ಕಚೇರಿಯ ಸಹಾಯ ಕೃಷಿ ನಿರ್ದೇಶಕರಾದ ಅಮರ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ, ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಕೃಷಿ‌ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರ ನಿರ್ದೇಶನದ ಹಿನ್ನೆಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಕಲಿ ಹಾಗೂ ಅನಧಿಕೃತ ಕೀಟನಾಶಕ, ರಸಗೊಬ್ಬರ ಹಾಗೂ ಜೈವಿಕ ಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

2026-27ನೇ ಸಾಲಿನ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 10.32 ಕೋಟಿ ರೂ. ಮೌಲ್ಯದ ಬಿತ್ತನೆ ಬೀಜ (330 ಕ್ವಿಂಟಾಲ್), ರಸಗೊಬ್ಬರ (1,114 ಮೆ.ಟನ್) ಹಾಗೂ ಕೀಟನಾಶಕ (9,005 ಲೀ) ವಶಪಡಿಸಿಕೊಂಡು 273 ಪ್ರಕರಣಗಳನ್ನು ದಾಖಲಿಸಿದೆ.

ಇವುಗಳ ಪೈಕಿ 58 ಪ್ರಕರಣಗಳಲ್ಲಿ ಅಂತಿಮ ತೀರ್ಪು ಬಂದಿದ್ದು, 18.23 ಲಕ್ಷ ರೂ. ದಂಡ ವಿಧಿಸಲಾಗಿದೆ.
ಅಕ್ರಮವಾಗಿ ಜೈವಿಕ ಉತ್ಪನ್ನ ಹೊಂದಿದ ಆರೋಪದಡಿ 7 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಒಟ್ಟು 46 ಪರವಾನಗಿಗಳನ್ನು ಅಮಾನತು ಮಾಡಲಾಗಿದ್ದು, 3 ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಜೊತೆಗೆ ಸ್ವೀಕೃತವಾದ ದೂರುಗಳ ಪೈಕಿ 37 ದೂರುಗಳನ್ನು ಇತ್ಯರ್ಥಪಡಿಸಿ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!